ADVERTISEMENT

ಸಿಡಿಹಬ್ಬಕ್ಕೆ ಶೃಂಗಾರಗೊಂಡ ಮಳವಳ್ಳಿ

ಹಬ್ಬದಲ್ಲಿ ಗಮನ ಸೆಳೆಯುವ ಸಿಡಿರಣ್ಣ ಹಾಗೂ ಘಟ್ಟಗಳ ಮೆರವಣಿಗೆ

ಟಿ.ಕೆ.ಲಿಂಗರಾಜು
Published 30 ಜನವರಿ 2026, 5:32 IST
Last Updated 30 ಜನವರಿ 2026, 5:32 IST
ಮಳವಳ್ಳಿ ಪಟ್ಟಣದ ಪಟ್ಟಲದಮ್ಮನ ದೇವರು
ಮಳವಳ್ಳಿ ಪಟ್ಟಣದ ಪಟ್ಟಲದಮ್ಮನ ದೇವರು   

ಮಳವಳ್ಳಿ: ಪಟ್ಟಣದ ಎಲ್ಲ ಸಮುದಾಯದವರು ಒಟ್ಟಾಗಿ ಸೇರಿ ಏಕತೆಯ ಸಂಕೇತವಾಗಿ ಆಚರಿಸುವ ಐತಿಹಾಸಿಕ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ವಿದ್ಯುತ್ ದೀಪಾಲಂಕಾರದಿಂದ ಮಳವಳ್ಳಿ ಪಟ್ಟಣ ಜಗಮಗಿಸುತ್ತಿದೆ.

ಶುಕ್ರವಾರ ಮತ್ತು ಶನಿವಾರ ಹಬ್ಬ ಆಚರಣೆಯ ಸಂಬಂಧ ಈಗಾಗಲೇ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿಜೃಂಭಣೆ ಹಾಗೂ ಶಾಂತಿಯುತ ಆಚರಣೆಗೆ ಬೇಕಾದ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ನಾಲ್ಕು ದ್ವಾರಗಳಲ್ಲಿ ಸ್ವಾಗತ ಕೋರುವ ವಿದ್ಯುತ್ ದೀಪಾಲಂಕಾರ ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳಿಂದ ಮಳವಳ್ಳಿ ಮಧುವಣಗಿತ್ತಿಯಂತೆ ಕಾಣುತ್ತಿದೆ.

ಪಟ್ಟಣದ ಸರ್ವಜನಾಂಗವು ತಮ್ಮದೇ ಆದ ಜವಾಬ್ದಾರಿಯೊಂದಿಗೆ ಜಾತ್ಯತೀತವಾಗಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಹಬ್ಬಕ್ಕೆ ತನ್ನದೇ ಆದ ಇತಿಹಾಸ ಇದೆ. ಸುಮಾರು 300 ವರ್ಷಗಳ ಹಿಂದೆ ಶ್ರೀರಂಗಪಟ್ಣಣದಿಂದ ಮಳವಳ್ಳಿಗೆ ಅಡಿಕೆ ವ್ಯಾಪಾರಕ್ಕೆ ಬರುತ್ತಿದ್ದ ಮಂಚಟಪ್ಪನವರ ಚೀಲದಲ್ಲಿ ಎರಡು ವಿಗ್ರಹ ಸಿಕ್ಕಿದ್ದವು. ಅವುಗಳೇ ಪಟ್ಟಲದಮ್ಮ ಹಾಗೂ ದಂಡಿನ ಮಾರಮ್ಮ ದೇವರು ಆಗಿ ರೂಪುಗೊಂಡಿವೆ. ನಂತರ ದೇವರು ಸೂಚನೆಯಂತೆ ಗುಡಿಗಳನ್ನು ಕಟ್ಟಿಸಿ ಪೂಜಿಸುತ್ತಿದ್ದರು.
ಮಳವಳ್ಳಿಗೆ ನೆರೆಹೊರೆ ಪಾಳೇಗಾರರ ಹಾವಳಿ ಹೆಚ್ಚಾಗಿ ನೆಮ್ಮದಿ ಕಳೆದುಕೊಂಡ ಜನರು ಪಟ್ಟಲದಮ್ಮ ದೇವರಿಗೆ ಮೊರೆ ಹೋದಾಗ, ದೇವರು ಪಾಳೇಗಾರರನ್ನು ಸದೆ ಬಡಿದು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ಹಿನ್ನೆಲೆಯಲ್ಲಿ ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮನ ದೇವರಿಗೆ ಜಾತ್ರೆ, ಕೊಂಡ, ಮೆರವಣಿಗೆ ಮುಂತಾದ ವಿಶೇಷ ಪೂಜೆಗಳನ್ನು ಜಾತಿ ಬೇಧವಿಲ್ಲದೆ ಸಾಮೂಹಿಕವಾಗಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮಂಚಟಪ್ಪನವರ ಕುಟುಂಬದಿಂದಲೇ ಹಬ್ಬದ ವೇಳೆ ಪ್ರಥಮ ಪೂಜೆ ನಡೆಯಲಿದೆ.

ADVERTISEMENT

ಗಮನ ಸೆಳೆಯುವ ಘಟ್ಟ ಮೆರವಣಿಗೆ
ಸಿಡಿಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಮಹಿಳೆಯರ ಘಟ್ಟ ಮೆರವಣಿಗೆಯು ಪೇಟೆ ಒಕ್ಕಲಗೇರಿಯಿಂದ ಆರಂಭವಾಗಿ ನಂತರ ಸಿದ್ದಾರ್ಥನಗರದ ಘಟ್ಟ, ಕೀರ್ತಿನಗರ, ಗಂಗಾಮತ ಬೀದಿ, ಅಶೋಕ್ ನಗರ ಚಿಕ್ಕಪಾಲು, ಅಶೋಕ್ ನಗರ ದೊಡ್ಡಪಾಲು, ಬಸವಲಿಂಗಪ್ಪ ನಗರದ ಘಟ್ಟಗಳು ಸಾಗಿ ಪಟ್ಟಲದಮ್ಮನ ದೇವಸ್ಥಾನ ಪ್ರವೇಶಿಸುತ್ತದೆ. ರಾತ್ರಿ 8ಗಂಟೆಗೆ ಆರಂಭವಾಗುವ ಮೆರವಣಿಗೆಯು ರಾತ್ರಿಯೀಡಿ ಸಾಗಲಿದೆ.


ಹಬ್ಬಕ್ಕೆ ಸಿಡಿರಣ್ಣ ಸಿದ್ದ
ಹಬ್ಬದ ವಿಶೇಷವಾದ ಸಿಡಿರಣ್ಣವನ್ನು 46 ಅಡಿಯ ತಾವಸದ ಮರದಿಂದ ತಯಾರಿಸುತ್ತಾರೆ. ಹಿಂದೆ ಸಿಡಿರಣ್ಣನಿಗೆ ವ್ಯಕ್ತಿಯನ್ನು ಕಟ್ಟಿ ಸಿಡಿ ಕಂಬಕ್ಕೆ ನೇತು ಹಾಕಿ ಸಿಡಿ ಹಾರಿಸುತ್ತಿದ್ದರು. ನಂತರದ ವರ್ಷಗಳಲ್ಲಿ ಮಾನವ ಪ್ರತಿಮೆಯನ್ನು ಮಾಡಿ ಸಿಡಿ ಮರಕ್ಕೆ ಕಟ್ಟಿ ಸಿಡಿ ಹಾರಿಸುವುದು ಸಂಭ್ರಮ ಸಡಗರದ ಭಾಗವಾಗಿದೆ. ಅಲಂಕೃತ ಸಿಡಿಬಂಡಿಯು ಶುಕ್ರವಾರ ಮಧ್ಯರಾತ್ರಿ ಕೋಟೆ ಬೀದಿಯ ಪಟೇಲರ ಮನೆಯಿಂದ ಮುಂದೆ ಸಾಗಿ ಸಾರಂಗಪಾಣಿ, ಕೋಟೆ ಬೀದಿ, ಮೈಸೂರು ರಸ್ತೆ, ಪೇಟೆ ಬೀದಿ, ಗಂಗಾಮತ ಬೀದಿ, ಅನಂತ ರಾಮ್ ವೃತ್ತದ ಮೂಲಕ ಸುಲ್ತಾನ್ ರಸ್ತೆಯ ಪಟ್ಟಲದಮ್ಮನ ದೇವಸ್ಥಾನ ಆವರಣಕ್ಕೆ ಬರಲಿದೆ. ಸಿಡಿ ದೇವಸ್ಥಾನದ ಆವರಣದಲ್ಲಿ ಮೂರು ಸುತ್ತು ಸುತ್ತಲಿದೆ. ಭಕ್ತರು ಹಣ್ಣು ಜವನ ಎಸೆಯಲಿದ್ದಾರೆ.


ಸಿಡಿಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿರುವುದರಿಂದ ಭದ್ರತೆಗಾಗಿ ನಾಲ್ವರು ಡಿವೈಎಸ್ಪಿ, 14 ಸಿಪಿಐ, 30 ಪಿಎಸ್ಐ, 50 ಎಎಸ್ಐ, 3 ಕೆಎಸ್ಆರ್‌ಪಿ ತುಕಡಿ, 7 ಡಿಆರ್, 60 ಮಂದಿ ಮಹಿಳಾ ಪೊಲೀಸರು ಸೇರಿದಂತೆ 500ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜಿಸಿ ಎರಡು ದ್ರೋಣ ಕ್ಯಾಮಾರಗಳ ಕಣ್ಗಾವಲು ಇಡಲಾಗಿದೆ ಎಂದು ಡಿವೈಎಸ್‌ಪಿ ಎಸ್.ಬಿ.ಯಶವಂತ ಕುಮಾರ್ ಮಾಹಿತಿ ನೀಡಿದ್ದಾರೆ.

ಹಬ್ಬಕ್ಕೆ ಬರುವ ಜನರಿಗೆ 12 ಮೊಬೈಲ್ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ರಸ್ತೆ ವಿಭಜಕದ ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಳವಡಿಕೆ ಮಾಡಬಾರದು. ಅಲ್ಲದೇ ಇನ್ನೂ ಮುಂದೆ ಪಟ್ಟಣದಲ್ಲಿ ಅನುಮತಿ ಇಲ್ಲದೇ ಯಾವುದೇ ಬ್ಯಾನರ್ ಕಟ್ಟುವಂತಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ತಿಳಿಸಿದರು.

ಎಲ್ಲ ಧರ್ಮ ಮತ್ತು ಜಾತಿಯ ಜನರು ಭಾವೈಕತೆಯಿಂದ ಸಿಡಿಹಬ್ಬವನ್ನು ಆಚರಿಸುವ ರೀತಿ ಮಾದರಿಯಾಗಿ ರೂಪುಗೊಂಡಿದೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಳವಳ್ಳಿಗೆ ಹೊಸ ರೂಪು ಕೊಟ್ಟು ಜನರ ಸಡಗರವನ್ನು ಹೆಚ್ಚಿಸಿದ್ದಾರೆ ಎನ್ನುತ್ತಾರೆ ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು.

ಮಳವಳ್ಳಿಯ ಜನರನ್ನು ರಕ್ಷಿಸಿದ ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮನ ದೇವರ ಹಬ್ಬವನ್ನು ನೂರಾರು ವರ್ಷಗಳಿಂದಲೂ ಆಚರಿಸಿಕೊಂಡು ಬರಲಾಗುತ್ತಿದ್ದು, ಜಾತ್ಯತೀತ ಮನೋಭಾವದ ಆಚರಣೆಯನ್ನು ಇಂದಿನ ಯುವ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕು ಎನ್ನುತ್ತಾರೆ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, 

ಮಳವಳ್ಳಿ ಪಟ್ಟಣದ ಸಿಡಿರಣ್ಣನ ಸಂಗ್ರಹ ಚಿತ್ರ.
ಮಳವಳ್ಳಿ ಪಟ್ಟಣದಲ್ಲಿ ಸಿಡಿಹಬ್ಬದ ಹಿನ್ನೆಲೆಯಲ್ಲಿ ಅಳವಡಿಸಿರುವ ವಿದ್ಯುತ್ ದೀಪಾಲಂಕಾರ
ಎಂ.ಲಿಂಗರಾಜು ಅಧ್ಯಕ್ಷರು ಟಿಎಪಿಸಿಎಂಎಸ್.
ದೊಡ್ಡಯ್ಯ ಪುರಸಭೆ ಮಾಜಿ ಅಧ್ಯಕ್ಷರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.