ADVERTISEMENT

ಪ್ರಜಾತಂತ್ರದ ಉಳಿವಿಗೆ ಗಾಂಧಿ, ಜೆಪಿ ಚಿಂತನೆ ಅವಶ್ಯ

ಐಎಫ್‌ಡಬ್ಲ್ಯು ಜೆ ಸಭೆ, ವಿಚಾರ ಸಂಕಿರಣ; ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 12:30 IST
Last Updated 22 ಏಪ್ರಿಲ್ 2022, 12:30 IST
ವಿಚಾರ ಸಂಕಿರಣದಲ್ಲಿ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ ಮಾತನಾಡಿದರು. ಹೇಮಂತ್‌ ತಿವಾರಿ, ಮಲ್ಲಿಕಾರ್ಜುನಯ್ಯ, ಪರಮಾನಂದ ಪಾಂಡೆ, ಕೌಡ್ಲೆ ಚನ್ನಪ್ಪ, ಎಚ್‌.ಎಸ್‌.ಮಂಜು ಇದ್ದಾರೆ
ವಿಚಾರ ಸಂಕಿರಣದಲ್ಲಿ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ ಮಾತನಾಡಿದರು. ಹೇಮಂತ್‌ ತಿವಾರಿ, ಮಲ್ಲಿಕಾರ್ಜುನಯ್ಯ, ಪರಮಾನಂದ ಪಾಂಡೆ, ಕೌಡ್ಲೆ ಚನ್ನಪ್ಪ, ಎಚ್‌.ಎಸ್‌.ಮಂಜು ಇದ್ದಾರೆ   

ಮಂಡ್ಯ: ‘ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗೆ ಮಹಾತ್ಮಗಾಂಧಿ ಹಾಗೂ ಜಯಪ್ರಕಾಶ ನಾರಾಯಣ ಅವರ ಚಿಂತನೆಗಳು ಅತ್ಯಾವಶ್ಯವಾಗಿವೆ. ಇಬ್ಬರೂ ಮಹಾತ್ಮರು ಸಮಾಜದ ಪರಿವರ್ತನೆಗೆ ಕಾರಣಕರ್ತರಾಗಿದ್ದಾರೆ’ ಎಂದು ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ ಹೇಳಿದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ಐಎಫ್‌ಡಬ್ಲ್ಯುಜೆ), ಜೆ.ಪಿ ಸ್ಮಾರಕ ಟ್ರಸ್ಟ್‌ ವತಿಯಿಂದ ಜೆ.ಪಿ ಸ್ಮಾರಕ ವಿದ್ಯಾಸಂಸ್ಥೆ ಆವರಣದಲ್ಲಿ ಶುಕ್ರವಾರ ನಡೆದ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸಭೆ ಹಾಗೂ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಗಾಂಧೀಜಿ ಹಾಗೂ ಜಯಪ್ರಕಾಶ ನಾರಾಯಣರ ಚಿಂತನೆಗಳು, ಅವರ ಆದರ್ಶಮಯ ಬದುಕು ಯುವ ಪೀಳಿಗೆಗೆ ದಾರಿದೀಪವಾಗಿವೆ. ಪ್ರಸ್ತುತ ಸಂದರ್ಭದಲ್ಲಿ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರಬರಲು ಅವರ ಆದರ್ಶಗಳು ಸಹಾಯಕವಾಗಿವೆ. ದೇಶದ ಯುವಸಮುದಾಯ ಅವರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು’ ಎಂದರು.

ADVERTISEMENT

‘ಜಯಪ್ರಕಾಶ ನಾರಾಯಣ ಅವರು ಹುಟ್ಟಿದ ಹಳ್ಳಿಯಲ್ಲಿ ನಾನೂ ಹುಟ್ಟಿದವನು, ಅವರು ನನಗೆ ದೂರದ ಸಂಬಂಧಿಯೂ ಆಗಬೇಕು. ಹೀಗಾಗಿ ನಾನು ಎಲ್ಲಿಗೇ ಹೋದರೂ ಈ ವಿಚಾರವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಮಂಡ್ಯದಲ್ಲಿ ಜಯಪ್ರಕಾಶ ನಾರಾಯಣರ ಸ್ಮಾರಕ ವಿದ್ಯಾಸಂಸ್ಥೆ ಸ್ಥಾಪನೆಯಾಗಿರುವುದು ಖುಷಿಯ ವಿಚಾರವಾಗಿದೆ’ ಎಂದರು.

‘ಇಂದು ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ತಂತ್ರಜ್ಞಾನ ಬಂದಾಗ ಅದರಿಂದ ಸಾಕಷ್ಟು ಅನುಕೂಲಗಳ ಜೊತೆಗೆ ಅನನುಕೂಲಗಳೂ ಆದವು. ಹಾಗೆಯೇ ಮಾಧ್ಯಮ ಕ್ಷೇತ್ರದಲ್ಲಿ ಸಾಮಾಜಿಕ ಮಾಧ್ಯಮಗಳು ಬಲದೊಡ್ಡ ಸವಾಲುಗಳನ್ನು ಒಡ್ಡಿವೆ. ಇದರಲ್ಲೂ ಅನುಕೂಲಗಳ ಜೊತೆಗೆ ಅನನುಕೂಲಗಳೂ ಇವೆ. ಸಾಮಾಜಿಕ ಮಾಧ್ಯಮಗಳಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಎಲ್ಲರೂ ಚರ್ಚಿಸಬೇಕು’ ಎಂದರು.

ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಮಾತನಾಡಿ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಾಧ್ಯಮಗಳು ಮಾಡಿದ ಸಹಾಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪತ್ರಕರ್ತರು ಕೂಡ ಹೋರಾಟಗಾರರಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಬಂಡವಾಳಶಾಹಿಗಳ ಪರವಾಗಿ ನಿಂತಿರುವುದು ವಿಷಾದನೀಯ. ಟಿವಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳು ರಕ್ತಬಿಜಾಸುರನಂತೆ ಸಮಾಜದಲ್ಲಿ ಆತಂಕ ಸೃಷ್ಟಿಸಿವೆ. ವಾಸ್ತವ, ಖಚಿತತೆ ಇಲ್ಲದ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಇದರ ಬಗ್ಗೆ ಗಂಭೀರ ಚರ್ಚೆಗಳಾಗಬೇಕು’ ಎಂದರು.

ಸಭೆಯಲ್ಲಿ ಐಎಫ್‌ಡಬ್ಲ್ಯು ಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷ ಹೇಮಂತ್‌ ತಿವಾರಿ, ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ರಾಷ್ಟ್ರೀಯ ಮಂಡಳಿ ಸದಸ್ಯ ಕೌಡ್ಲೆ ಚನ್ನಪ್ಪ, ಎ.ಎಚ್‌.ನಾರಾಯಣ. ಎಲ್‌.ಬಸವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.