
ಮಳವಳ್ಳಿ: ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರದ ಅನುದಾನ ಜೊತೆಗೆ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ ಹಲವಾರು ಖಾಸಗಿ ಕಂಪನಿಗಳಿಂದ ಸುಮಾರು ₹17 ಕೋಟಿ ಅನುದಾನ ಬಂದಿದ್ದು, ಶಾಲೆಗಳ ಉನ್ನತೀಕರಣದ ನಿರೀಕ್ಷೆ ಗರಿಗೆದರಿದೆ.
ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಯಡಿ 100ಕ್ಕೂ ಅಧಿಕ ಶಾಲೆಗಳಿಗೆ ಕಾಯಕಲ್ಪ ನೀಡಲು ಮುತುವರ್ಜಿ ವಹಿಸಿರುವ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ನಂತರ ಕೆಲವು ಖಾಸಗಿ ಕಂಪನಿಗಳ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಹಿನ್ನಲೆಯಲ್ಲಿ ಸಿಎಸ್ಆರ್ ಯೋಜನೆಯಡಿ ದೇಣಿಗೆ ನೀಡುವುದಕ್ಕೆ ಹಲವು ಕಂಪನಿಗಳು ಮುಂದೆ ಬಂದಿದ್ದು, ಈಗಾಗಲೇ ಕೆಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಮಾಡಬೇಕಾಗಿರುವ ಶಾಲೆಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡುತ್ತಿದೆ. ಈಗಾಗಲೇ 50ಕ್ಕೂ ಹೆಚ್ಚು ಶಾಲೆಗಳಲ್ಲಿ ಅವಶ್ಯಕ ಕಟ್ಟಡಗಳ ನಿರ್ಮಾಣ, ಶೌಚಗೃಹ, ಪೀಠೋಪಕರಣ, ಕಟ್ಟಡ ದುರಸ್ತಿ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ ಕೆಲವೆಡೆ ಕಂಪ್ಯೂಟರ್ ಲ್ಯಾಬ್ ನಿರ್ಮಾಣಕ್ಕೂ ಮುಂದಾಗಿದೆ.
ಮುಂಬೈನ ಗ್ರಾಸ್ಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ₹54 ಲಕ್ಷ ವೆಚ್ಚದಲ್ಲಿ 71 ಶಾಲೆಗಳಿಗೆ ಹಾಗೂ ಕರ್ನಾಟಕ ಸೋಪ್ಸ್ ಅಂಡ್ ಡಿಟೆರ್ ಜೆಂಟ್ಸ್ ಲಿಮಿಟೆಡ್ ನಿಂದ ₹25 ಲಕ್ಷದಲ್ಲಿ 20 ಶಾಲೆಗಳಿಗೆ ಡಿಜಿಟಲ್ ಉಪಕರಣಗಳನ್ನು ನೀಡಲಾಗಿದೆ. ಇದರೊಂದಿಗೆ ಇನ್ಫೋಸಿಸ್ ಫೌಂಡೇಶನ್ 37 ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ‘ಲ್ಯಾಬ್ ಆನ್ ವೀಲ್ಸ್’ ವಾಹನದ ಮೂಲಕ ವಿಜ್ಞಾನ ಯೋಜನೆಗಳ ತರಗತಿಗಳನ್ನು ಮಾಡುತ್ತಿದೆ.
ಸಿಎಸ್ಆರ್ ಅನುದಾನದಡಿ 8 ಕಂಪನಿಗಳಿಂದ 11 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ₹5.33 ಕೋಟಿ ಅನುದಾನ ಬಂದಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಡಿಜಿಟಲೀಕರಣಕ್ಕೆ 2 ಸಂಸ್ಥೆಗಳಿಂದ 228 ಶಾಲೆಗಳಿಗೆ ₹1.79 ಕೋಟಿ ವೆಚ್ಚದ ಪರಿಕರಗಳನ್ನು ವಿತರಿಸಲಾಗಿದೆ.
ಟೊಯೋಟಾ ಕಂಪನಿಯಿಂದ ಸುಮಾರು ₹2.5 ಕೋಟಿ ವೆಚ್ಚದಲ್ಲಿ ಪ್ರಥಮ ಹಂತದಲ್ಲಿ 38 ಪ್ರೌಢಶಾಲೆಗಳಲ್ಲಿ ಹಾಗೂ ಎರಡನೇ ಹಂತದಲ್ಲಿ 136 ಶಾಲೆಗಳಿಗೆ ₹2.5 ಕೋಟಿಯಲ್ಲಿ ಮಿಲ್ಟಿ ಮೀಡಿಯಾ ಸೆಂಟರ್ ಸ್ಥಾಪಿಸಿ ಸಮೀಪದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ.
ಉಳಿದಂತೆ ಇನ್ನೂ 12 ಸರ್ಕಾರಿ ಶಾಲೆಗಳ ಪ್ರಗತಿಗೆ ವಿವಿಧ ಸಂಸ್ಥೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ನೆಸ್ಲೆ ಕಂಪನಿ ₹5 ಕೋಟಿ ನೀಡಲು ಮುಂದಾಗಿದೆ. ಶಾಸಕ ಪಿ.ಎಂ. ನರೇಂದ್ರಸ್ವಾಮಿ ಸಹ ಶಿಕ್ಷಣ ಇಲಾಖೆ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 66 ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ₹5.15 ಕೋಟಿ ಅನುದಾನ ತಂದಿದ್ದಾರೆ. ಆ ಮೂಲಕ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಿ ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ದೊಡ್ಡಮಟ್ಟದ ಪೈಪೋಟಿ ನೀಡುವಂತೆ ರೂಪಿಸಲು ಮುಂದಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಸಾಕಷ್ಟು ಅನುದಾನ ನೀಡುತ್ತಿದ್ದಾರೆ.– ವಿ.ಇ. ಉಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಳವಳ್ಳಿ
ತಳಗವಾದಿ ಕಿರುಗಾವಲು ಸರಗೂರಿನಲ್ಲಿ ಹೊಸದಾಗಿ ಕೆಪಿಎಸ್ ಶಾಲೆಗಳನ್ನು ಶಾಸಕರು ಮಂಜೂರು ಮಾಡಿಸಿದ್ದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುಕೂಲ.– ದಿಲೀಪ್ ಕುಮಾರ್ (ವಿಶ್ವ), ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕ
ಅಂಕಿಅಂಶ
ಕಂಪನಿ; 17
ಡಿಜಿಟಲೀಕರಣ; 228 ಶಾಲೆಗಳಿಗೆ ಮಲ್ಟಿ ಮ
ಡಿಯಾ ಸೆಂಟರ್; 174
ಕೊಠಡಿ ನಿರ್ಮಾಣ; 26 ಶಾಲೆಗಳಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.