ಪಾಂಡವಪುರ ತಾಲ್ಲೂಕು ಕನಗನಮರಡಿ ಸಮೀಪ ವಿ.ಸಿ. ನಾಲೆಗೆ ಖಾಸಗಿ ಬಸ್ ಬಿದ್ದಿರುವ ದೃಶ್ಯ (ಸಂಗ್ರಹ ಚಿತ್ರ)
ಮಂಡ್ಯ: ರಸ್ತೆ ಪಕ್ಕ ಹಾದು ಹೋಗಿರುವ ನಾಲೆ, ಕೆರೆ–ಕಟ್ಟೆಗಳು ಅಪಾಯವನ್ನು ಆಹ್ವಾನಿಸುತ್ತಿದ್ದು, ಜಿಲ್ಲೆಯಲ್ಲಿ 3 ವರ್ಷಗಳಲ್ಲಿ ನಡೆದ ಜಲ ದುರಂತಗಳಲ್ಲಿ ಬರೋಬ್ಬರಿ 208 ಮಂದಿ ನೀರುಪಾಲಾಗಿದ್ದಾರೆ.
ಸಕ್ಕರೆ ನಾಡಿನ ಜೀವನಾಡಿಯಾಗಿರುವ ನಾಲೆಗಳು ಜೀವಹಾನಿ ಮಾಡುವ ಅಪಾಯದ ತಾಣಗಳೂ ಆಗಿವೆ. ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ನಾಲೆಗಳಿಗೆ ಬಿದ್ದ ಪರಿಣಾಮ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ನಾಲೆಗೆ ವಾಹನ ಬಿದ್ದು ಜೀವ ಹೋದ ಪ್ರಕರಣಗಳಿಗೆ ದೊಡ್ಡ ಇತಿಹಾಸವೇ ಇದೆ. 1976ರಲ್ಲೇ ತಾಲ್ಲೂಕಿನ ದುದ್ದ ಬಳಿ ಖಾಸಗಿ ಬಸ್ಸೊಂದು ಉರುಳಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಜಿಲ್ಲೆಯಾದ್ಯಂತ 1,570 ಕಿ.ಮೀ ಉದ್ದ ನಾಲೆಗಳ ವ್ಯಾಪ್ತಿ ಚಾಚಿಕೊಂಡಿದೆ. ಇದರಲ್ಲಿ ಅರ್ಧದಷ್ಟು ವ್ಯಾಪ್ತಿ ರಸ್ತೆ ಬದಿಯಲ್ಲೇ ಸಾಗುತ್ತದೆ. ಇವುಗಳಿಗೆ ತಡೆಗೋಡೆ ಮತ್ತು ಸೂಚನಾ ಫಲಕಗಳನ್ನು ಅಳವಡಿಸುವ ಜವಾಬ್ದಾರಿ ಕಾವೇರಿ ನೀರಾವರಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆಯ ಮೇಲಿದೆ.
ನಾಲೆಗಳ ಆಧುನೀಕರಣಕ್ಕೆ ಮತ್ತು ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಇಲಾಖೆಗಳು ತಡೆಗೋಡೆ ನಿರ್ಮಾಣಕ್ಕೆ ನಿರ್ಲಕ್ಷ್ಯ ವಹಿಸಿವೆ. ಜಿಲ್ಲೆಯಲ್ಲಿ ಸರಣಿ ದುರಂತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆ.3ರಂದು ಮಂಡ್ಯ ತಾಲ್ಲೂಕು ಮಾಚಹಳ್ಳಿ– ತಿಬ್ಬನಹಳ್ಳಿ ಬಳಿ ವಿ.ಸಿ. ನಾಲೆಗೆ ಕಾರು ಬಿದ್ದಿರುವ ದೃಶ್ಯ
‘ಮಂಡ್ಯ ತಾಲ್ಲೂಕಿನ ದುದ್ದ, ತಿಬ್ಬನಹಳ್ಳಿ, ಮಾಚಹಳ್ಳಿ; ಪಾಂಡವಪುರ ತಾಲ್ಲೂಕಿನ ಕನಗನ
ಮರಡಿ, ಬನಘಟ್ಟ,ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಸಮೀಪವಿರುವ ವಿಶ್ವೇಶ್ವರಯ್ಯ ನಾಲೆಗೆ ತಡೆಗೋಡೆ ನಿರ್ಮಿಸಬೇಕಿದೆ. ಕಾರಣ ಈ ಸ್ಥಳಗಳಲ್ಲಿ ಈಗಾಗಲೇ ದುರಂತಗಳು ಸಂಭವಿಸಿವೆ’ ಎನ್ನುತ್ತಾರೆ ಗ್ರಾಮಸ್ಥರು.
‘ಮದ್ದೂರು ತಾಲ್ಲೂಕಿನ ಮಣಿಗೆರೆ ಬಳಿ ಹೆಬ್ಬಾಳ ಚನ್ನಯ್ಯ ನಾಲೆ, ಮೆಳ್ಳಹಳ್ಳಿ ಬಳಿ ಹೆಬ್ಬಾಳ ನಾಲೆ, ಚಿಕ್ಕರಸಿನಕೆರೆ ಸಮೀಪದ ಸೂಳೆಕೆರೆ ಕೋಡಿನಾಲೆಗೆ ತಡೆಗೋಡೆ ನಿರ್ಮಿಸಬೇಕಿದೆ. ಮಾದರಹಳ್ಳಿ ಕೆರೆಗೆ 2 ವರ್ಷಗಳ ಹಿಂದೆ ಬಸ್ ಬಿದ್ದು, ಅವಘಡ ಸಂಭವಿಸಿತ್ತು. ಹೀಗಾಗಿ ಇಂಥ ಅಪಾಯಕಾರಿ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಿ, ಸೂಚನಾ ಫಲಕಗಳನ್ನು ಅಳವಡಿಸಬೇಕು’ ಎಂದು ರೈತ ಮುಖಂಡರಾದ ಬೋರಾಪುರ ಶಂಕರೇಗೌಡ, ಇಟ್ಟನಹಳ್ಳಿ ಕೊಪ್ಪಲಿನ ಶಿವರುದ್ರು ಒತ್ತಾಯಿಸಿದ್ದಾರೆ.
ವಿ.ಸಿ. ನಾಲೆಗೆ ತಡೆಗೋಡೆ ನಿರ್ಮಿಸಲು ನೀಲನಕ್ಷೆ ಸಿದ್ಧವಾಗಿದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಕಾಮಗಾರಿಗೆ ಮಂಜೂರಾತಿ ನೀಡಲು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆಎನ್.ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ
ಬಲಮುರಿ, ಮುತ್ತತ್ತಿಯಲ್ಲಿ ಶವಗಳ ಯಾತ್ರೆ
ಕಳೆದ ಆರು ವರ್ಷಗಳಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿಯಲ್ಲಿ 32 ಮಂದಿ ಮತ್ತು ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ 30 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಲಮುರಿಯ ಕಾವೇರಿ ನದಿ ನೀರಿನಲ್ಲಿ 2008ರಿಂದ 2017ರವರೆಗೆ ಅಂದರೆ 10 ವರ್ಷಗಳಲ್ಲಿ ಬರೋಬ್ಬರಿ 83 ಪ್ರವಾಸಿಗರು ನೀರುಪಾಲಾಗಿದ್ದಾರೆ. ನೀರಿನಲ್ಲಿ ಮೋಜು ಮಸ್ತಿ ಮಾಡಲು ಹೋಗಿ ಜೀವಕ್ಕೆ ಆಪತ್ತು ತಂದುಕೊಂಡಿದ್ದಾರೆ ಎನ್ನುತ್ತಾರೆ ಪೊಲೀಸರು.
ಕೆರೆ ಏರಿ; ಪ್ರಯಾಣಕ್ಕೆ ಕಿರಿಕಿರಿ
‘ಕೆ.ಆರ್. ಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆ ಏರಿ ಅತ್ಯಂತ ಕಿರಿದಾಗಿದ್ದು ವಾಹನ ಸವಾರರು ಜೀವ ಕೈಯಲ್ಲಿಡಿದು ವಾಹನ ಓಡಿಸುತ್ತಾರೆ. ಒಂದು ಕಡೆ ನಿರ್ಮಾಣ ಮಾಡಲಾಗಿರುವ ತಡೆಗೋಡೆ ಶಿಥಿಲಗೊಂಡಿದ್ದು, ಎರಡೂ ಕಡೆ ಸುಭ್ರದವಾದ ತಡೆಗೋಡೆ ನಿರ್ಮಾಣ ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
‘ಕಿಕ್ಕೇರಿ ಅಮಾನಿಕೆರೆ ಏರಿ ಮತ್ತು ಬೋಳಮಾರನಹಳ್ಳಿ ಕೆರೆ ಏರಿ ಮೇಲೆ ಹೆಚ್ಚು ವಾಹನಗಳು ಓಡಾಡುತ್ತಿದ್ದು, ಇಲ್ಲಿ ತಡೆಗೋಡೆ ಇಲ್ಲದ ಕಾರಣ ಅವಘಡಗಳು ಸಂಭವಿಸಿವೆ. ತೀವ್ರ ತಿರುವಿನಲ್ಲಿ ಸೂಚನಾ ಫಲಕ ಮತ್ತು ತಡೆಗೋಡೆ ನಿರ್ಮಿಸಬೇಕು’ ಎಂದು ಕರವೇ ಮುಖಂಡ ಗುರುಮೂರ್ತಿ, ರೈತ ಮುಖಂಡ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ‘ಕೆ.ಆರ್. ಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆ ಏರಿ ಅತ್ಯಂತ ಕಿರಿದಾಗಿದ್ದು ವಾಹನ ಸವಾರರು ಜೀವ ಕೈಯಲ್ಲಿಡಿದು ವಾಹನ ಓಡಿಸುತ್ತಾರೆ. ಒಂದು ಕಡೆ ನಿರ್ಮಾಣ ಮಾಡಲಾಗಿರುವ ತಡೆಗೋಡೆ ಶಿಥಿಲಗೊಂಡಿದ್ದು, ಎರಡೂ ಕಡೆ ಸುಭ್ರದವಾದ ತಡೆಗೋಡೆ ನಿರ್ಮಾಣ ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
‘ಕಿಕ್ಕೇರಿ ಅಮಾನಿಕೆರೆ ಏರಿ ಮತ್ತು ಬೋಳಮಾರನಹಳ್ಳಿ ಕೆರೆ ಏರಿ ಮೇಲೆ ಹೆಚ್ಚು ವಾಹನಗಳು ಓಡಾಡುತ್ತಿದ್ದು, ಇಲ್ಲಿ ತಡೆಗೋಡೆ ಇಲ್ಲದ ಕಾರಣ ಅವಘಡಗಳು ಸಂಭವಿಸಿವೆ. ತೀವ್ರ ತಿರುವಿನಲ್ಲಿ ಸೂಚನಾ ಫಲಕ ಮತ್ತು ತಡೆಗೋಡೆ ನಿರ್ಮಿಸಬೇಕು’ ಎಂದು ಕರವೇ ಮುಖಂಡ ಗುರುಮೂರ್ತಿ, ರೈತ ಮುಖಂಡ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.