ADVERTISEMENT

ಮಂಡ್ಯ: ಶಿವಧ್ಯಾನದಲ್ಲಿ ಮುಳುಗಿದ ಭಕ್ತ ಸಮೂಹ

ಜಿಲ್ಲೆಯ ವಿವಿಧೆಡೆ ವಿಜೃಂಭಣೆಯಿಂದ ಮಹಾಶಿವರಾತ್ರಿ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 14:09 IST
Last Updated 26 ಫೆಬ್ರುವರಿ 2025, 14:09 IST
ಮಂಡ್ಯ ನಗರದ ಪೇಟೆಬೀದಿಯ ಸಕಲೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು
ಮಂಡ್ಯ ನಗರದ ಪೇಟೆಬೀದಿಯ ಸಕಲೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು   

ಮಂಡ್ಯ: ಮಹಾಶಿವರಾತ್ರಿ ಅಂಗವಾಗಿ ಜಿಲ್ಲೆಯ ಶಿವನ ದೇವಾಲಯ, ಶನಿ ಮಹಾತ್ಮಾ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬುಧವಾರ ಶ್ರದ್ಧಾ, ಭಕ್ತಿಯಿಂದ ಜಾಗರಣೆ ನಡೆಯಿತು. ಭಕ್ತರು ಶಿವನ ಧ್ಯಾನದಲ್ಲಿ ಮಿಂದೆದ್ದರು.

ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ, ಜಾಗರಣೆ ಸಹಿತ ಪೂಜಾ ಕೈಂಕರ್ಯಗಳು ನಡೆದರೆ, ಜಿಲ್ಲೆಯ ಶನೇಶ್ವರ ದೇವಾಲಯಗಳಲ್ಲಿಯೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಹಿಳೆಯರು ಜಾಗರಣೆ ವೃತಾಚರಣೆ ಮಾಡಿದರೆ, ದೇವಾಲಯಗಳಲ್ಲಿ ಹರಿಕಥೆ, ಶಿವ ಪಾರಾಯಣ, ಜಪ-ತಪಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಭಕ್ತಿ ಪ್ರಧಾನ ಪೌರಾಣಿಕ ನಾಟಕಗಳು ನಡೆದವು.

ADVERTISEMENT

ನಗರದ ಅರಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ಕ್ಷೀರ, ಮೊಸರು, ಎಳನೀರು, ಗಂಧ, ಜೇನುತುಪ್ಪ, ಸಕ್ಕರೆ, ನಿಂಬೆಹಣ್ಣು, ಪಂಚಾಮೃತಾಭಿಷೇಕ, ಅರಿಶಿನ-ಕುಂಕುಮ, ಬಿಲ್ವಪತ್ರ ಅರ್ಚನೆ ಮಾಡಲಾಯಿತು. ಭಕ್ತರು ಸರತಿ ಸಾಲಿನಿಲ್ಲಿ ನಿಂತು ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಸಕಲೇಶ್ವರಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಬೆಳ್ಳಿಯ ನಾಗಾಭರಣವನ್ನು ಧರಿಸಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಂಕರ ನಗರದಲ್ಲಿರುವ ಮಲೈ ಮಹದೇಶ್ವರಸ್ವಾಮಿ, ಶಂಕರಮಠದ ಆದಿ ಚುಂಚನಗಿರಿ ಶಾಖಾ ಮಠದಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿಗೆ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ಪೂಜೆ, ಅಲಂಕಾರ ನಡೆಸಲಾಗಿತ್ತು. ಚಾಮುಂಡೇಶ್ವರಿ ನಗರದಲ್ಲಿರುವ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಗ್ರಾಮೀಣ ಭಾಗದಲ್ಲಿ ಮಂಡ್ಯ ತಾಲ್ಲೂಕಿನ ಪಣಕನಹಳ್ಳಿ, ಉಮ್ಮಡಹಳ್ಳಿ, ಕಲ್ಲಹಳ್ಳಿ, ರಾಗಿಮುದ್ದನಹಳ್ಳಿ, ಕಾಳೇನಹಳ್ಳಿ, ಸಂತೆಕಸಲಗೆರೆ, ಕಾರಸವಾಡಿ, ಮಂಗಲ, ಹಳುವಾಡಿ, ಕೋಲಕಾರನದೊಡ್ಡಿ ಸೇರಿದಂತೆ ಹಲವು ಗ್ರಾಮಗಳ ದೇವಾಲಯಗಳಲ್ಲಿ ಮಹಾಶಿವರಾತ್ರಿಯನ್ನು ಭಕ್ತಿಯಿಂದ ಆಚರಿಸಲಾಯಿತು.

ಕೆರಗೋಡಿನಲ್ಲಿ ಜಾಗರಣೆ: ತಾಲ್ಲೂಕಿನ ಪಂಚಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೇವಾಲಯಗಳ ಸುತ್ತಮುತ್ತ ವಿದ್ಯುತ್‌ ದೀಪಾಲಾಂಕಾರ ಮಾಡಲಾಗಿತ್ತು. ಮಾರಗೌಡನಹಳ್ಳಿ, ಕಲ್ಮಂಟಿದೊಡ್ಡಿ, ಪಂಚೇಗೌಡನದೊಡ್ಡಿ, ಮರಿಲಿಂಗನದೊಡ್ಡಿ, ಹೊನ್ನನಾಯಕನಹಳ್ಳಿ, ಚಿಕ್ಕಬಾಣಸವಾಡಿ, ದೊಡ್ಡಬಾಣಸವಾಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಜಾಗರಣೆಯಲ್ಲಿ ಭಾಗವಹಿಸಿದ್ದರು.

ಮಂಡ್ಯ ನಗರದ ಸರ್‌ ಎಂ.ವಿ. ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದಿಂದ ಮಹಾಶಿವರಾತ್ರಿಯಂದು ಶಿವ ಗಣೇಶ ದೇವಾಲಯಗಳ ಮಂಟಪಗಳನ್ನು ನಿರ್ಮಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.