ADVERTISEMENT

ಮಳವಳ್ಳಿ | ಸದಸ್ಯರೊಂದಿಗೆ ಅಧ್ಯಕ್ಷರ ಪ್ರವಾಸ

ಪುರಸಭೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿಗೆ ಸಭೆ ನಾಳೆ

ಟಿ.ಕೆ.ಲಿಂಗರಾಜು
Published 15 ಆಗಸ್ಟ್ 2025, 5:07 IST
Last Updated 15 ಆಗಸ್ಟ್ 2025, 5:07 IST
ಮಳವಳ್ಳಿಯ ಪುರಸಭೆ ಕಚೇರಿ
ಮಳವಳ್ಳಿಯ ಪುರಸಭೆ ಕಚೇರಿ   

ಮಳವಳ್ಳಿ: ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ವಿರುದ್ಧದ ಅವಿಶ್ವಾಸ ಗೊತ್ತುವಳಿಗೆ ಆಗಸ್ಟ್‌ 16ರಂದು ಸಭೆ ನಿಗದಿಯಾಗಿದ್ದು, ಈಗಾಗಲೇ ಅಧಿಕಾರ ಉಳಿಸಿಕೊಳ್ಳಲು ಮುಂದಾಗಿರುವ ಪುಟ್ಟಸ್ವಾಮಿ 10ಕ್ಕೂ ಹೆಚ್ಚು ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ.

23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್ 9, ಪಕ್ಷೇತರರು 7, ಕಾಂಗ್ರೆಸ್ 5 ಹಾಗೂ ಬಿಜೆಪಿಯ ಇಬ್ಬರು ಸದಸ್ಯರು ಚುನಾಯಿತರಾಗಿದ್ದಾರೆ.

ಪುರಸಭೆಯ ಮೊದಲ ಅವಧಿಯಲ್ಲಿ ಪಕ್ಷೇತರ ಹಾಗೂ ಬಿಜೆಪಿ ಸದಸ್ಯರ ಬೆಂಬಲದಿಂದ ಜೆಡಿಎಸ್‌ನ ರಾಧಾ ನಾಗರಾಜು ಅಧ್ಯಕ್ಷರಾಗಿ ಹಾಗೂ ಟಿ.ನಂದಕುಮಾರ್, ಎಂ.ಟಿ.ಪ್ರಶಾಂತ್ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದರು.

ADVERTISEMENT

ಎರಡನೇ ಅವಧಿಯಲ್ಲಿ ಮೀಸಲಾತಿ ನಿಗದಿ ತಡವಾಗಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು 17 ತಿಂಗಳು ಖಾಲಿ ಉಳಿದಿತ್ತು. ಕೊನೆಯ 13 ತಿಂಗಳ ಅವಧಿಯಲ್ಲಿ ಮೊದಲ ಆರು ತಿಂಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಪಕ್ಷೇತರ ಸದಸ್ಯರಾದ ಪುಟ್ಟಸ್ವಾಮಿ ಎನ್.ಬಸವರಾಜು, ನಂತರದ ಅವಧಿಗೆ ಮಾಜಿ ಶಾಸಕ ಕೆ.ಅನ್ನದಾನಿ ಆಪ್ತರಾದ ಜೆಡಿಎಸ್‌ನ ಆರ್.ಎನ್.ಸಿದ್ದರಾಜು ಹಾಗೂ ನಾಗೇಶ್ ಅವರಿಗೆ ಅವಕಾಶ ನೀಡಲು ಮಾತುಕತೆ ನಡೆದಿತ್ತು.

ಆದರೆ ಪುಟ್ಟಸ್ವಾಮಿ, ಎನ್.ಬಸವರಾಜು ಅವರು ನೀಡಿದ್ದ ರಾಜೀನಾಮೆಯನ್ನು ಏಕಾಏಕಿ ವಾಪಸ್ ಪಡೆದ ಹಿನ್ನೆಲೆಯಲ್ಲಿ ಮೈತ್ರಿಕೂಟ ಒಡೆದಿದೆ.

ಮಾಜಿ ಶಾಸಕ ಕೆ.ಅನ್ನದಾನಿ ಅಧ್ಯಕ್ಷರ ರಾಜೀನಾಮೆ ಕೊಡಿಸುವ ಮನವೊಲಿಕೆಗೆ ಪುಟ್ಟಸ್ವಾಮಿ ಒಪ್ಪದ ಹಿನ್ನೆಲೆಯಲ್ಲಿ ಹಲವು ಸದಸ್ಯರು ಸಹಿ ಮಾಡಿ ಅವಿಶ್ವಾಸ ಗೊತ್ತುವಳಿಗೆ ಉಪವಿಭಾಗಾಧಿಕಾರಿಗೆ ಪತ್ರ ನೀಡಿದ್ದರು. ಹೀಗಾಗಿ ಆ.16ರಂದು ಬೆಳಿಗ್ಗೆ 11ಕ್ಕೆ ಅವಿಶ್ವಾಸ ನಿರ್ಣಯಕ್ಕೆ ಸಭೆ ನಿಗದಿಯಾಗಿದೆ.

ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಹಾಗೂ ಕೆಲ ಪಕ್ಷೇತರ ಸದಸ್ಯರು ಮಾತುಕತೆ ನಡೆಸಿ ತಂತ್ರಗಾರಿಕೆಗೆ ರೂಪಿಸಿ ಪುಟ್ಟಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಸಿ ಆರ್.ಎನ್.ಸಿದ್ದರಾಜು ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದಾರೆ.

ಆದರೆ ಹಾಲಿ ಅಧ್ಯಕ್ಷ ಪುಟ್ಟಸ್ವಾಮಿ ಕಾಂಗ್ರೆಸ್ ಹಾಗೂ ಕೆಲ ಪಕ್ಷೇತರ ಸದಸ್ಯರೊಂದಿಗೆ ಪ್ರವಾಸಕ್ಕೆ ಹಾರಿದ್ದಾರೆ.

ಅವಿಶ್ವಾಸ ನಿರ್ಣಯಕ್ಕೆ ಬೆಂಬಲದ್ದೇ ಪ್ರಶ್ನೆ

ಚುನಾವಣೆಯಲ್ಲಿ ಗೆದ್ದಿದ್ದ 9 ಮಂದಿ ಜೆಡಿಎಸ್ ಸದಸ್ಯರಲ್ಲಿ ಇಬ್ಬರು ಎರಡು ವರ್ಷಗಳಿಂದ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ಈ ಮಧ್ಯೆ ಮತ್ತಿಬ್ಬರು ಸದಸ್ಯರು ಸಹ ಅವಿಶ್ವಾಸ ನಿರ್ಣಯ ಸಭೆಗೆ ಕೈಕೊಡುವ ಸಾಧ್ಯತೆ ಇದೆ. ಇದರಿಂದ ಜೆಡಿಎಸ್ 5 ಬಿಜೆಪಿಯ ಇಬ್ಬರು ಹಾಗೂ ಪಕ್ಷೇತರದಿಂದ ಗೆದ್ದಿದ್ದ ಉಪಾಧ್ಯಕ್ಷ ಎನ್.ಬಸವರಾಜು ಅವರೊಂದಿಗೆ ಇನ್ನು ಯಾವ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಬೆಂಬಲಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.