ADVERTISEMENT

ಸಮರ್ಪಕ ನೀರು ಪೂರೈಕೆಗೆ ಒತ್ತಾಯ

ಮಳವಳ್ಳಿ ರೈತರಿಂದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 7:37 IST
Last Updated 1 ಸೆಪ್ಟೆಂಬರ್ 2020, 7:37 IST
ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗ್ರಾಮದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು
ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗ್ರಾಮದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು   

ಮಳವಳ್ಳಿ: ವಿಶ್ವೇಶ್ವರಯ್ಯ ನಾಲೆಯ ವಿತರಣಾ ಕಾಲುವೆಗಳಿಗೆ ಸಮರ್ಪಕ ನೀರು ಪೂರೈಸುವಂತೆ ಒತ್ತಾಯಿಸಿ ರೈತರು, ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕಾಗೇಪುರ (ಬಿಲ್ಡಿಂಗ್) ಗ್ರಾಮದ ಬಳಿಯ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಜಮಾಯಿಸಿದ ನೂರಾರು ರೈತರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ವಿಶ್ವೇಶ್ವರಯ್ಯ ನಾಲೆಗಳಿಗೆ ನಿರಂತರವಾಗಿ ಅಂದಾಜು 650 ಕ್ಯುಸೆಕ್ ನೀರು ಪೂರೈಸಬೇಕಿತ್ತು. ಆದರೆ ಅಧಿಕಾರಿಗಳು 300 ರಿಂದ 400 ಕ್ಯುಸೆಕ್ ನೀರು ಪೂರೈಸುತ್ತಿದ್ದಾರೆ. ಅಸಮರ್ಪಕ ನೀರು ಪೂರೈಕೆಯಿಂದ ನಾಲೆ ಕೊನೆಯ ಭಾಗದ 20ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯ 30 ಸಾವಿರ ಎಕರೆ ಪ್ರದೇಶದ ಬೆಳೆಗಳು ಒಣಗುತ್ತಿವೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ರೈತರು ಆರೋಪಿಸಿದರು.

ADVERTISEMENT

‘ರೈತರು ಪ್ರತಿ ಎಕರೆಗೆ ಸುಮಾರು ₹40 ಸಾವಿರದವರೆಗೆ ಹಣ ವ್ಯಯಿಸಿದ್ದಾರೆ. ಭತ್ತ ನಾಟಿಗೆ ಸಮರ್ಪಕ ನೀರು ಪೂರೈಕೆ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿಶ್ವೇಶ್ವರಯ್ಯ ವಿತರಣಾ ನಾಲೆಯ ಕಾಲುವೆಗಳನ್ನು ದುರಸ್ತಿ ಮಾಡಬೇಕಿದೆ. ಕಾಲುವೆಗೆ ನೀರು ಹರಿಸಿದಾಗಿನಿಂದ ಇದುವರೆಗೆ ಅಧಿಕಾರಿಗಳು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿಲ್ಲ. ನಾಲೆಗಳ ಹೂಳು ತೆಗಿದಿಲ್ಲ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರಿಗೆ ಸಹಾಯ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ತೆರಳಿ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಲ್.ಶಿವಲಿಂಗು ಹಾಗೂ ಸಹಾಯಕ ಎಂಜಿನಿಯರ್ ಡಿ.ಆಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ವಿಜಯ್ ಕುಮಾರ್ ಕರೆ ಮಾಡಿ ರೈತರೊಂದಿಗೆ ಮಾತುಕತೆ ನಡೆಸಿದರು. ‘ರೈತರ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸದ್ಯದಲ್ಲಿಯೇ ನಾಲೆಯ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್, ಕಂದೇಗಾಲ ಪಿಎಸಿಎಸ್ ಅಧ್ಯಕ್ಷ ಎಲ್.ಲಿಂಗರಾಜು, ಮುಖಂಡರಾದ ಚೌಡಯ್ಯ, ಕುಳ್ಳಚೆನ್ನಂಕಯ್ಯ, ಅಂಕೇಗೌಡ, ಗುಳ್ಳಘಟ್ಟದ ಮಹದೇವು, ಕರಿಯಪ್ಪ, ದ್ಯಾಪೇಗೌಡ, ಶಿವಲಿಂಗು ಟಿ.ಎಚ್.ಆನಂದ್, ಮರಿಸ್ವಾಮಿ ಚಿನ್ನಿಂಗರಾಮು, ತಮ್ಮೇಗೌಡ, ಚೌಡಯ್ಯ, ದಿಲೀಪ್ ಕುಮಾರ್, ಮಹೇಶ್, ಸಿದ್ದೇಗೌಡ, ರವಿ ಸೇರಿದಂತೆ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.