ADVERTISEMENT

ಮಳವಳ್ಳಿ: ಕಾಂಗ್ರೆಸ್ ತೆಕ್ಕೆಗೆ ಮತ್ತೆ ಟಿಎಪಿಸಿಎಂಎಸ್ ಆಡಳಿತ

5 ಸ್ಥಾನಕ್ಕೆ ಜೆಡಿಎಸ್ ತೃಪ್ತಿ; ತಳಗವಾದಿಯ ದಿಲೀಪ್ ಕುಮಾರ್ ಗೆ 147 ಮತಗಳ ಗೆಲುವು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 2:35 IST
Last Updated 30 ಸೆಪ್ಟೆಂಬರ್ 2025, 2:35 IST
ಮಳವಳ್ಳಿಯ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಮತ್ತು ರೂಪಾಂತರಗೊಳಿಸುವ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರನ್ನು ಮುಖಂಡರು ಅಭಿನಂದಿಸಿದರು 
ಮಳವಳ್ಳಿಯ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಮತ್ತು ರೂಪಾಂತರಗೊಳಿಸುವ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರನ್ನು ಮುಖಂಡರು ಅಭಿನಂದಿಸಿದರು    

ಮಳವಳ್ಳಿ: ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಮತ್ತು ರೂಪಾಂತರಗೊಳಿಸುವ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಟಿಎಪಿಸಿಎಂಎಸ್ ನ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ 14 ಸ್ಥಾನಗಳಲ್ಲಿ ಹಲಗೂರು ಕ್ಷೇತ್ರದಿಂದ ಕಾಂಗ್ರೆಸ್ ನ ಮಾಲಾಶ್ರೀ ಅವಿರೋಧ ಆಯ್ಕೆಯಾಗಿದ್ದರು. ಉಳಿದ 13 ಸ್ಥಾನಗಳಿಗೆ ಸಂಘದ ಸಮುದಾಯದ ಭವನ ಹಾಗೂ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8 ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತ್ತ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡರೆ, ಅತ್ತ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಐದು ಸ್ಥಾನಗಳನ್ನು ಗೆದ್ದು ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದೆ.

ಎ ತರಗತಿಯ ಎಲ್ಲ ಆರು ಸ್ಥಾನಗಳಲ್ಲಿ ಕಾಂಗ್ರೆಸ್ ನ ಕೆ.ಜೆ.ದೇವರಾಜು, ಕೆ.ಪಿ.ನರೇಂದ್ರ ಕೆ.ಎಂ.ಪುಟ್ಟು, ಎಂ.ಲಿಂಗರಾಜು, ಬಿ.ಪುಟ್ಟಬಸವಯ್ಯ, ವಿ.ಎನ್.ಮನು ಹಾಗೂ ಎನ್.ಸತೀಶ್ ಗೆಲುವು ಸಾಧಿಸಿದ್ದಾರೆ. ಬಿ ತರಗತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಎಂ.ಮಾದಯ್ಯ(ಮಲ್ಲು) ಹಾಗೂ ದಿಲೀಪ್ ಕುಮಾರ್(ವಿಶ್ವ) ಗೆಲುವು ಪಡೆದುಕೊಂಡರೆ, ಇತ್ತ ಜೆಡಿಎಸ್-ಬಿಜೆಪಿ ಬೆಂಬಲಿತ ಎಚ್.ವಿ.ಶಿವರುದ್ರಪ್ಪ, ಎನ್.ಶೋಭಾ, ರತ್ನಮ್ಮ, ರಾಮಣ್ಣ ಹಾಗೂ ಶ್ರೀಧರ್ ಗೆದ್ದಿದ್ದಾರೆ.

ADVERTISEMENT

ಚುನಾವಣಾಧಿಕಾರಿ ತಹಶೀಲ್ದಾರ್ ಎಸ್.ವಿ.ಲೋಕೇಶ್ ಅವರು ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಸಿಪಿಐ ಎಂ.ರವಿಕುಮಾರ್ ಅವರ ನೇತೃತ್ವದಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು. ಬಹುತೇಕ ಚುನಾವಣೆ ಶಾಂತಿಯುತವಾಗಿ ನಡೆಯಿತು.

ಆರೋಪ ನಿರಾಧಾರ: ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ ನಿರ್ದೇಶಕರನ್ನು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಹಾಗೂ ಟಿಎಪಿಎಎಂಎಸ್ ಅಧ್ಯಕ್ಷ ಟಿ.ಸಿ.ಚೌಡಯ್ಯ ನೇತೃತ್ವದಲ್ಲಿ ಮುಖಂಡರು ಅಭಿನಂದಿಸಿದರು.

ನಂತರ ಸಿ.ಪಿ.ರಾಜು ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಜೆ.ದೇವರಾಜು ಮಾತನಾಡಿ, ಬಿ ತರಗತಿಯಲ್ಲಿ ಕಾಂಗ್ರೆಸ್ ಗೆ ಅಲ್ಪ ಹಿನ್ನೆಡೆಯಾಗಿದೆ. ಆದರೆ ಎರಡು ಎ ತರಗತಿಯ ಎಲ್ಲ 6 ಸ್ಥಾನಗಳನ್ನು ಗೆದ್ದಿರುವುದು ಕಾಂಗ್ರೆಸ್ ನ ಸದೃಢ ಸಂಘಟನೆಗೆ ಸಾಕ್ಷಿಯಾಗಿದೆ ಎಂದರು.

ಅವಿರೋಧವಾಗಿ ಆಯ್ಕೆಯಾಗಿರುವ ನಿರ್ದೇಶಕರು ಸೇರಿದಂತೆ 9 ಸ್ಥಾನಗಳನ್ನು ಕಾಂಗ್ರೆಸ್ ಹೊಂದಿದ್ದು ಟಿಎಪಿಸಿಎಂಎಸ್ ನ ಆಡಳಿತ ಚುಕ್ಕಾಣಿ ಹಿಡಿಯಲಿದ್ದೇವೆ. ಜೆಡಿಎಸ್ ನವರ ಆರೋಪ ನಿರಾಧಾರವಾಗಿದೆ
ಸಿ.ಪಿ.ರಾಜು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಿರ್ದೇಶಕರನ್ನು ಅಭಿನಂದಿಸಿ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್ ಹಾಗೂ ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ.ರವಿ ಕಂಸಾಗರ ಮಾತನಾಡಿ ಚುನಾವಣೆಯಲ್ಲಿ ಶಾಸಕರು ಸಹಕಾರ ಸಂಘದ ಪ್ರತಿನಿಧಿಗಳ ಮೇಲೆ ಪ್ರಭಾವ ಬೀರಿ ವಾಮಮಾರ್ಗದಿಂದ ಎ ತರಗತಿಯ ಎಲ್ಲ 6 ಸ್ಥಾನಗಳನ್ನು ಗೆದ್ದಿದ್ದು ಬಿ ತರಗತಿಯ 7 ಸ್ಥಾನಗಳ ಪೈಕಿ 5 ಸ್ಥಾನಗಳಲ್ಲಿ ನಮ್ಮ ಮೈತ್ರಿಕೂಟದ ಅಭ್ಯರ್ಥಿಗಳನ್ನು ಸದಸ್ಯರು ಹಾಗೂ ರೈತರು ಬೆಂಬಲಿಸಿದ್ದಾರೆ. ಕಾಂಗ್ರೆಸ್ ನವರಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.