ADVERTISEMENT

ಮಳವಳ್ಳಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಸ್ಫೂರ್ತಿ ಸಿಂಚನ’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:05 IST
Last Updated 15 ಫೆಬ್ರುವರಿ 2026, 5:05 IST
<div class="paragraphs"><p>ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ವತಿಯಿಂದ ಮಳವಳ್ಳಿ ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಸ್ಫೂರ್ತಿ ಸಿಂಚನ’ ಪರೀಕ್ಷಾ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿದರು.</p></div>

ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ವತಿಯಿಂದ ಮಳವಳ್ಳಿ ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಸ್ಫೂರ್ತಿ ಸಿಂಚನ’ ಪರೀಕ್ಷಾ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿದರು.

   

ಮಳವಳ್ಳಿ: ‘ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ. ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ, ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಎದುರಿಸಿ. ಯಾವುದೇ ಕಾರಣಕ್ಕೂ ಎದೆಗುಂದಬೇಡಿ’ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. 

ಪಟ್ಟಣದ ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಶನಿವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಸ್ಫೂರ್ತಿ ಸಿಂಚನ’ ಪರೀಕ್ಷಾ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

ADVERTISEMENT

ಸುದ್ದಿ ಪ್ರಸಾರದ ಜೊತೆಗೆ ಸಾಮಾಜಿಕ ಕಳಕಳಿಯಿಂದ ಜನಪರವಾಗಿ ಕೆಲಸ ಮಾಡುತ್ತಿರುವ ‘ಪ್ರಜಾವಾಣಿ’ ಸಂಸ್ಥೆಯು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಂಥ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

‘ಜೀವನದ ಕಡೆಯ ದಿನದ ತನಕ ಕಲಿಕೆ ನಿರಂತರವಾಗಿರುತ್ತದೆ. ಆಸಕ್ತಿ, ಶ್ರದ್ಧೆ, ಕುತೂಹಲ, ಏಕಾಗ್ರತೆ, ನಿರಂತರ ಪರಿಶ್ರಮದಿಂದ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಸಾಧಿಸಬಹುದು. ಓದಿದ ಪಾಠಗಳನ್ನು ಪುನರಾವರ್ತನೆ ಮಾಡುವುದು, ಗುಂಪು ಚರ್ಚೆ ಮಾಡುವ ಮೂಲಕ ಮನನ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.  

ಧೃತಿಗೆಡಬೇಡಿ:

‘ಕೆಲವು ಮಕ್ಕಳಿಗೆ ಬುನಾದಿ ಶಿಕ್ಷಣ ಸರಿಯಾಗಿ ಸಿಕ್ಕಿರುವುದಿಲ್ಲ. ಇಂಥ ಮಕ್ಕಳು ಅನುತ್ತೀರ್ಣಗೊಂಡರೆ ಧೃತಿಗೆಡಬಾರದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಜೀವನದಲ್ಲಿ ಫೇಲ್ ಆದಂತೆ ಅಲ್ಲ. ಸೋತು ಗೆದ್ದವರು ಬಹಳ ಮಂದಿ ಇದ್ದಾರೆ. ಸಮಾಜದ ನಿಕೃಷ್ಟತೆಗೆ ಒಳಗಾದವರು ಭವಿಷ್ಯದಲ್ಲಿ ಪೂಜನೀಯ ಸ್ಥಾನ ಪಡೆದಿರುವ ಉದಾಹರಣೆಗಳೂ ಇವೆ. ಜೀವನ ತುಂಬಾ ದೊಡ್ಡದು. ಪರೀಕ್ಷೆಯನ್ನು ಖುಷಿ ಖುಷಿಯಾಗಿ ಎದುರಿಸಿ. ಜೀವ ಕಳೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಬೇಡಿ’ ಎಂದು ಆತ್ಮ ಸ್ಥೈರ್ಯ ತುಂಬಿದರು.

ವಿದ್ಯಾರ್ಥಿಗಳ ಸಂವಾದ: 

ಓದಿದ್ದು ಮರೆತು ಹೋಗುತ್ತದೆ ಇದಕ್ಕೆ ಪರಿಹಾರವೇನು? ಹೆಚ್ಚು ಅಂಕ ಗಳಿಸಲು ಟಿಪ್ಸ್‌ ನೀಡಿ? ನಿಮ್ಮಂತೆ ನಾವು ಐಎಎಸ್‌ ಅಧಿಕಾರಿಯಾಗಬಹುದಾ? ಭಯವಿಲ್ಲದೆ ಪರೀಕ್ಷೆ ಎದುರಿಸುವುದು ಹೇಗೆ? ದಿನಕ್ಕೆ ಎಷ್ಟು ಗಂಟೆ ಓದಬೇಕು? ಮುಂತಾದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಐಎಎಸ್‌ ಅಧಿಕಾರಿ ಕೆ.ಆರ್‌.ನಂದಿನಿ ಅವರನ್ನು ಕೇಳಿ ಉತ್ತರ ಪಡೆದುಕೊಂಡರು. 

ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್ಟ ಮಾತನಾಡಿ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರ ಮಾದರಿಯಲ್ಲೇ ರಾಜ್ಯದ ಎಲ್ಲ ಶಾಸಕರು ಪ್ರಯತ್ನಿಸಿದರೆ, ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಹೇಳಿದರು. 

ಕಾರ್ಯಾಗಾರವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸಿದರು. ಪ್ರಜಾವಾಣಿ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ಪ್ರಸರಣ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್‌, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎ. ಲೋಕೇಶ್, ತಹಶೀಲ್ದಾರ್ ಎಸ್.ವಿ. ಲೋಕೇಶ್,  ಡಯಟ್ ನ ಹಿರಿಯ ಉಪನ್ಯಾಸಕ ಶ್ರೀಕಂಠಪ್ರಸಾದ್, ತಾ.ಪಂ.ಇಒ ಎಚ್.ಜಿ. ಶ್ರೀನಿವಾಸ್, ಲೋಕೋಪಯೋಗಿ ಇಲಾಖೆ ಎಇಇ ಎ.ಎಂ. ಸೋಮಶೇಖರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ. ನಂಜಮಣಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿನೋದ್, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಶಂಕರ ಹಿರೇಮಠ, ಎಕ್ಸಿಕ್ಯೂಟಿವ್‌ ಮಲ್ಲೇಶ್‌ ಪಾಲ್ಗೊಂಡಿದ್ದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು 
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮತ್ತು ಇನ್ನಿತರ ಮನರಂಜನೆಗಳಿಂದ ಅಲ್ಪಕಾಲ ದೂರವಿರಿ. ಇರುವ ಕಾಲಾವಕಾಶವನ್ನು ಓದಿಗೆ ಮೀಸಲಿಡಿ
ಎಸ್.ವಿ.ಲೋಕೇಶ್ ತಹಶೀಲ್ದಾರ್ ಮಳವಳ್ಳಿ

ವಿಶೇಷ ಚೇತನರ ಅನನ್ಯ ಸಾಧನೆ

ಜಮ್ಮು ಕಾಶ್ಮೀರದಲ್ಲಿ ಹುಟ್ಟಿದ ವಿಶೇಷ ಚೇತನ ಶೀತಲ್ ದೇವಿ ಅವರು ಭುಜಗಳಿಲ್ಲದ ಕಾರಣ ಬಲಗಾಲಿನಿಂದ ಬಿಲ್ಲು ಹಿಡಿದು ಬಾಯಿ ಮತ್ತು ಎಡಗಾಲಿನ ಸಹಾಯದಿಂದ ಬಿಲ್ಲುಗಾರಿಕೆ ಮಾಡುತ್ತಾರೆ. ಅಂತರರಾಷ್ಟ್ರೀಯ ಪ್ಯಾರಾ-ಆರ್ಚರ್ ಆದ ಶೀತಲ್‌ ಅವರು 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಏಷ್ಯಾ ಕಪ್‌ಗೆ ಆಯ್ಕೆಯಾದ ಮೊದಲ ಭಾರತೀಯ ಪ್ಯಾರಾ-ಅಥ್ಲೀಟ್ ಆಗಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಹೇಳಿದರು.  ಎರಿಕ್ ವೈಹೆನ್ಮಯರ್ ಅಂಧರಾಗಿದ್ದರೂ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ವ್ಯಕ್ತಿ. 14ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರೂ ಕೈಗಳನ್ನೇ ಕಣ್ಣುಗಳನ್ನಾಗಿ ಮಾಡಿಕೊಂಡು ಶಿಖರ ಏರಿದ್ದಾರೆ. ಇಂಥವರು ನಿಮಗೆ ಸ್ಫೂರ್ತಿಯಾಗಬೇಕು. ಪ್ರೇರಣಾದಾಯಕ 5 ನಿಮಿಷಗಳ ವಿಡಿಯೊವನ್ನು ನಿತ್ಯ ಗ್ರೂಪಿನಲ್ಲಿ ಹಾಕುತ್ತೇವೆ. ಇವರಿಂದ ಸ್ಫೂರ್ತಿ ಪಡೆದು ಜೀವನದಲ್ಲಿ ಯಶಸ್ಸು ಗಳಿಸಿ ಎಂದರು.

‘ಕಲಿಕಾಂಶ ಅರ್ಥ ಮಾಡಿಕೊಳ್ಳಿ’

ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಶೇಕಡವಾರು ಗುಣಾತ್ಮಕ ಅಂಕಗಳನ್ನು ಪಡೆಯಬೇಕಾದರೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೋತ್ತರಗಳನ್ನು ಹೆಚ್ಚು ಅಧ್ಯಯನ ಮಾಡಬೇಕು. ಇದರ ಜೊತೆಗೆ ಪಠ್ಯದ ಒಳಭಾಗದಿಂದಲೂ ಪ್ರಶ್ನೆಗಳು ಬರುವುದರಿಂದ ಪಠ್ಯದ ಕಲಿಕಾಂಶಗಳನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಂಡು ಉತ್ತರಿಸಬೇಕು ಎಂದು ಕನ್ನಡ ವಿಷಯ ಸಂಪನ್ಮೂಲ ವ್ಯಕ್ತಿ ಸಿ.ಚಿಕ್ಕನಾಯಕ ತಿಳಿಸಿದರು. 

‘ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸಿ’

‘ಸಮಾಜ ವಿಜ್ಞಾನವು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯವಾಗಿದ್ದು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗಿದೆ. ಪರೀಕ್ಷೆಯಲ್ಲಿ ಶೇ 100 ಅಂಕ ಪಡೆಯಲು ಪಠ್ಯದ ಅಧ್ಯಯನದ ಜೊತೆಗೆ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಕಳೆದ ಸಾಲಿನ ಉತ್ತರ ಪತ್ರಿಕೆಗಳನ್ನು ಅವಲೋಕನ ಮಾಡುವುದರ ಮೂಲಕ ಸಮಂಜಸ ಪ್ರಶ್ನೋತ್ತರಗಳನ್ನು ಸಿದ್ಧಪಡಿಸಿಕೊಳ್ಳಬೇಕು’ ಎಂದು ಸಮಾಜ ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿ ಕೆ.ಎನ್.ವೆಂಕಟೇಗೌಡ ತಿಳಿಸಿದರು.

‘17 ಚಿತ್ರಗಳನ್ನು ಅಭ್ಯಾಸ ಮಾಡಿ’ ‘

ವಿಜ್ಞಾನ ವಿಷಯವನ್ನು ಸುಲಭವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರಬಹುದಾದ 17 ಚಿತ್ರಗಳನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿಕೊಳ್ಳಬೇಕು. ಭೌತ ಪರಿಮಾಣಗಳು ಮತ್ತು ಏಕಮಾನಗಳು ವಿದ್ಯುತ್ ಮಂಡಲದಲ್ಲಿ ಬಳಸುವ ಘಟಕಗಳ ಚಿಹ್ನೆಗಳು ಪ್ರಮುಖ ವ್ಯಾಖ್ಯಾನಗಳು 13 ವ್ಯತ್ಯಾಸಗಳು ಸರಳ ಲೆಕ್ಕಗಳು ಎಲೆಕ್ಟ್ರಾನ್ ಚುಕ್ಕಿ ರಚನೆ ಸೇರಿದಂತೆ ಇಡೀ ಪಠ್ಯಪುಸ್ತಕವನ್ನು ಸತತವಾಗಿ ಅಭ್ಯಸಿಸುವುದನ್ನು ರೂಢಿಸಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು’ ಎಂದು ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿ ನಾಗರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.