ಮಂಡ್ಯ: ‘ಜಿ.ಕೆ.ವಿ.ಕೆ.ಯ ಆಡಳಿತ ವ್ಯವಸ್ಥೆ ಹಾಗೂ ಘನತೆಗೆ ಕುಂದು ಉಂಟಾಗದಂತೆ ಮಂಡ್ಯದ ವಿ.ಸಿ. ಫಾರ್ಮ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಕೃಷಿ ವಿ.ವಿ.ಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಇತರ ಸೌಕರ್ಯಗಳ ವರ್ಗಾವಣೆ ಮಾಡಿ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನಿರ್ದೇಶನ ನೀಡಿದರು.
ಬೆಂಗಳೂರಿನ ಮಹಾತ್ಮ ಗಾಂಧಿ ಕೃಷಿ ವಿಶ್ವವಿದ್ಯಾಲಯದಿಂದ ಬೇರ್ಪಟ್ಟಿರುವ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಆಡಳಿತ ಚಟುವಟಿಕೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸುವ ಕುರಿತು ಬೆಂಗಳೂರಿನಲ್ಲಿ ಸೋಮವಾರ ಸಭೆ ನಡೆಸಿದ ಸಚಿವರು ಸಲಹೆ ಸೂಚನೆಗಳನ್ನು ನೀಡಿದರು.
ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇರುವ ಜಿ.ಕೆ.ವಿ.ಕೆ ಮತ್ತು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಬೇರ್ಪಡಿಸಲಾಗಿರುವ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಕಾಲೇಜುಗಳು, ಸಂಶೋಧನಾ ಕೇಂದ್ರಗಳ ಕಟ್ಟಡ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಯೊಂದಿಗೆ ಮಂಡ್ಯ ಕೃಷಿ ವಿ.ವಿ.ಗೆ ನಿಯಮಾನುಸಾರ ವರ್ಗಾಯಿಸುವಂತೆ ತಿಳಿಸಿದರು.
ಮಂಡ್ಯ ಕೃಷಿ ವಿವಿ ನಮ್ಮ ಕನಸಿನ ಕೂಸಾಗಿದ್ದು ಇದನ್ನು ಸಹ ಇತರ ಕೃಷಿ ವಿಶ್ವವಿದ್ಯಾಲಯಗಳಷ್ಟೇ ಮೌಲ್ಯಯುತವಾಗಿ, ಆಡಳಿತಾತ್ಮಕವಾಗಿ, ಶೈಕ್ಷಣಿಕವಾಗಿ ಬಲವರ್ಧನೆಗೊಳಿಸಲು ಎರಡು ವಿಶ್ವವಿದ್ಯಾಲಯಗಳ ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು.
ಹೊಸದಾಗಿ ಸೃಜನೆಯಾಗಬೇಕಾಗಿರುವ ಹುದ್ದೆಗಳನ್ನ ಪಟ್ಟಿ ಮಾಡಿ ಹಣಕಾಸು ಇಲಾಖೆಗೆ ಅನುಮೋದನೆಗೆ ಕಳುಹಿಸಿಕೊಡುವಂತೆ ಸೂಚಿಸಿದರು.
ಮಂಡ್ಯ ಕೃಷಿ ವಿ.ವಿ ಸದೃಢ ಆಗುವವರೆಗೆ, ವಿದ್ಯಾರ್ಥಿಗಳ ನೋಂದಣಿ, ಪರೀಕ್ಷೆ ಸಿದ್ಧತೆ, ಫಲಿತಾಂಶ ಮತ್ತಿತರ ವಿಚಾರಗಳ ಬಗ್ಗೆ ನಿರಂತರವಾಗಿ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡುವಂತೆ ಜಿ.ಕೆ.ವಿ.ಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಕೆ.ವಿ.ಕೆ ಕುಲಪತಿ ಸುರೇಶ್, ಶಿವಮೊಗ್ಗ ಕೃಷಿ ವಿ.ವಿ. ಕುಲಪತಿ ಜಗದೀಶ್, ಕೃಷಿ ಆಯುಕ್ತರಾದ ವೈ.ಎಸ್. ಪಾಟೀಲ್, ಕೃಷಿ ನಿರ್ದೇಶಕ ಜಿ.ಟಿ. ಪುತ್ರ, ಹೆಚ್ಚುವರಿ ಕೃಷಿ ನಿರ್ದೇಶಕರಾದ ವೆಂಕಟರಮಣರೆಡ್ಡಿ, ಮಂಡ್ಯ ಕೃಷಿ ವಿ.ವಿ. ವಿಶೇಷಾಧಿಕಾರಿ ಹರಿಣಿಕುಮಾರ, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.