ADVERTISEMENT

ಮಳವಳ್ಳಿ | ವಾಹನ ಕೊರತೆ: ತ್ವರಿತ ಸೇವೆಗೆ ತೊಡಕು

ಟಿ.ಕೆ.ಲಿಂಗರಾಜು
Published 1 ಡಿಸೆಂಬರ್ 2025, 6:14 IST
Last Updated 1 ಡಿಸೆಂಬರ್ 2025, 6:14 IST
ಮಳವಳ್ಳಿಯ ಅಗ್ನಿಶಾಮಕ ಇಲಾಖೆಯ ಕಚೇರಿಯಲ್ಲಿ ಒಂದು ವಾಹನ ಬಳಕೆಯಲ್ಲಿದ್ದು, ಮತ್ತೆರಡು ಮೂಲೆಗುಂಪಾಗಿವೆ 
ಮಳವಳ್ಳಿಯ ಅಗ್ನಿಶಾಮಕ ಇಲಾಖೆಯ ಕಚೇರಿಯಲ್ಲಿ ಒಂದು ವಾಹನ ಬಳಕೆಯಲ್ಲಿದ್ದು, ಮತ್ತೆರಡು ಮೂಲೆಗುಂಪಾಗಿವೆ    

ಮಳವಳ್ಳಿ: ಅಗ್ನಿಶಾಮಕ ದಳದಲ್ಲಿನ ಎರಡು ಅಗ್ನಿಶಾಮಕ ವಾಹನಗಳು ಕಳೆದ ಎರಡು ವರ್ಷಗಳ ಹಿಂದೆ 15 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿಯಮದಂತೆ ಸಂಚಾರ ಯೋಗ್ಯತಾ ಪ್ರಮಾಣ ಪತ್ರವಿಲ್ಲದ ಕಾರಣ ಮೂಲೆಗುಂಪಾಗಿದ್ದು, ಮತ್ತೊಂದನ್ನು ವಾಹನವನ್ನು ಚಾಮರಾಜನಗರದಿಂದ ಎರವಲು ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಎಲ್ಲೇ ಅಗ್ನಿ ದುರಂತ ಸಂಭವಿಸಿದರೂ ಇರುವ ಏಕೈಕ ವಾಹನದಿಂದಲೇ ಅಗ್ನಿ ನಂದಿಸುವ ಕಾರ್ಯಾಚರಣೆ ನಡೆಸಬೇಕು. ಅಗತ್ಯದಷ್ಟು ಸಿಬ್ಬಂದಿ ಇಲ್ಲದಿರುವುದು ಕೂಡ ತ್ವರಿತ ಸೇವೆ ನೀಡಲು ಸಿಬ್ಬಂದಿಗೆ ತೊಡಕಾಗಿದೆ. 

1997ರಲ್ಲಿ ಭಾರತೀನಗರದಿಂದ ಅಗ್ನಿಶಾಮಕ ದಳದ ಕಚೇರಿ ಬೇರ್ಪಟ್ಟು ಮಳವಳ್ಳಿಯ ಪ್ರವಾಸಿ ಮಂದಿರಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿತ್ತು. ನಂತರ ಬೀರೇಶ್ವರ ದೇವಸ್ಥಾನ ಹತ್ತಿರ ಕಚೇರಿ ವ್ಯವಸ್ಥೆ ಮಾಡಲಾಗಿತ್ತು. 2017-18ನೇ ಸಾಲಿನಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಎಪಿಎಂಸಿ ಆವರಣದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿ ಹಲವು ಸೌಲಭ್ಯಗಳೊಂದಿಗೆ ಅಗ್ನಿಶಾಮಕ ದಳಕ್ಕೆ ಹೊಸ ಕಾಯಕಲ್ಪ ನೀಡಿದ್ದರು.

ADVERTISEMENT

ಆ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ವಾಹನಗಳು ಕಳೆದ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಹೊಸ ಸಾರಿಗೆ ನಿಯಮದಂತೆ 15 ವರ್ಷ ಪೂರೈಸಿದ ವಾಹನಗಳನ್ನು ಬಳಸುವಂತಿಲ್ಲ ಎಂಬ ಆದೇಶದ ಅನ್ವಯ ಕಚೇರಿಯಲ್ಲಿಯೇ ನಿಲ್ಲಿಸಲಾಗಿದೆ. ಆ ವೇಳೆ ಪ್ರಭಾರ ಠಾಣಾಧಿಕಾರಿಯಾಗಿದ್ದ ಎನ್.ಜಯರಾಮು ಅಧಿಕಾರಿಗಳ ಗಮನ ಸೆಳೆದು ಚಾಮರಾಜನಗರ ಜಿಲ್ಲೆಯಿಂದ ವಾಹನವೊಂದನ್ನು ಎರವಲು ಪಡೆದಿದ್ದು, ಅದು ಮಾತ್ರ ಈಗ ಕಾರ್ಯನಿರ್ವಹಿಸುತ್ತಿದೆ.

ತಾಲೂಕಿನಲ್ಲಿ ಬೆಂಕಿ ಅವಘಡಗಳು ಸಂಭವಿಸಿದ್ದಾಗ ಪಕ್ಕದ ಮದ್ದೂರು, ಮಂಡ್ಯದಿಂದ ಅಗ್ನಿಶಾಮಕ ವಾಹನ ತರಿಸುವ ಅನಿವಾರ್ಯತೆ ಎದುರಾಗಿದೆ. ಅಲ್ಲಿಯೂ ಒಂದೊಂದೇ ವಾಹನ ಇರುವ ಕಾರಣ ತ್ವರಿತ ಸೇವೆ ಸಿಗುವುದು ಕಷ್ಟ. ಇದರಿಂದ ತಾಲ್ಲೂಕಿನಲ್ಲಿ ಅಗ್ನಿ ಅವಘಡಗಳು ಉಂಟಾದರೆ ಯಾರನ್ನು ಅವಲಂಬಿಸಬೇಕು ಎನ್ನುವ ಪ್ರಶ್ನೆ ಕಾಡುತ್ತಿದೆ.

₹4 ಕೋಟಿ ನಷ್ಟ: ನ.7ರ ರಾತ್ರಿ ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯ ಎಸ್ಎಲ್ವಿ ಹಾರ್ಡ್ ವೇರ್ ಅಂಡ್ ಪ್ಲೈವುಡ್ ಗೆ ಆಕಸ್ಮಿಕ ಬೆಂಕಿ ಬಿದ್ದು ಸುಮಾರು ₹4 ಕೋಟಿಗೂ ಅಧಿಕ ನಷ್ಟವಾಗಿದೆ. ಇರುವ ಒಂದು ವಾಹನವೂ ಸಮರ್ಪಕವಾಗಿ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಬೇರೆ ತಾಲ್ಲೂಕಿನಿಂದ ವಾಹನಗಳು ಬರುವರಷ್ಟರಲ್ಲಿ ಎಲ್ಲವೂ ಸುಟ್ಟು ಕರಕಲಾಗಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಅಂಗಡಿ ಮಾಲೀಕ ಸಹ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು.

ಬೆಂಕಿ ಅವಘಡಗಳು ಅಧಿಕ: ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಮಳವಳ್ಳಿಯ ತಾಲ್ಲೂಕು ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ. ಹಲಗೂರು ವನ್ಯಜೀವಿ ವಿಭಾಗವೂ ಇದೆ. ಸಾಕಷ್ಟು ಕೃಷಿ ಭೂಮಿ ಇದೆ. ಹೆಚ್ಚಿನ ವಿದ್ಯುತ್ ತಂತಿಗಳು ಅರಣ್ಯದ ಮೂಲಕವೇ ಹಾದುಹೋಗಿದೆ. ಹಲವು ವೇಳೆ ನಾನಾ ಕಾರಣಗಳಿಂದ ಬೆಂಕಿ ಅವಘಡಗಳು ಸಂಭವಿಸುತ್ತಿವೆ.

ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯಲ್ಲಿ ಹಾರ್ಡ್‌ವೇರ್‌ ಅಂಡ್‌ ಪ್ಲೈವುಡ್‌ ಅಂಗಡಿಯಲ್ಲಿ ಈಚೆಗೆ ನಡೆದ ಅಗ್ನಿ ದುರಂತ (ಸಂಗ್ರಹ ಚಿತ್ರ)
ಎಂ.ವಿ.ಕೃಷ್ಣ
ಎನ್.ಲಿಂಗರಾಜಮೂರ್ತಿ
ರಾಘವೇಂದ್ರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಮಳವಳ್ಳಿಯಲ್ಲಿ ಅರಣ್ಯ ಪ್ರದೇಶ ಹೆಚ್ಚು  ಏಕೈಕ ವಾಹನದಿಂದ ತಾಲ್ಲೂಕಿನಾದ್ಯಂತ ಕಾರ್ಯಾಚರಣೆ  ಸಿಬ್ಬಂದಿ ಕೊರತೆ: ಕಾರ್ಯಾಚರಣೆಯ ಸವಾಲು

‘ಬೇಸಿಗೆಯಲ್ಲಿ ಅಗ್ನಿ ದುರಂತ ಹೆಚ್ಚಳ’

ಕಳೆದ ಎರಡು ವರ್ಷಗಳಲ್ಲಿ ತಾಲ್ಲೂಕಿನ ಬೆಳಕವಾಡಿಯ ಪೂರಿಗಾಲಿ ಹುಲ್ಲಂಬಳ್ಳಿ ಸರಗೂರು ಹಲಗೂರಿನ ಬಾಳೆಹೊನ್ನಿಗ ದೇವರಹಳ್ಳಿ ಅಂತರವಳ್ಳಿ ಕಿರುಗಾವಲಿನ ಮಲಿಯೂರು ಮಿಕ್ಕೆರೆ ಸೇರಿದಂತೆ ಅನೇಕ ಕಡೆ 300ಕ್ಕೂ ಅಧಿಕ ಅಗ್ನಿ ದುರಂತ ಸಂಭವಿಸಿವೆ. ಅದರಲ್ಲೂ ಪ್ರಮುಖವಾಗಿ 2024ರ ಜನವರಿಯಿಂದ ಮೇ ತಿಂಗಳವರೆಗೆ 183 ಅವಘಡಗಳು ಸಂಭವಿಸಿವೆ. ಆ ಸಂದರ್ಭದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಸುಮಾರು ₹5 ಕೋಟಿಯಷ್ಟು ಸಂಪತ್ತು ರಕ್ಷಣೆಯಾಗಿ ₹1.75 ಕೋಟಿಯಷ್ಟು ನಷ್ಟವಾಗಿದೆ. 2025ರಲ್ಲಿ 100ಕ್ಕೂ ಅಧಿಕ ಬೆಂಕಿಗಾಹುತಿ ಘಟನೆಗಳು ನಡೆದಿವೆ.

ಯಾರು ಏನಂತಾರೆ..?

ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ ಮಳವಳ್ಳಿ ತಾಲ್ಲೂಕು ಕೇಂದ್ರದಿಂದ 30-40 ಕಿ.ಮೀ. ದೂರದ ಅನೇಕ ಕಡೆಗಳಲ್ಲಿ ಬೆಂಕಿ ಅನಾಹುತಗಳು ಬೇಸಿಗೆಯಲ್ಲಿ ಸಂಭವಿಸುವ ಸಾಧ್ಯತೆ ಇರುವುದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತು ಅಗ್ನಿಶಾಮಕ ದಳಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು

– ಎಂ.ವಿ.ಕೃಷ್ಣ ಪ್ರಗತಿಪರ ರೈತ

ಬೆಂಕಿ ನಿಯಂತ್ರಿಸಲು ತೊಡಕು ತಾಲ್ಲೂಕಿನ ಹಲವೆಡೆ ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳಿವೆ. ಬೆಂಕಿ ಅವಘಡಗಳು ಸಂಭವಿಸಿದಾಗ ತಾಲ್ಲೂಕಿನಲ್ಲಿ ಅಗ್ನಿಶಾಮಕ ದಳಕ್ಕೆ ಸಮರ್ಪಕ ವಾಹನ ಇಲ್ಲದೆ ಬೆಂಕಿ ಹತೋಟಿಗೆ ತರಲು ತೊಂದರೆಯಾಗುತ್ತಿದೆ. ಇಂಥ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ.

– ಎನ್.ಲಿಂಗರಾಜಮೂರ್ತಿ ಕಾರ್ಯದರ್ಶಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕ

ಶೀಘ್ರದಲ್ಲೇ ಹೊಸ ವಾಹನ ಈಗಾಗಲೇ ಹೊಸ ವಾಹನಗಳಿಗೆ ಪ್ರಸ್ತಾವ ಸಲ್ಲಿಸಿದ್ದು ವಾಹನ ಮಂಜೂರಾಗಿವೆ. ಆರ್‌ಟಿಒ ನಿಯಮಗಳು ಪೂರ್ಣಗೊಳಿಸಬೇಕಾಗಿರುವುದರಿಂದ ಸ್ಪಲ್ಪ ತಡವಾಗಿದೆ. 20ರಿಂದ 25 ದಿನಗಳಲ್ಲಿ ಮಳವಳ್ಳಿಗೆ ಹೊಸದೊಂದು ವಾಹನ ಬರಲಿದೆ.

– ಬಿ.ಎಂ. ರಾಘವೇಂದ್ರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ

12 ಹುದ್ದೆಗಳು ಖಾಲಿ ಮಳವಳ್ಳಿಯ ಅಗ್ನಿಶಾಮಕ ಠಾಣೆಯಲ್ಲಿ 27 ಮಂಜೂರಾದ ಹುದ್ದೆಗಳ ಪೈಕಿ 12 ಖಾಲಿ ಇವೆ. ಮತ್ತೊಂದೆಡೆ ಕಳೆದ ಹತ್ತು ವರ್ಷಗಳಿಂದ ಕಾಯಂ ಠಾಣಾಧಿಕಾರಿ ಹಾಗೂ ಸಹಾಯಕ ಠಾಣಾಧಿಕಾರಿ ನೇಮಕವಾಗಿಲ್ಲ. ಕಚೇರಿಯ ಕೆಳಹಂತದ ಅಧಿಕಾರಿಗಳೇ ಪ್ರಭಾರ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಪ್ರಭಾರ ಠಾಣಾಧಿಕಾರಿಯಾಗಿ ಎಂ.ಅರುಣ್ ಕಾರ್ಯನಿರ್ವಹಿಸುತ್ತಿದ್ದಾರೆ. ಇರುವ 15 ಸಿಬ್ಬಂದಿಗಳೇ 2 ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ನೀರು ತುಂಬಲು ಮತ್ತೊಂದು ಬೋರ್ ವೆಲ್‌ನ ಅವಶ್ಯವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.