ADVERTISEMENT

ಹಾಡು, ಅಭಿನಯದಲ್ಲಿ ನಂಜುಂಡಸ್ವಾಮಿ ಮೋಡಿ

ಗ್ರಾಮೀಣ ಭಾಗದ ಭರವಸೆಯ ಕಲಾವಿದ, ನಾಡಿನ ವಿವಿಧ ಉತ್ಸವಗಳಲ್ಲಿ ನಾದ ಸುಧೆ

ಹಾರೋಹಳ್ಳಿ ಪ್ರಕಾಶ್‌
Published 8 ಅಕ್ಟೋಬರ್ 2019, 19:30 IST
Last Updated 8 ಅಕ್ಟೋಬರ್ 2019, 19:30 IST
ಗಾಯನದಲ್ಲಿ ಪ.ಮ.ನಂಜುಂಡಸ್ವಾಮಿ
ಗಾಯನದಲ್ಲಿ ಪ.ಮ.ನಂಜುಂಡಸ್ವಾಮಿ   

ಪಾಂಡವಪುರ: ಜನಪದ ಗೀತೆಗಳಿಗೆ ಜೀವ ತುಂಬುವ ಅವರು ಹಾಡಿನ ಸೊಗಡನ್ನು ಕೇಳುಗರಿಗೆ ಉಣಬಡಿಸುತ್ತಾರೆ. ಅನುಭವಿಸಿ ಅಭಿನಯಿಸುವ ಅವರು ಪಾತ್ರದ ಮಹಿಮೆಯನ್ನುಪ್ರೇಕ್ಷಕರ ಕಣ್ಣಿಗೆ ಕಟ್ಟುತ್ತಾರೆ.

ಗಾಯನ ಹಾಗೂ ನಟನಾ ಕಲೆಯಲ್ಲಿ ಭರವಸೆ ಮೂಡಿಸಿರುವ ‘ಪ.ಮ.ನಂಜುಂಡಸ್ವಾಮಿ’ ಅವರು ವೃತ್ತಿಯಲ್ಲಿ ಶಿಕ್ಷಕರು. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿರುವ ಅವರು ಪ್ರವೃತ್ತಿಯ ಮೂಲಕವೂ ಪ್ರಸಿದ್ಧಿ ಪಡೆದಿದ್ದಾರೆ. ತಾಲ್ಲೂಕಿನ ಪಟ್ಟಸೋಮನಹಳ್ಳಿ ಗ್ರಾಮದ ಮಂಚಯ್ಯ –ಸಣ್ಣಮ್ಮ ದಂಪತಿಯ ಪುತ್ರರಾದ ನಂಜುಂಡಸ್ವಾಮಿ ಶಾಲಾ ದಿನಗಳಲ್ಲೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮನಸೋತಿದ್ದರು. ತಮ್ಮ ಆಕರ್ಷಕ ಧ್ವನಿಯಿಂದ ಗಮನ ಸೆಳೆದಿದ್ದರು. ಯಕ್ಷಪ್ರಶ್ನೆ ನಾಟಕದಲ್ಲಿ ಭೀಮ, ವರಭ್ರಷ್ಟ ನಾಟಕದಲ್ಲಿ ರಾವಣನಾಗಿ ಅಭಿನಯಿಸಿ ಉತ್ತಮ ಬಾಲ ನಟ ಎನಿಸಿಕೊಂಡಿದ್ದರು.

ನಂತರ ಹಲವು ಸಂಘ ಸಂಸ್ಥೆಗಳ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಂಡ ಅವರು ರಾಜ್ಯದಾದ್ಯಂತ ಹಾಡಿ, ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಶಿಕ್ಷಕರಾಗಿ ಮಕ್ಕಳಿಗೆ ಪಾಠ ಬೋಧಿಸುವ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಗೀಳು ಹತ್ತಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.

ADVERTISEMENT

ಜನಪ್ರಿಯ ಜನಪದ ಗಾಯಕ ಗುರುರಾಜ ಹೊಸಕೋಟೆ ಅವರ ‘ಜಯಮ್ಮ ಜಯ ದೊಡ್ಡಮ್ಮ, ಜಯ ಜಯ ಚಿಕ್ಕಮ್ಮ’ ಮತ್ತು ‘ಸ್ವಾಭಿಮಾನಿ’ ಧ್ವನಿಸುರುಳಿಯಲ್ಲಿ ಹಾಡಿ ಮೆಚ್ಚುಗೆ ಪಡೆದಿದ್ದಾರೆ. ಮೈಸೂರು ದಸರಾ ಸೇರಿದಂತೆ ರಾಜ್ಯದ ನಾನಾ ಉತ್ಸವಗಳಲ್ಲಿ ಭಾಗವಹಿಸಿ ನಾದೆ ಸುಧೆ ಹರಿಸಿದ್ದಾರೆ. ಜನಪದ ಗೀತೆಗಳ ಜೊತೆಗೆ ರಂಗಗೀತೆ, ಭಾವಗೀತೆಗಳ ಗಾಯನದೊಂದಿಗೆ ಗಮನ ಸೆಳೆದಿದ್ದಾರೆ.

ನಾಗಮಂಗಲದ ‘ಕನ್ನಡ ಸಂಘ’ದ ಸದಸ್ಯರಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಟ, ನಿರ್ದೇಶಕ ಮಂಡ್ಯ ರಮೇಶ್‌ ನಿರ್ದೇಶನದ ಮಾರ ನಾಯಕ, ಅಗ್ನಿ ಮತ್ತು ಮಳೆ, ಹಯವದನ, ಸಾಂಬಶಿವ ಪ್ರಹಸನ ನಾಟಕಗಳಲ್ಲಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರಾಗಿದ್ದಾರೆ. ವಿಜಯವಾಡ, ದೆಹಲಿ, ಮುಂಬೈ, ಕೊಲ್ಕತ್ತ ನಾಟಕೋತ್ಸವಗಳಲ್ಲೂ ಭಾಗವಹಿಸಿ ಅಭಿನಯ ನೀಡಿದ್ದಾರೆ. ಚ.ನಾರಾಯಣಸ್ವಾಮಿ ನಿರ್ದೇಶನದ ಜಲಗಾರ, ಎಚ್ಚಮ ನಾಯಕ, ಅಡವಿಯಲ್ಲಿ ದೊರೆಮಕ್ಕಳು, ಡಾ.ಸಿದ್ರಾಜು, ಮಹಿಮಾಪುರ, ಪರಿತ್ಯಕ್ತ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಆಕಾಶವಾಣಿಯಲ್ಲಿ ಜನಪದ ಗಾಯನ ಕಾರ್ಯಕ್ರಮ ನೀಡಿ ಕೇಳುಗರ ಮನಸ್ಸು ಗೆದ್ದಿರುವ ಅವರು ದೂರದರ್ಶನ ವಾಹಿನಿಗಳ ಪಂಚರಂಗಿ, ಜ್ಞಾನಪದ, ಸುಗ್ಗಿ ಹುಗ್ಗಿ ಕಾರ್ಯಕ್ರಮಗಳಲ್ಲಿ ಹಾಡಿ, ಅಭಿನಯಿಸಿದ್ದಾರೆ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಅವರು ಕ್ರಿಯಾಶೀಲ ಮನಸ್ಸುಳ್ಳವರು.

ಖ್ಯಾತ ಕಲಾವಿದ ಬೇವಿನಕುಪ್ಪೆ ನಾಗಲಿಂಗೇಗೌಡ ಅವರ ನೇತೃತ್ವದಲ್ಲಿ ‘ಗ್ರಾಮರಂಗ ಸಾಂಸ್ಕೃತಿಕ ವೇದಿಕೆ’ ಸ್ಥಾಪಿಸಿ ಕಳೆದೊಂದು ವರ್ಷದಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ಗಾಯನ ತರಗತಿ, ವಾದ್ಯ ಸಂಗೀತ, ಜನಪದ ಜಾತ್ರೆ, ಬೇಸಿಗೆ ಶಿಬಿರ, ರಂಗ ಶಿಬಿರ ಆಯೋಜನೆ ಜೊತೆಗೆ ರಾಜ್ಯದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿದ್ದಾರೆ.

ಅವರ ಕಲಾ ಸೇವೆಗೆ ಜಿಲ್ಲಾಮಟ್ಟದ ಜನಪದ ಪ್ರಶಸ್ತಿ, ಕಸಾಪ ಜನಪದ ಪ್ರಶಸ್ತಿ, ಕರವೇ ಕಲಾ ಪೋಷಕ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿವೆ. ಅಖಿಲ ಭಾರತ ವಿಕಾಸ ಪರಿಷತ್‌ ಮತ್ತು ಚಿನಕುರಳಿ ಕನ್ನಡ ಸಂಘದ ವತಿಯಿಂದಲೂ ಹಲವು ಗೌರವ ಮನ್ನಣೆಗಳು ಅರಸಿ ಬಂದಿವೆ.

ತಾಯಿ ಒಲುಮೆಯ ಗೀತೆಗೆ ಮೆಚ್ಚುಗೆ
ನಂಜುಂಡಸ್ವಾಮಿ ಅವರು ಹಾಡಿರುವ ‘ದುಡ್ಡುಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದೀ ಕಾಣೋ’ ಜನಪದ ಗೀತೆ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಈ ಗೀತೆ ಮೆಚ್ಚಿ ತಲೆದೂಗಿದ್ದಾರೆ. ನಾಗಲಿಂಗೇಗೌಡ–ನಂಜುಂಡಸ್ವಾಮಿ ಗಾಯಕ ಜೋಡಿ ಹಾಡುವ ಮಹದೇಶ್ವರ, ನಂಜುಂಡೇಶ್ವರ, ಸಿದ್ಧಪ್ಪಾಜಿ ಹಾಡುಗಳು ಎಲ್ಲೆಡೆ ಪ್ರಸಿದ್ಧಿ ಪಡೆದಿವೆ.

*
ನಮ್ಮ ಸಂಸ್ಕೃತಿಯ ತಾಯಿ ಬೇರು ಎನಿಸಿಕೊಂಡಿರುವ ಜನಪದ ಗೀತೆಗಳು ನಮ್ಮ ಮಕ್ಕಳ ನಾಲೆಗೆಯ ಮೇಲೆ ನಲಿದಾಡಬೇಕು ಎಂಬ ಆಶಯ ನನ್ನದು
– ಪ.ಮ.ನಂಜುಂಡಸ್ವಾಮಿ, ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.