ADVERTISEMENT

ಮಳವಳ್ಳಿ ಕೊಂಡೋತ್ಸವ:ಸಿಡಿ ಹಬ್ಬಕ್ಕೆ ಅದ್ದೂರಿ ತೆರೆ; ಅಪಾರ ಸಂಖ್ಯೆಯ ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:40 IST
Last Updated 1 ಫೆಬ್ರುವರಿ 2026, 6:40 IST
ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯ ಪಟ್ಟಲದಮ್ಮನ ದೇವಸ್ಥಾನದ ಆವರಣದಲ್ಲಿ ನಡೆದ ಸಿಡಿರಣ್ಣನ ಆಚರಣೆ
ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯ ಪಟ್ಟಲದಮ್ಮನ ದೇವಸ್ಥಾನದ ಆವರಣದಲ್ಲಿ ನಡೆದ ಸಿಡಿರಣ್ಣನ ಆಚರಣೆ   

ಮಳವಳ್ಳಿ: ಅಪಾರ ಜನಸ್ತೋಮದ ನಡುವೆ ವಿಜೃಂಭಣೆಯಿಂದ ನಡೆದ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಶನಿವಾರ ಕೊಂಡೋತ್ಸವದ ಮೂಲಕ ತೆರೆಬಿತ್ತು.

ಪಟ್ಟಣದ ಎಲ್ಲ ಸಮುದಾಯಗಳ ಜನರು ಏಕತೆಯ ಪ್ರತೀಕವಾಗಿ ಆಚರಿಸುವ ಪಟ್ಟಲದಮ್ಮ ಸಿಡಿಹಬ್ಬದಲ್ಲಿನ ಸಿಡಿರಣ್ಣನ ಉತ್ಸವ ನೋಡಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದುಕೊಂಡರು.

ಹಬ್ಬದ ಆಕರ್ಷಣೆಯಾದ ಘಟ್ಟಗಳ ಮೆರವಣಿಗೆಯು ಶುಕ್ರವಾರ ರಾತ್ರಿಯಿಡೀ ಸಂಪ್ರಾದಯ ಬದ್ಧವಾಗಿ ನಡೆಯಿತು. ಮೆರವಣಿಗೆಯ ವೇಳೆ ಯುವಕ-ಯುವತಿಯರ ನೃತ್ಯ ಗಮನ ಸೆಳೆಯಿತು. ಸಿದ್ಧಾರ್ಥನಗರದ ಘಟ್ಟದ ಮೆರವಣಿಗೆ ವೇಳೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, ಎಡಿಜಿಪಿ ನಂಜುಂಡಸ್ವಾಮಿ, ತಹಶೀಲ್ದಾರ್ ಎಸ್.ವಿ.ಲೋಕೇಶ್ ಭಾಗಿಯಾಗಿದ್ದರು. ಘಟ್ಟಗಳ ಮೆರವಣಿಗೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಹಲವೆಡೆ ಭೇಟಿ ನೀಡಿದರು.

ADVERTISEMENT

ಕೋಟೆಯ ಪಟೇಲ್ ಚಿಣ್ಣೇಗೌಡರ ಮನೆ ಬಳಿ ಗಂಗಾಮತಸ್ಥರ ಬೀದಿಯ ಪಟ್ಟಲದಮ್ಮ ದೇವಸ್ಥಾನದಿಂದ ತಂದಿದ್ದ ಸಿಡಿರಣ್ಣನ ಗೊಂಬೆಯನ್ನು ಸಿಡಿ ಮರಕ್ಕೆ ಕಟ್ಟಿ, ಮಧ್ಯರಾತ್ರಿ 12 ಗಂಟೆ ವೇಳೆಗೆ ಪೂಜೆ ಸಲ್ಲಿಸಿ ಸಿಡಿ ಬಂಡಿ ಎಳೆಯುವುದಕ್ಕೆ ಚಾಲನೆ ನೀಡಲಾಯಿತು. ಶಾರ್ಗಪಾಣಿ ಬೀದಿ, ಕೋಟೆ ಬೀದಿ, ಮೈಸೂರು ರಸ್ತೆ, ಕುಪ್ಪಸ್ವಾಮಿ ವೃತ್ತ, ಸುಲ್ತಾನ್ ರಸ್ತೆ ಮೂಲಕ ಸಾಗಿದ ಉತ್ಸವ ಶನಿವಾರ ಬೆಳಿಗ್ಗೆ 10.30ರ ಸಮಯಕ್ಕೆ ಪಟ್ಟಲದಮ್ಮನ ದೇವಸ್ಥಾನ ಪ್ರವೇಶಿಸಿತು.

ಶನಿವಾರ ಬೆಳಿಗ್ಗೆ 10ಗಂಟೆ ವೇಳೆಗೆ ದೇವಸ್ಥಾನ ಆವರಣಕ್ಕೆ ಬಂದ ಸಿಡಿ ಬಂಡಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸಿ ಪಟ್ಟಲದಮ್ಮನ ಹಾಗೂ ವಳಗೆರೆ ಹುಚ್ಚಮ್ಮ ದೇವರ ದರ್ಶನ ಪಡೆದುಕೊಂಡರು. ಮಾಜಿ ಶಾಸಕ ಕೆ.ಅನ್ನದಾನಿ ಸಹ ಮುಖಂಡರೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದರು.

ತಹಶೀಲ್ದಾರ್ ಎಸ್.ವಿ.ಲೋಕೇಶ್, ಮನ್ ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ದೊಡ್ಡಯ್ಯ, ಮುಖಂಡರಾದ ಕೆ.ಜೆ.ದೇವರಾಜು, ಸಂತೋಷ್ ಕುಮಾರ್, ಬಂಕ್ ಮಹದೇವು, ಸಿ.ವೇದಮೂರ್ತಿ ಹಾಗೂ ಮುಖಂಡರು ಭಾಗಿಯಾಗಿದ್ದರು.

ಶನಿವಾರ ಬೆಳಿಗ್ಗೆ 11.30ರ ವೇಳೆಗೆ ಬೀದಿಯ ಅಡ್ಡೆನಿಂಗಯ್ಯನ ಕೇರಿಯ ರಘು ಮೊದಲಿಗರಾಗಿ ಕೊಂಡ ಹಾದರು. ನಂತರ ಹಕರೆ ಹೊತ್ತ ಸುಮಾರು 50ಕ್ಕೂ ಅಧಿಕ ಮಂದಿ ಸರದಿ ಸಾಲಿನಲ್ಲಿ ಕೊಂಡ ಹಾಯುವ ಮೂಲಕ ಹರಕೆ ತೀರಿಸಿದರು. ಕೊಂಡೋತ್ಸವದ ಮೂಲಕ ಸಿಡಿಹಬ್ಬಕ್ಕೆ ತೆರೆ ಬಿದ್ದಿದೆ. ಲಕ್ಷಾಂತರ ಮಂದಿ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ.ತಿಮ್ಮಯ್ಯ ಹಾಗೂ ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ಸಿಪಿಐ ಬಿ.ಎಸ್.ಶ್ರೀಧರ್, ಬಸವರಾಜು ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.

ಅನಂತ್ ರಾಂ ವೃತ್ತದ ಬಳಿ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, ಎಡಿಜಿಪಿ ನಂಜುಂಡಸ್ವಾಮಿ ಚಾಲನೆ ನೀಡಿ ಆಟಗಾರರಿಗೆ ಶುಭ ಕೋರಿದರು.

ಮಳವಳ್ಳಿ ಪಟ್ಟಣದ ಐತಿಹಾಸಿಕ ಪಟ್ಟಲದಮ್ಮನ ಸಿಡಿಹಬ್ಬದ ಅಂಗವಾಗಿ ನಡೆದ ಕೊಂಡೊತ್ಸವದಲ್ಲಿ ಹರಕೆಹೊತ್ತ ಹಲವರು ಕೊಂಡ ಹಾಯ್ದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.