ADVERTISEMENT

ದುರಸ್ತಿ ಕಾಣದ ಮಳವಳ್ಳಿ ದೊಡ್ಡಕೆರೆ: ನೀರು ಸಂಗ್ರಹ ಕುಸಿತ

ಜೊಂಡು, ಗಿಡಗಂಟಿ ತೆರವಿಗೆ ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 6:25 IST
Last Updated 17 ಮಾರ್ಚ್ 2025, 6:25 IST
ಮಳವಳ್ಳಿ ಪಟ್ಟಣದ ಹೊರವಲಯದ ದೊಡ್ಡಕೆರೆಯಲ್ಲಿ ಗಿಡಗಂಟಿ ಬೆಳೆದು, ನೀರು ಪಾಚಿಗಟ್ಟಿರುವ ದೃಶ್ಯ 
ಮಳವಳ್ಳಿ ಪಟ್ಟಣದ ಹೊರವಲಯದ ದೊಡ್ಡಕೆರೆಯಲ್ಲಿ ಗಿಡಗಂಟಿ ಬೆಳೆದು, ನೀರು ಪಾಚಿಗಟ್ಟಿರುವ ದೃಶ್ಯ    

ಮಳವಳ್ಳಿ: ಸುಮಾರು 1200 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ 326 ಎಕರೆ ವಿಸ್ತೀರ್ಣದ ಪಟ್ಟಣದ ಹೊರವಲಯದ ಮಳವಳ್ಳಿ ದೊಡ್ಡಕೆರೆಯಲ್ಲಿ ಹೂಳು ಮತ್ತು ಬೆಳೆದು ನಿಂತಿರುವ ಗಿಡಗಂಟಿಗಳು ನೀರಿನ ಸಂಗ್ರಹ ಸಾಮರ್ಥ್ಯವನ್ನು ಕುಸಿಯುವಂತೆ ಮಾಡಿವೆ.

ತಾಲ್ಲೂಕಿನಲ್ಲಿ ಕಳೆದ ವರ್ಷ ಉತ್ತಮವಾಗಿ ಮಳೆಯಾಗಿದೆ. ಮತ್ತೊಂದೆಡೆ ಬಹುನಿರೀಕ್ಷಿತ ‘ಪೂರಿಗಾಲಿ ಹನಿ ನೀರಾವರಿ ಯೋಜನೆ’ಯ ವ್ಯಾಪ್ತಿಯ ಬೊಪ್ಪೇಗೌಡನಪುರ ಹೋಬಳಿ ಸೇರಿದಂತೆ ಬಹುತೇಕ ಕೆರೆ ಕಟ್ಟೆಗಳು ತುಂಬಿವೆ. ಆದರೆ, ಕೆರೆಗಳಲ್ಲಿ ಹೂಳು ಮತ್ತು ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿಲ್ಲ. ಜೊಂಡು, ಪಾಚಿ ಬೆಳೆದು ನೀರು ಕಲುಷಿತಗೊಂಡಿದೆ. 

ದುರಸ್ತಿ ಕಾಣದ ಕಾಲುವೆಗಳು

ADVERTISEMENT

ಮಳವಳ್ಳಿ ದೊಡ್ಡಕೆರೆಯ ಕೋಡಿಯು ಬಹಳ ಹಳೆಯದಾಗಿದೆ. ಪಟ್ಟಣದ ಹೊರವಲಯದ ಮಳವಳ್ಳಿ ದೊಡ್ಡಕೆರೆಯು ಏರಿಯನ್ನು ಎತ್ತರಿಸುವ ಅಗತ್ಯವಿದೆ. ಕೆರೆಯ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿ ಮುಳ್ಳಿನಗಿಡಗಳು ಬೆಳೆದು ನಿಂತಿದ್ದು, ಕೆರೆಯಲ್ಲಿ ಹೂಳಿನಿಂದಾಗಿ ನೀರು ಸಂಗ್ರಹ ಸಾಮರ್ಥ್ಯವೂ ಕಡಿಮೆಯಾಗುತ್ತಿದೆ. ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಹರಿಸುವ ಕಾಲುವೆಯೂ ನಿರ್ವಹಣೆ ಕೊರತೆಯಿಂದಾಗಿ ಗಿಡಗಂಟಿಗಳು ಬೆಳೆದು ಕಿರಿದಾಗಿದ್ದು, ಅದನ್ನು ವಿಸ್ತರಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. 

ತಾಲ್ಲೂಕಿನ ವಡ್ಡರಹಳ್ಳಿ, ಚಿಕ್ಕಮುಲಗೂಡು, ಚೊಟ್ಟನಹಳ್ಳಿ, ಚಂದಹಳ್ಳಿ, ರಾಮಂದೂರು, ಕಂದೇಗಾಲ, ಕೆಂಬೂತಗೆರೆ, ಕಿರುಗಾವಲು, ರಾಗಿಬೊಮ್ಮನಹಳ್ಳಿ, ದಬ್ಬಳ್ಳಿ, ದಾಸನದೊಡ್ಡಿ, ನೆಲಮಾಕನಹಳ್ಳಿ, ಕಂದೇಗಾಲ, ಗುಳಘಟ್ಟ, ಮಾರ್ಕಲು, ಗಾಣಿಗನಪುರ, ಶೆಟ್ಟಹಳ್ಳಿ, ಮಾರ್ಕಾಲು, ಕಂಚುಗಹಳ್ಳಿ, ಹೂವಿನಕೊಪ್ಪಲು, ಮಾಗನಹಳ್ಳಿ, ಕಲ್ಕುಣಿ, ಕಂಚುಗಹಳ್ಳಿ, ದಬ್ಬಹಳ್ಳಿ, ಬೆಳಕವಾಡಿ, ರಾಗಿಬೊಮ್ಮನಹಳ್ಳಿ, ಕಗ್ಗಳ, ಕಿರುಗಾವಲು ಸೇರಿದಂತೆ ಹಲವು ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಕೆರೆಗಳಿವೆ.

ಹಲವೆಡೆ ಕಳೆದ ವರ್ಷದ ಬರಗಾಲದ ಸಂದರ್ಭದಲ್ಲಿ ಕೆರೆಯಲ್ಲಿನ ಹೂಳು ತೆಗೆಯಲಾಗಿದೆ. ಇದರಿಂದ ನೀರು ಸಂಗ್ರಹ ಹೆಚ್ಚಾಗಿದೆ. ಆದರೆ ಕೆರೆಗಳ ಅಭಿವೃದ್ಧಿಗೆ ಹೊಸ ಯೋಜನೆ ಮತ್ತು ಕಾಲ ಕಾಲಕ್ಕೆ ತಕ್ಕಂತೆ ಸ್ವಚ್ಛತೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಶೆಟ್ಟಹಳ್ಳಿ ಗ್ರಾಮದ ಶಿವು ಆಗ್ರಹಿಸುತ್ತಾರೆ.

ನಿರ್ವಹಣೆ ಕೊರತೆ; ನೀರಿಗೆ ತತ್ವಾರ

ಮಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನಪುರ ಹೋಬಳಿಯ ಗ್ರಾಮದ ದೊಡ್ಡಕೆರೆ ಹಿಂದಿನಿಂದಲೂ ಗ್ರಾಮದ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದು, ಸೂಕ್ತ ನಿರ್ವಹಣೆಯಿಲ್ಲದೆ ಹೂಳು, ಗಿಡಗಂಟಿಯಿಂದ ತುಂಬಿ ನೀರು ನಿಲ್ಲದಂತಾಗಿದೆ.

ಗ್ರಾಮದ ಸರ್ವೆ ನಂ.4ರ 40ಎಕರೆ 11 ಗುಂಟೆ ಪ್ರದೇಶದಲ್ಲಿರುವ ಈ ಕೆರೆಯು ಬೆಳಕವಾಡಿ, ಜವನಗಹಳ್ಳಿ, ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದು, ಕೆರೆಯು 6 ರಿಂದ 7 ಅಡಿಗಳಷ್ಟು ಆಳ ಹೊಂದಿದೆ. ಇದೀಗ ಕೇವಲ 3 ಅಡಿಗಳಷ್ಟು ಮಾತ್ರ ಆಳ ಕಾಣುತ್ತಿದ್ದು, ಉಳಿದ 4 ಅಡಿಗಳಷ್ಟು ಹೂಳಿನಿಂದ ತುಂಬಿ ಹೋಗಿದ್ದು, ಅಲ್ಪಸ್ವಲ್ಪ ಶೇಖರಣೆಗೊಂಡಿರುವ ನೀರಿನಲ್ಲಿ ಗಿಡಗಂಟಿಗಳು ಬೆಳೆದುಕೊಂಡು ಸಂಪೂರ್ಣ ಹಾಳಾಗಿದೆ.

ದೊಡ್ಡಕೆರೆಯಲ್ಲಿ ದಂಡಿನ ಮಾರಮ್ಮನ ದೇವಸ್ಥಾನಕ್ಕೆ ಹೊಂದುಕೊಂಡಂತೆ ‘ಅಮ್ಯೂಸ್‌ಮೆಂಟ್ ಪಾರ್ಕ್‌’ ಮಾದರಿಯಲ್ಲಿ ಹೊಸ ಯೋಜನೆಯೊಂದನ್ನು ರೂಪಿಸಲು ಶಾಸಕರೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಅನುದಾನದ ಲಭ್ಯತೆಯ ಆಧಾರದ ಮೇಲೆ ಅಭಿವೃದ್ಧಿಪಡಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ.

‘ಕೆರೆ ಒತ್ತುವರಿ ತೆರವಿಗೆ ನಿರ್ಲಕ್ಷ್ಯ’

‘35 ವರ್ಷಗಳ ಹಿಂದೆ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಐತಿಹಾಸಿಕ ಹಿನ್ನೆಲೆ ಇರುವ ಸುಮಾರು 400 ಎಕರೆ ಪ್ರದೇಶದ ಮಾರೇಹಳ್ಳಿ ಕೆರೆಯು ಎರಡು ಸಾವಿರ ಎಕರೆ ಪ್ರದೇಶದ ಬೆಳೆಗಳಿಗೆ ನೀರು ಪೂರೈಕೆ ಮಾಡುತ್ತದೆ. ಕೆರೆಯ ಸುಮಾರು 30ಕ್ಕೂ ಹೆಚ್ಚು ಎಕರೆ ಪ್ರದೇಶವು ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಹಳೆಯ ಕೆರೆ ಕೋಡಿಯನ್ನು ಎತ್ತರಿಸುವುದರ ಜೊತೆಗೆ ಕೆರೆಯ ಅವಲಂಬಿತ ನಾಲೆಗಳ ಅಭಿವೃದ್ಧಿ ಪಡಿಸಿ ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎನ್ನುವುದು ರೈತರ ಆಗ್ರಹವಾಗಿದೆ.

ಕೆರೆ ಸೇರುತ್ತಿರುವ ಚರಂಡಿ ನೀರು!

ಮಾಧವ ಮಂತ್ರಿ ನಾಲೆ ಮೂಲಕ ಕೆರೆಗೆ ನೀರು ತುಂಬಿಸಲಾಗುತ್ತದೆ. ನಾಲೆಯ ಉದ್ದಕ್ಕೂ ಅಕ್ಕಪಕ್ಕದ ಗ್ರಾಮಗಳ ಚರಂಡಿ ಕಲುಷಿತ ನೀರು ನಾಲೆ ನೀರಿನ ಮೂಲಕ ಕೆರೆಗೆ ಸೇರುತ್ತಿದೆ. ಈ ನೀರನ್ನು ರೈತರು ವ್ಯವಸಾಯಕ್ಕೆ ಬಳಸುವುದರಿಂದ ಹಾಗೂ ಪ್ರಾಣಿ ಪಕ್ಷಿ ಜಾನುವಾರುಗಳು ನೀರು ಕುಡಿಯುವುದರಿಂದ ರೋಗ–ರುಜಿನಗಳು ಬರುವ ಸಾಧ್ಯತೆ ಕಂಡು ಬರುತ್ತಿದೆ. ‘ಹಿಂದೆ ಎರಡು ಬೆಳೆಗೆ ನೀರು ಕೊಡುತ್ತಿದ್ದ ಕೆರೆಯು ಇದೀಗ ಒಂದು ಬೆಳೆಗೆ ಮಾತ್ರ ಸೀಮೀತವಾಗಿದೆ. ಗ್ರಾಮದ ಹಲವು ಬಡಾವಣೆಗಳ ಚರಂಡಿ ನೀರು ಕೆರೆಗೆ ಸೇರುತ್ತಿದೆ. ಇದರಿಂದ ವ್ಯವಸಾಯದಲ್ಲಿ ತೊಡಗಿಸಿಕೊಳ್ಳುವ ರೈತರ ಆರೋಗ್ಯದ ಕೆಟ್ಟ ಪರಿಣಾಮ ಬೀರುತ್ತದೆ.  ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಯಾರು ಏನಂತಾರೆ?

‘ಗಿಡಗಂಟಿ, ಹೂಳೆತ್ತಿ’

ಕೆರೆಯ ನೀರನ್ನು ಸಂರಕ್ಷಿಸಲು ಸುತ್ತ ಏರಿ ನಿರ್ಮಿಸಲಾಗಿದೆ. ಇದನ್ನು ಅಭಿವೃದ್ಧಿಪಡಿಸುವುದರಿಂದ ಸುತ್ತಲಿನ ಗ್ರಾಮಗಳ ರೈತರ ಜಮೀನಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಯಲ್ಲೀಗ ಗಿಡಗಂಟಿ ಬೆಳೆದಿದೆ ಮತ್ತು ಹೂಳು ತುಂಬಿ ಕೊಂಡಿದೆ

– ಶಿವಣ್ಣ, ರೈತ ಮುಖಂಡ ಬೆಳಕವಾಡಿ

‘ಕೆರೆಯ ನಿರ್ವಹಣೆ ಅಗತ್ಯ’

ಸಕಾಲದಲ್ಲಿ ಕೆರೆಗಳಲ್ಲಿನ ಹೂಳು ತೆಗೆಸಿದರೆ ನೀರಿನ ಸಂಗ್ರಹದ ಜೊತೆಗೆ ಸ್ಥಳೀಯವಾಗಿ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ನೀರಿನ ಅಭಾವ ಕಾಡುವುದಿಲ್ಲ.  ಇಲಾಖೆಯ ಅಧಿಕಾರಿಗಳು ನಿರ್ವಹಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು

 – ಪೊಕ್ಕಯ್ಯನ ಬಸವರಾಜು, ರೈತ, ಮಳವಳ್ಳಿ

‘ಕೆರೆ, ನಾಲೆ ಅಭಿವೃದ್ಧಿಗೆ ಕ್ರಮ’

ದೊಡ್ಡಕೆರೆಯಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಲು ಸದ್ಯದಲ್ಲಿಯೇ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಕೆರೆ ವ್ಯಾಪ್ತಿಯ ನಾಲೆಗಳ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಲಾಗುವುದು

 – ಎಸ್.ಭರತೇಶ್ ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ

‘ಕೊಳಚೆ ನೀರು ತಡೆಯಲು ಪತ್ರ’

ಮಾಧವ ಮಂತ್ರಿ ನಾಲೆಗೆ ಸುತ್ತಲಿನ ಗ್ರಾಮಗಳ ಚರಂಡಿಯ ಗಲೀಜು ನೀರನ್ನು ಹರಿ ಬಿಡುವುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ  ಒಂದೂವರೆ ತಿಂಗಳ ಹಿಂದೆಯೇ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಪತ್ರ ಬರೆಯಲಾಗಿದೆ

– ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಮಾಧವ ಮಂತ್ರಿ ನಾಲೆ

ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಕೆರೆಯು ಗಿಡಗಂಟಿ ಮತ್ತು ಜೊಂಡಿನಿಂದ ಆವೃತವಾಗಿದೆ 
ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಕೆರೆಗೆ ನೀರು ಹರಿಯುವ ಮಾಧವ ಮಂತ್ರಿ ನಾಲೆಗೆ ಚರಂಡಿ ನೀರು ಸೇರುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.