ಮಳವಳ್ಳಿ: ‘ರಾಜ್ಯದಲ್ಲಿ ಕ್ಷೀರಕ್ರಾಂತಿಗೆ ಮಹಿಳಾ ಶಕ್ತಿಯೇ ಕಾರಣ, ಅವರ ಬದುಕಿಗೆ ಆಸರೆಯಾಗಿರುವ ಹೈನುಗಾರಿಕೆಯು ಜೀವನ ನಿರ್ವಹಣೆಯೊಂದಿಗೆ ಆರ್ಥಿಕ ಸದೃಢತೆಗೆ ನಾಂದಿಯಾಗಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ ಮನ್‌ಮುಲ್ ನೂತನ ನಿರ್ದೇಶಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೀರಭಾಗ್ಯವನ್ನು ಘೋಷಣೆ ಮಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಕ್ಕುವಂತೆ ಮಾಡಿದರು. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಹಸಿವು ಹಾಗೂ ಸಾಮಾಜಿಕ ನ್ಯಾಯದ ಅರಿವಿಲ್ಲದ ವಿರೋಧಿಗಳು ಟೀಕೆ ಮಾಡುತ್ತಾರೆ. ಬಡವರ ಪರ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘ನಂದಿನಿ ಬ್ರ್ಯಾಂಡ್ ಅನ್ನು ದೆಹಲಿಗೂ ವಿಸ್ತರಿಸಿದ್ದು, ಅಲ್ಲಿನ ಜನರು ನಂದಿನಿ ಹಾಲನ್ನು ಸ್ವೀಕರಿಸುತ್ತಿದ್ದರೂ ಕೂಡ ಗುಜರಾತ್‌ನ ಅಮುಲ್ ಸಂಸ್ಥೆಯವರು ಪಿತೂರಿ ಮಾಡುತ್ತಿದ್ದು, ಅವರಿಗೆ ತಕ್ಕ ಪಾಠವನ್ನು ಕಲಿಸಬೇಕಿದೆ. ಪಿತೂರಿಗೆ ಬಗ್ಗದೇ ದೆಹಲಿ ಸೇರಿದಂತೆ ಹೊರ ರಾಜ್ಯದಲ್ಲಿ ನಂದಿನಿ ಹಾಲಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲಾಗಿದೆ’ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ನೂತನ ನಿರ್ದೇಶಕ ಆರ್.ಎನ್.ವಿಶ್ವಾಸ್ ಮತ್ತು ಡಿ.ಕೃಷ್ಣೇಗೌಡ ಮಾತನಾಡಿ, ‘ಶುದ್ಧ ಹಾಲು ಪೂರೈಕೆಯಲ್ಲಿ ತಾಲ್ಲೂಕಿಗೆ ಮೂರನೇ ಸ್ಥಾನ ಬಂದಿದೆ. ಮುಂದಿನ ದಿನಗಳಲ್ಲಿ ನಾವು ಪ್ರಥಮ ಸ್ಥಾನಕ್ಕೆ ಬರುವಂತೆ ಹಾಲು ಉತ್ಪಾದಕರು ಸಹಕಾರ ನೀಡಬೇಕು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಸಲಹೆ ಸಹಕಾರದೊಂದಿಗೆ ಹೈನುಗಾರಿಕೆಯ ಅಭಿವೃದ್ಧಿಗೆ ಶ್ರಮ ವಹಿಸುವುದಾಗಿ’ ತಿಳಿಸಿದರು.
ನಿವೃತ್ತ ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು. ಅರ್ಹ ಪಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ಹಾಗೂ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.
ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ನಿರ್ದೇಶಕ ಹರೀಶ್‌ಬಾಬು, ವ್ಯವಸ್ಥಾಪಕ ನಿರ್ದೇಶಕ ಮಂಜೇಶ್, ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಡಾ.ಅಕಲಪ್ಪರೆಡ್ಡಿ, ಸದಾಶಿವ, ಸಿದ್ದೇಗೌಡ, ಡಾ.ತೇಜಸ್ವಿನಿ, ಡಾ.ಯೋಗೇಶ್, ಜಾನಪದ ಕಲಾವಿದ ಮಹದೇವಸ್ವಾಮಿ ಭಾಗಿಯಾಗಿದ್ದರು.
ಪಟ್ಟಣದಲ್ಲಿ ಮನ್‌ಮುಲ್‌ಗೆ ಸೇರಿದ 2 ಎಕರೆ ಜಾಗದ ಸಮಸ್ಯೆಯು ಈಗಾಗಲೇ ಬಗೆಹರಿದಿದ್ದು ಇನ್ನೂ ಕೆಲವೇ ದಿನಗಳಲ್ಲಿ ಸಂಸ್ಥೆಯ ಹೆಸರಿಗೆ ಆರ್‌ಟಿಸಿ ಬರಲಿದೆ. ರೈತರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ಅನುಕೂಲವಾಗುವಂತೆ ಸಧ್ಯದಲ್ಲಿಯೇ ₹5 ಕೋಟಿ ವೆಚ್ಚದಲ್ಲಿ ಮನ್‌ಮುಲ್ ಉಪ ನಿರ್ದೇಶಕ ಕಚೇರಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.