ADVERTISEMENT

ತಾಲ್ಲೂಕು ಮಟ್ಟಕ್ಕೂ ಹವಾಮಾನ ಆಧಾರಿತ ಕೃಷಿ ಸಲಹೆ

ರಾಜ್ಯದ 12 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಜಿಲ್ಲಾಮಟ್ಟದ ಕೃಷಿ ಹವಾಮಾನ ಘಟಕ ಸ್ಥಾಪನೆ

ಎಂ.ಎನ್.ಯೋಗೇಶ್‌
Published 9 ಮಾರ್ಚ್ 2020, 19:30 IST
Last Updated 9 ಮಾರ್ಚ್ 2020, 19:30 IST
   

ಮಂಡ್ಯ: ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಮಳೆ–ಬೆಳೆ ವಿಭಿನ್ನವಾಗಿರುವುದನ್ನು ಮನಗಂಡ ಭಾರತೀಯ ಹವಾಮಾನ ಇಲಾಖೆಯು, ರಾಜ್ಯದ 12 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಜಿಲ್ಲಾಮಟ್ಟದ ಕೃಷಿ ಹವಾಮಾನ ಘಟಕ (ಡಿಎಎಂಯು) ಸ್ಥಾಪಿಸಿದೆ. ಈ ಘಟಕಗಳು ಆಯಾ ತಾಲ್ಲೂಕಿನ ಕೃಷಿಗೆ ಸಂಬಂಧಿಸಿದ ಮಾಹಿತಿ ನೀಡಲಿವೆ.

ಒಂದು ಭಾಗದಲ್ಲಿ ಹೆಚ್ಚು ಮಳೆಯಾದರೆ ಇನ್ನೊಂದು ಕಡೆ ಕಡಿಮೆಯಾಗುತ್ತದೆ. ಒಂದು ತಾಲ್ಲೂಕಿನಲ್ಲಿ ಭತ್ತ ಪ್ರಧಾನವಾಗಿದ್ದರೆ, ಇನ್ನೊಂದೆಡೆ ರಾಗಿ ಪ್ರಧಾನವಾಗಿರುತ್ತದೆ. ಆಯಾ ಭಾಗಕ್ಕೆ ಅನುಗುಣವಾಗಿ ಕೇಂದ್ರೀಕೃತ ಮಾಹಿತಿ ನೀಡುವ ಉದ್ದೇಶದಿಂದ ಹವಾಮಾನ ಇಲಾಖೆ ಹಾಗೂ ಕೃಷಿ ಸಚಿವಾಲಯ ಪ್ರಾಯೋಗಿಕವಾಗಿ ದೇಶದಾದ್ಯಂತ 200 ಜಿಲ್ಲಾಮಟ್ಟದ ಕೃಷಿ ಹವಾಮಾನ ಘಟಕಗಳನ್ನು ಸ್ಥಾಪಿಸಿವೆ.

ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹವಾಮಾನ ಘಟಕ ಸ್ಥಾಪನೆಯಾಗಿದ್ದು, ವಾರದಲ್ಲಿ 2 ದಿನ (ಶುಕ್ರವಾರ, ಮಂಗಳವಾರ) ಜಿಲ್ಲೆಯ ಏಳು ತಾಲ್ಲೂಕುಗಳ ಮಳೆ, ಬೆಳೆ ಆಧಾರಿತ ಕೃಷಿ ಸಲಹೆ ನೀಡುತ್ತಿದೆ. ಜಿಲ್ಲೆಯಾದ್ಯಂತ 50 ಸಾವಿರಕ್ಕೂ ಹೆಚ್ಚು ರೈತರ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕ ಸಲಹೆ ನೀಡಲಾಗುತ್ತಿದೆ.

ADVERTISEMENT

ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ರಾಮನಗರ, ತುಮಕೂರು, ಕೋಲಾರ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಹಾವೇರಿ, ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರಗಳಲ್ಲೂ ಕೃಷಿ ಹವಾಮಾನ ಘಟಕ ಸ್ಥಾಪನೆಯಾಗಿದ್ದು, ಕಳೆದ ಡಿಸೆಂಬರ್‌ನಿಂದ ಆಯಾ ತಾಲ್ಲೂಕುಗಳ ಮಳೆ, ಬೆಳೆ ಆಧರಿಸಿ ಸಲಹೆ ನೀಡಲಾಗುತ್ತಿದೆ.

‘ಈಗಾಗಲೇ ಇರುವ ಗ್ರಾಮೀಣ ಕೃಷಿ ಮೌಸಮ್‌ ಸೇವಾ ವಿಭಾಗದ (ಜಿಕೆಎಂಎಸ್‌) ಮೂಲಕ, ಜಿಲ್ಲಾ ಕೇಂದ್ರಿತ ಹವಾಮಾನ ಆಧರಿಸಿ ರೈತರಿಗೆ ಕೃಷಿ ಮಾಹಿತಿ ನೀಡಲಾಗುತ್ತಿತ್ತು. ಈಗ ಸ್ಥಾಪನೆಯಾದ ಘಟಕಗಳಲ್ಲಿ ತಾಲ್ಲೂಕು ಕೇಂದ್ರಿತ ಮಾಹಿತಿ ನೀಡಲಾಗುತ್ತಿದೆ. ಮಳೆ ವಿವರ, ಋತುಮಾನದ ಬೆಳೆ ಮಾಹಿತಿ, ಕೀಟ, ರೋಗ ನಿರ್ವಹಣೆ, ಜಾನುವಾರು ಲಸಿಕೆ ಮುಂತಾದ ಸಲಹೆ ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಮಂಡ್ಯ ಘಟಕದ ಕೃಷಿ ಹವಾಮಾನ ವಿಜ್ಞಾನ ತಜ್ಞೆ ಎಸ್‌.ಎನ್‌.ಅರ್ಪಿತಾ ಹೇಳಿದರು.

ಪ್ರತಿ ಘಟಕದಲ್ಲಿ ಹವಾಮಾನ ತಜ್ಞ, ಹವಾಮಾನ ಪರಿವೀಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷಿ ವಿಜ್ಞಾನ ಕೇಂದ್ರಗಳಲ್ಲಿರುವ ವಿಜ್ಞಾನಿಗಳ ಸಲಹೆ ಪಡೆದು ಸಲಹೆ ನೀಡುತ್ತಿದ್ದಾರೆ. ಉಷ್ಣಾಂಶ, ಮಳೆ ಪ್ರಮಾಣ, ಆರ್ದ್ರತೆ, ಗಾಳಿಯ ದಿಕ್ಕು ಮತ್ತು ವೇಗದ ಮಾಹಿತಿಯೂ ಸಿಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ವಿ.ಸಿ ಫಾರಂ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ವಿಜ್ಞಾನ ತಜ್ಞರಾದ ಡಾ.ಡಿ.ಎಚ್‌.ರೂಪಶ್ರೀ ಹೇಳಿದರು.

***

‘ಮೇಘದೂತ’ ಆ್ಯಪ್‌ನಲ್ಲೂ ತಾಲ್ಲೂಕು ಮಾಹಿತಿ

‘ಸ್ಥಳೀಯ ಭಾಷೆಯಲ್ಲಿ ಕೃಷಿ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಮೇಘದೂತ’ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಸದ್ಯ, ಈ ಆ್ಯಪ್‌ನಲ್ಲಿ ರಾಜ್ಯದ 30 ಜಿಲ್ಲೆ ಸೇರಿ ದೇಶದ 150 ಜಿಲ್ಲೆಗಳ ಹವಾಮಾನ ಆಧಾರಿತ ಕೃಷಿ ಸಲಹೆ ಸಿಗುತ್ತಿದೆ. ಶೀಘ್ರದಲ್ಲಿ ಇದು ತಾಲ್ಲೂಕು ಹಂತಕ್ಕೂ ಅದು ವಿಸ್ತರಣೆಯಾಗಲಿದೆ. ಅದಕ್ಕೆ ನಮ್ಮ ಘಟಕಗಳಿಂದಲೇ ಮಾಹಿತಿ ರವಾನೆಯಾಗುತ್ತದೆ’ ಎಂದು ಕೃಷಿ ಹವಾಮಾನ ವಿಜ್ಞಾನ ತಜ್ಞೆ ಎಸ್‌.ಎನ್‌.ಅರ್ಪಿತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.