ADVERTISEMENT

ಮಳವಳ್ಳಿ: 5 ಲಕ್ಷ ಮಂದಿಗೆ ಪ್ರಸಾದ

ಜಯಂತ್ಯುತ್ಸವದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಭಾಗಿ, 500 ಸ್ವಯಂ ಸೇವಕರಿಂದ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:01 IST
Last Updated 21 ಡಿಸೆಂಬರ್ 2025, 5:01 IST
ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಪ್ರದೇಶದಲ್ಲಿ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ (ಎಡ ಚಿತ್ರ). ಮಳವಳ್ಳಿ ಪಟ್ಟಣದ ಪೇಟೆ ಗಂಗಾಮತ ಬೀದಿಯಲ್ಲಿ ಶನಿವಾರ ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವದ ಭಾವೈಕ್ಯತಾ ಯಾತ್ರೆಯು ಸಾಗಿತು
ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಪ್ರದೇಶದಲ್ಲಿ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ (ಎಡ ಚಿತ್ರ). ಮಳವಳ್ಳಿ ಪಟ್ಟಣದ ಪೇಟೆ ಗಂಗಾಮತ ಬೀದಿಯಲ್ಲಿ ಶನಿವಾರ ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವದ ಭಾವೈಕ್ಯತಾ ಯಾತ್ರೆಯು ಸಾಗಿತು   

ಮಳವಳ್ಳಿ: ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವದ ಪ್ರಮುಖ ವ್ಯವಸ್ಥೆಯಲ್ಲಿ ಒಂದಾದ ನಿತ್ಯ ದಾಸೋಹದಲ್ಲಿ ಕಳೆದ ಐದು ದಿನಗಳಿಂದ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ.

ನಿತ್ಯ ಮೂರು ಅವಧಿಗೆ ತಿಂಡಿ, ಊಟ, ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಿಸಲಾಗುತ್ತಿದೆ. 500ಕ್ಕೂ ಅಧಿಕ ಸಿಬ್ಬಂದಿಗಳು 15ರಿಂದ ಆರಂಭವಾದ ದಾಸೋಹದಲ್ಲಿ ಇಲ್ಲಿಯವರೆಗೂ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿಗೆ ಪ್ರಸಾದ ತಯಾರು ಮಾಡಿ ವ್ಯವಸ್ಥಿತವಾಗಿ ಬಡಿಸಲಾಗಿದೆ.

ಪ್ರತಿನಿತ್ಯವೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಖುದ್ದು ದಾಸೋಹ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ
ಭಕ್ತರ ಜೊತೆಗೂಡಿ ಜನರಿಗೆ ಪ್ರಸಾದ ಬಡಿಸುತ್ತಿದ್ದಾರೆ. ಸಾಗಾರೋಪಾದಿಯಲ್ಲಿ ಹರಿದು ಬರುತ್ತಿರುವ ಲಕ್ಷಾಂತರ
ಮಂದಿ ದಾಸೋಹ ಸ್ವೀಕರಿಸುತ್ತಿದ್ದಾರೆ. ಕೊನೆಯ ದಿನವಾದ ಭಾನುವಾರ ಲಕ್ಷಕ್ಕೂ ಮಂದಿಗೆ ಭಾಗಿಯಾಗುವ ಸಾಧ್ಯತೆ ಇದೆ.

ADVERTISEMENT

500 ಸ್ವಯಂ ಸೇವಕರು:

ಪಟ್ಟಣದ ಶಾಂತಿ ಕಾಲೇಜು ಮುಂಭಾಗ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದ ಯಶಸ್ವಿಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಏಳು ದಿನಗಳ ಜಯಂತ್ಯುತ್ಸವಕ್ಕೆ ಕಳೆದ ಒಂದು ತಿಂಗಳಿಂದ ಜೆಎಸ್ಎಸ್ ವಿದ್ಯಾಪೀಠದ ಸುಮಾರು 50 ಮಂದಿ ಸಿಬ್ಬಂದಿಗಳೊಂದಿಗೆ 500 ಸ್ವಯಂ ಸೇವಕರು ವಿವಿಧ ಸಮಿತಿಗಳ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. 

ಪ್ರತಿನಿತ್ಯ ಲಕ್ಷಾಂತರ ಮಂದಿ ಜಯಂತ್ಯುತ್ಸವದಲ್ಲಿ ಭಾಗಿಯಾಗುತ್ತಿದ್ದು, ಪೊಲೀಸರು ಸೇರಿದಂತೆ ಎಲ್ಲರೂ ಕರ್ತವ್ಯದಲ್ಲಿ ತೊಡಗಿದ್ದಾರೆ.

ವೇದಿಕೆಯ ಸುತ್ತ, ವಸ್ತು ಪ್ರದರ್ಶನ ಮಳಿಗೆಗಳು, ದಾಸೋಹದ ವಿಭಾಗ, ಪಾರ್ಕಿಂಗ್ ಸ್ಥಳ ಸೇರಿದಂತೆ ಹಲವೆಡೆ ಪುರಸಭೆಯ ಪೌರಕಾರ್ಮಿಕರ ಜೊತೆಗೂಡಿ ಸ್ವಚ್ಛತೆಯಲ್ಲಿ ತೊಡಕೊಂಡಿದ್ದಾರೆ. ಪ್ರತಿನಿತ್ಯ ಭೇಟಿ ನೀಡುವ ಜನರ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಇಲಾಖೆಯ 10ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.

ವಸ್ತು ಪ್ರದರ್ಶನದ ಮಳಿಗೆಗಳಲ್ಲಿ ಸುತ್ತೂರು ಮಠದ ಧಾರ್ಮಿಕ ಪರಂಪರೆಯನ್ನು ನಾಡಿಗೆ ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಶಿಕ್ಷಣ ಇಲಾಖೆಯಿಂದ ಗಗನಚುಕ್ಕಿ ಜಲಪಾತದ ವೈಭವ, ರೋಬೋಟ್ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ವಿಜ್ಞಾನದ ಅವಿಷ್ಕಾರಗಳ ಮೂಲಕ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಜನರ ಗಮನ ಸೆಳೆಯುತ್ತಿದ್ದಾರೆ.

ಮಳವಳ್ಳಿ ಪಟ್ಟಣದ ಪೇಟೆ ಗಂಗಾಮತ ಬೀದಿಯಲ್ಲಿ ಶನಿವಾರ ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವದ ಭಾವೈಕ್ಯತಾ ಯಾತ್ರೆಯು ಸಾಗಿತು
ಸಿದ್ದರಾಮಯ್ಯ
ಶಿವಕುಮಾರ್

ಮಳವಳ್ಳಿ: ಪಟ್ಟಣದ ಪೇಟೆ ಗಂಗಾ ಮತಬೀದಿಯಲ್ಲಿ ಶನಿವಾರ ಸಡಗರ ಸಂಭ್ರಮದಿಂದ ಜಯಂತ್ಯುತ್ಸವದ ಭಾವೈಕ್ಯತಾ ಯಾತ್ರೆಯನ್ನು ನೂರಾರು ಮಂದಿ ಅದ್ದೂರಿಯಾಗಿ ಸ್ವಾಗತಿಸಿದರು. ವಿವಿಧೆಡೆ 7 ಗಂಟೆ ಕಾಲ ಯಾತ್ರೆ ಸಾಗಿತು. ಬೀದಿಯ ಮಹಾದ್ವಾರದ ಬಳಿ ಆಗಮಿಸಿದ ಜಗದ್ಗುರುಗಳ ಉತ್ಸವಮೂರ್ತಿ ಹಾಗೂ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ತಮಟೆ ವಾದ್ಯ ವೀರಗಾಸೆ ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಗಂಗಾ ಮತಸ್ಥರ ಸಂಪ್ರದಾಯ ಬದ್ಧ ಆಚರಣೆಯಾದ ಕಂಸಾಳೆ ದಾಸರ ಪದಗಳ ಮೂಲಕ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಗಂಗಾಪರಮೇಶ್ವರಿ ಸಹಕಾರ ಸಂಘದ ಆವರಣದಲ್ಲಿ ಸಾತನೂರು ವಿರಕ್ತಮಠದ ನಿಜಗುಣ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ ‘ಜಯಂತ್ಯುತ್ಸವ ಜಾತಿ ಜಾತಿಗಳ ನಡುವಿನ ವೈಮನಸ್ಸನ್ನು ದೂರ ಮಾಡಿ ನಾವೆಲ್ಲ ಒಂದೇ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ’ ಎಂದು ಬಣ್ಣಿಸಿದರು. ಕುಂತೂರು ಪಟ್ಟದ ಮಠದ ಶಿವಫ್ರಭುಸ್ವಾಮೀಜಿ ಮಾತನಾಡಿದರು. ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಮಾಜಿ ಶಾಸಕ ಕೆ.ಅನ್ನದಾನಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪುತ್ರ ಯುವರಾಜ್ ನರೇಂದ್ರಸ್ವಾಮಿ ಸಮಿತಿಯ ಆರ್.ಎನ್.ವಿಶ್ವಾಸ್ ಪಾಲ್ಗೊಂಡಿದ್ದರು.

ಸಮಾರೋಪದಲ್ಲಿ ಸಿಎಂ ಡಿಸಿಎಂ ಭಾಗಿ

ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ರಾಜನಹಳ್ಳಿ ವಾಲ್ಮೀಕಿ ಮಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಸಮ್ಮುಖದಲ್ಲಿ ಭಾನುವಾರ ಸಂಜೆ 5 ಗಂಟೆಗೆ ನಡೆಯುವ ಜಯಂತ್ಯುತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುವರು. ಸಚಿವೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಎಚ್.ಸಿ.ಮಹದೇವಪ್ಪ  ಎಸ್.ಎಸ್.ಮಲ್ಲಿಕಾರ್ಜುನ್ ಲಕ್ಷ್ಮಿ ಆರ್.ಹೆಬ್ಬಾಳ್ಕರ್ ಶಾಸಕರಾದ ಎ.ಬಿ.ರಮೇಶ ಬಂಡಿಸಿದ್ದೇಗೌಡ ದರ್ಶನ್ ಪುಟ್ಟಣ್ಣಯ್ಯ ಎಚ್.ಎಂ.ಗಣೇಶ್ ಪ್ರಸಾದ್ ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಜೆಪಿಐಇಆರ್ ರಂಗತಂಡದಿಂದ ಮಂಟೇಸ್ವಾಮಿ ಕಥಾ ಪ್ರಸಂಗ ರಾತ್ರಿ 9 ಗಂಟೆಗೆ ನವೀನ್ ಸಜ್ಜು ತಂಡ ಸಂಗೀತ ಸಂಭ್ರಮ 11ಕ್ಕೆ ಮೈಸೂರು ಜೆಎಸ್ಎಸ್ ಕಲಾಮಂಟಪ ತಂಡದಿಂದ ಶಿವರಾತ್ರೀಶ್ವರ ವಿಜಯ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.