ಮಂಡ್ಯ: ‘ಸಕ್ಕರೆ ನಾಡು’ ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ‘ಅರಮನೆ ದರ್ಬಾರ್ ಮಾದರಿಯ ಸಿಂಹಾಸನ’ ಒಳಗೊಂಡ ಭವ್ಯ ರಥವನ್ನು ಸಿದ್ಧಗೊಳಿಸಲಾಗುತ್ತಿದೆ.
ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಮೆರವಣಿಗೆಯ ಕೇಂದ್ರಬಿಂದು. ಭಾಗವಹಿಸುವ ಎಲ್ಲ ಕನ್ನಡಾಭಿಮಾನಿಗಳಿಗೆ ಸಮ್ಮೇಳನಾಧ್ಯಕ್ಷರು ಕಾಣುವಂತೆ ರಥದ ಮಧ್ಯಭಾಗದಲ್ಲಿ ಕೆಂಪು ಮತ್ತು ಬಂಗಾರದ ಬಣ್ಣದ ಸಿಂಹಾಸನವನ್ನು ವಿನ್ಯಾಸ ಮಾಡಿದ್ದು, ಮೇಲೆ ಅಲಂಕೃತ ಛತ್ರಿಯನ್ನು ಅಳವಡಿಸಲಾಗಿದೆ. ಸಿಂಹಾಸನದ ಪಕ್ಕ ನವಿಲು ಮತ್ತು ಮುಂಭಾಗ ಸಿಂಹಗಳ ಮೂರ್ತಿಗಳನ್ನು ಜೋಡಿಸಲಾಗುತ್ತಿದೆ.
ಲಾರಿ ಚಾಸಿ ಬಳಕೆ: ಮೈಸೂರಿನಿಂದ ಲಾರಿ ಚಾಸಿ ತರಿಸಿ, ಅದಕ್ಕೆ ಮೆಟಲ್ ಫ್ರೇಮ್ ಅಳವಡಿಸಿ, ಫೈಬರ್, ಪ್ಲೈವುಡ್‌ಗಳನ್ನು ಜೋಡಿಸಿ ರಥ ನಿರ್ಮಿಸಲಾಗುತ್ತಿದೆ. ಕೆಂಪು, ಹಳದಿ, ಬಂಗಾರದ ವರ್ಣಗಳಿಂದ ರಥಕ್ಕೆ ಮೆರುಗು ನೀಡಲಾಗುತ್ತಿದೆ. ರಥದ ಸುತ್ತ ಹೊಯ್ಸಳ ಶೈಲಿಯ ಶಿಲ್ಪಕಲಾ ಮಾದರಿಯ ವಿನ್ಯಾಸ ಮಾಡಲಾಗುತ್ತಿದೆ.
‘ರಥದ ಮುಂಭಾಗದಲ್ಲಿ ಮಂಡ್ಯದ ಜೀವನದಿ ‘ಕಾವೇರಿ’ ಮಾತೆಯ ಪ್ರತಿಮೆ ಅಳವಡಿಸಲಾಗುತ್ತಿದೆ. ರಥದ ಎಡಬದಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು, ಬಲಬದಿಯಲ್ಲಿ ಏಳು ತಾಲ್ಲೂಕುಗಳ ಪ್ರವಾಸಿ ತಾಣಗಳ ದೃಶ್ಯಗಳನ್ನು ಜೋಡಿಸಲಾಗುತ್ತಿದೆ. ಹಿಂಭಾಗದಲ್ಲಿ ಭುವನೇಶ್ವರಿ ಪ್ರತಿಮೆ ಇರಲಿದೆ’ ಎಂದು ಕಲಾವಿದ ಅಭಿಲಾಷ್ ಡಿ. ಡಿಂಕಶೆಟ್ಟಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
88 ಕಲಾ ಪ್ರಕಾರಗಳು: ಮೆರವಣಿಗೆಯಲ್ಲಿ ಹಗಲುವೇಷ, ಮಹಿಳಾ ವೀರಗಾಸೆ, ಗೊರವರ ಕುಣಿತ, ಲಂಬಾಣಿ ನೃತ್ಯ, ಜಗ್ಗಲಿಗೆ ಮೇಳ, ಕಂಸಾಳೆ, ಕರಗ, ಚಿಲಿಪಿಲಿಗೊಂಬೆ, ಜೋಗತಿ ನೃತ್ಯ, ಹಾಲಕ್ಕಿ ಸುಗ್ಗಿಕುಣಿತ, ಕರಡಿ ಮಜಲು, ಕೋಲಾಟ, ಯಕ್ಷಗಾನ ವೇಷ ಸೇರಿದಂತೆ ಒಟ್ಟು 88 ಕಲಾಪ್ರಕಾರಗಳು ಮೇಳೈಸಲಿವೆ.
ತಮಿಳುನಾಡಿನ ಕರಗಂ, ಮಧ್ಯಪ್ರದೇಶದ ಬುಡಕಟ್ಟು ನೃತ್ಯ, ಬಧಾಯಿ ಮತ್ತು ನೋರಾ, ಪಂಜಾಬ್‌ನ ಭಾಂಗ್ರಾ, ಒಡಿಶಾದ ಸಂಬಲ್ಪುರಿ ಮತ್ತು ಧಾಪ್ ಬುಡಕಟ್ಟು ನೃತ್ಯ ಕಲಾವಿದರು ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷ. ಜೊತೆಗೆ 10 ಸ್ತಬ್ಧಚಿತ್ರಗಳು, ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ಗೈಡ್ಸ್, ಭಾರತ ಸೇವಾದಳ, ಅಶ್ವದಳ, 5 ಟಾಂಗಾಗಳು ಸಾಗಲಿವೆ’ ಎಂದು ಮೆರವಣಿಗೆ ಸಮಿತಿ ಸಂಚಾಲಕ ಕೀಲಾರ ಕೃಷ್ಣೇಗೌಡ ತಿಳಿಸಿದರು.
ಆಟೊ, ಎತ್ತಿನಗಾಡಿ ಮೆರವಣಿಗೆ:
‘87 ಸಮ್ಮೇಳನಾಧ್ಯಕ್ಷರ ಭಾವಚಿತ್ರಗಳನ್ನು ಒಳಗೊಂಡ 87 ಆಟೊರಿಕ್ಷಾಗಳು ಮತ್ತು ಕೃಷಿ ಸಂಸ್ಕೃತಿ ಬಿಂಬಿಸುವ 20 ಜೋಡೆತ್ತಿನ ಗಾಡಿಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಲಿವೆ. ನಾಡಪ್ರಭು ಕೆಂಪೇಗೌಡ, ವಿಶ್ವೇಶ್ವರಯ್ಯ, ದೇವಿ ಮಹಾತ್ಮೆಯ ವೇಷಧಾರಿಗಳು ಜನರನ್ನು ಆಕರ್ಷಿಸಲಿದ್ದಾರೆ’ ಎಂದು ಮೆರವಣಿಗೆ ಸಮಿತಿ ಸದಸ್ಯ ಕಾರ್ಯದರ್ಶಿ ಬಿ.ವಿ.ನಂದೀಶ್ ತಿಳಿಸಿದರು.
ವೈಭವದ ಮೆರವಣಿಗೆಗೆ ಸಿದ್ಧತೆ ಸಿದ್ಧಗೊಳ್ಳುತ್ತಿರುವ ರಥ ಮೆರುಗು ನೀಡಲಿರುವ ಜೋಡೆತ್ತಿನ ಗಾಡಿಗಳು
900 ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಲಿದ್ದಾರೆ. ಸ್ತಬ್ಧಚಿತ್ರಗಳು ಕಲಾವಿದರ ಪ್ರದರ್ಶನ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮೆರುಗು ನೀಡಲಿದೆಮಧು ಜಿ.ಮಾದೇಗೌಡ ಅಧ್ಯಕ್ಷ ಸಮ್ಮೇಳನದ ಮೆರವಣಿಗೆ ಸಮಿತಿ
ಬಿದಿರಿನ ಬುಟ್ಟಿಯಲ್ಲಿ ಪುಸ್ತಕಗಳ ಮೆರವಣಿಗೆ
‘ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಈ ಬಾರಿ ಮಹಿಳಾ ಸಮಿತಿಯಿಂದ 100 ಮಹಿಳೆಯರು ವೈವಿಧ್ಯಮಯ ಪುಸ್ತಕಗಳು ಮತ್ತು ಕನ್ನಡ ಬಾವುಟವನ್ನು ಒಳಗೊಂಡ ಬಿದಿರಿನ ಬುಟ್ಟಿಯನ್ನು ಹೊತ್ತು ಸಾಗಲಿದ್ದಾರೆ. ಇದು ‘ವೈಚಾರಿಕತೆಯ ಕಡೆ ಮಹಿಳೆಯರ ನಡೆ’ ಎಂಬುದನ್ನು ಬಿಂಬಿಸಲಿದೆ’ ಎಂದು ಸಮ್ಮೇಳನದ ಮಹಿಳಾ ಸಮಿತಿ ಅಧ್ಯಕ್ಷೆ ಸುನಂದಾ ಜಯರಾಂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.