ADVERTISEMENT

13ರಂದು ನೂತನ ರಾಜಗೋಪುರ ಉದ್ಘಾಟನೆ, ಕುಂಬಾಭಿಷೇಕ: ಸೋಮೇಶ್ವರನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:59 IST
Last Updated 10 ಫೆಬ್ರುವರಿ 2026, 5:59 IST
ನಾಗಮಂಗಲ ತಾಲ್ಲೂಕಿನ ಶ್ರೀ ಕ್ಷೇತ್ರ ಹಾಲ್ತಿ ಸ್ವರ್ಗಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿದರು
ನಾಗಮಂಗಲ ತಾಲ್ಲೂಕಿನ ಶ್ರೀ ಕ್ಷೇತ್ರ ಹಾಲ್ತಿ ಸ್ವರ್ಗಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿದರು   

ನಾಗಮಂಗಲ: ತಾಲ್ಲೂಕಿನ ಶ್ರೀ ಕ್ಷೇತ್ರ ಹಾಲ್ತಿಯಲ್ಲಿ ಫೆ.13ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮಹಾಕುಂಬಾಭಿಷೇಕ ಮತ್ತು ರಾಜಗೋಪುರ ಲೋಕಾರ್ಪಣೆ ನಿರ್ಮಲಾನಂದನಾಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನಡೆಯಲಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಶ್ರೀ ಕ್ಷೇತ್ರ ಹಾಲ್ತಿ ಸ್ವರ್ಗಾಶ್ರಮದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಾಲ್ತಿ‌ ಶ್ರೀ ಮಲ್ಲಿಕಾರ್ಜುನ ಗುಹಾಂತರ ದೇವಾಲಯ ಮನುಷ್ಯ ನಿರ್ಮಿತವಾದುದಲ್ಲ. ಪುರಾಣ ಕಾಲದಿಂದ ಜನಜನಿತವಾದ ದೇವಾಲಯ. ಕಳೆದ ಎರಡು ವರ್ಷಗಳಿಂದ ದೇವಾಲಯದ ಕೆಲಸ ನಡೆಯುತ್ತಿದ್ದು, ಈಗ ಲೋಕಾರ್ಪಣೆಗೆ ಸಜ್ಜಾಗಿದೆ. ಶಾಖಾ ಮಠದ ಸ್ವಾಮೀಜಿಯವರು ಧಾರ್ಮಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಶಾಖಾ ಮಠ ನಿರ್ಮಿಸಲಾಗಿದೆ. ಎಲ್ಲಾ ಸಮುದಾಯದ ಜನರಿಗೂ ಅನುಕೂಲವಾಗುವಂತೆ ಕಲ್ಯಾಣ ಭವನ ಕೂಡ ನಿರ್ಮಾಣವಾಗಿದೆ ಎಂದರು.

ADVERTISEMENT

ಧಾರ್ಮಿಕ ಪೂಜಾ ಕಾರ್ಯಕ್ರಮಗಳ ವಿವರ :
ಫೆ.11, 12ಮತ್ತು‌ 13ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಫೆ.12ರಂದು ಶ್ರೀ ಮಠದ ನೂತನ ಕಟ್ಟಡ ಉದ್ಘಾಟನೆ ಮತ್ತು ದೀಪಸ್ತಂಭ ಸ್ಥಾಪನೆ. ಇದೇ‌ ದಿನ ಸಂಜೆ 4 ಘಂಟೆಗೆ ನಿರ್ಮಲಾನಂದನಾಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಂತರ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಫೆ.13 ರಂದು ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ರಾಜ ಗೋಪುರದ ಉದ್ಘಾಟನೆ ಮತ್ತು ಕುಂಭಾಭಿಷೇಕ ಹಾಗೂ ಮಲ್ಲಿಕಾರ್ಜುನಸ್ವಾಮಿಯವರ ರಥೋತ್ಸ ಜರುಗಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್ ಗೌಡ ಸೇರಿ ಹಲವು ಗಣ್ಯರ ಉಪಸ್ಥಿತಿ ಇದೆ ಎಂದು ತಿಳಿಸಿದರು.

ಸಾ.ರಾ.ಮಹೇಶ್ ಅವರಿಗೆ ವಿಶೇಷ ಅಭಿನಂದನೆ: ಸಾ.ರಾ.ಮಹೇಶ್ ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದಾಗ ಹಾಲ್ತಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡಿದ್ದರು. ಅವರ ಸಹಕಾರದಿಂದ ಕೂಡ ಇಂದು ಹಾಲ್ತಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಅಚ್ಚುಕಟ್ಟಾಗಿ ನೆರವೇರಿದೆ. ಅವರ ಸಹಕಾರ ಸ್ಮರಣೀಯ ಎಂದು ಸ್ವಾಮೀಜಿ ಹೇಳಿದರು. 

ಆಸ್ತಿಕ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಕೋರಿದರು.

ನಾಗಮಂಗಲ ತಾಲ್ಲೂಕಿನ ಶ್ರೀ ಕ್ಷೇತ್ರ ಹಾಲ್ತಿ ಸ್ವರ್ಗಾಶ್ರಮದಲ್ಲಿ ಲೋಕಾರ್ಪಣೆಗೆ ಸಜ್ಜಾಗಿರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ರಾಜಗೋಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.