ADVERTISEMENT

ಮಂಡ್ಯ: ದಶಕ ಕಳೆದರೂ ಸಾಕಾರವಾಗದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ‘ಅಮೃತ ಭವನ’

ಸಿದ್ದು ಆರ್.ಜಿ.ಹಳ್ಳಿ
Published 19 ಸೆಪ್ಟೆಂಬರ್ 2025, 2:23 IST
Last Updated 19 ಸೆಪ್ಟೆಂಬರ್ 2025, 2:23 IST
ಮಂಡ್ಯ ಜಿಲ್ಲೆಗೆ 75 ವರ್ಷ ತುಂಬಿದ ಸಂದರ್ಭದಲ್ಲಿ 2015ನೇ ಸಾಲಿನಲ್ಲಿ ನಡೆದ ಅಮೃತ ಮಹೋತ್ಸವದ ಅಂಗವಾಗಿ ಹೊರತಂದಿದ್ದ ‘ಅಮೃತ ಮಂಡ್ಯ’ ಸ್ಮರಣ ಸಂಪುಟ  
ಮಂಡ್ಯ ಜಿಲ್ಲೆಗೆ 75 ವರ್ಷ ತುಂಬಿದ ಸಂದರ್ಭದಲ್ಲಿ 2015ನೇ ಸಾಲಿನಲ್ಲಿ ನಡೆದ ಅಮೃತ ಮಹೋತ್ಸವದ ಅಂಗವಾಗಿ ಹೊರತಂದಿದ್ದ ‘ಅಮೃತ ಮಂಡ್ಯ’ ಸ್ಮರಣ ಸಂಪುಟ     

ಮಂಡ್ಯ: ‘ಸಕ್ಕರೆ ನಾಡು’ ಮಂಡ್ಯ ಜಿಲ್ಲೆಗೆ 75 ವರ್ಷಗಳು ತುಂಬಿದ ಅಂಗವಾಗಿ ನಿರ್ಮಾಣವಾಗಬೇಕಿದ್ದ ‘ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅಮೃತ ಭವನ’ ದಶಕ ಕಳೆದರೂ ಇಂದಿಗೂ ಸಾಕಾರಗೊಂಡಿಲ್ಲ. 

ಮೈಸೂರು ಜಿಲ್ಲೆಯಿಂದ ಪ್ರತ್ಯೇಕಗೊಂಡ ಮಂಡ್ಯವು 1939ರ ಜುಲೈ 1ರಂದು ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. 2014ನೇ ಸಾಲಿಗೆ ಸಕ್ಕರೆ ನಾಡಿಗೆ 75 ವರ್ಷ ತುಂಬಿತು. ಇದರ ಸ್ಮರಣಾರ್ಥ 2015ರ ಫೆಬ್ರುವರಿ 20ರಿಂದ 22ರವರೆಗೆ ‘ಅಮೃತ ಮಹೋತ್ಸವ’ ಆಚರಿಸಿ, ‘ಅಮೃತ ಮಂಡ್ಯ’ ಹೆಸರಿನಲ್ಲಿ ಸ್ಮರಣ ಸಂಚಿಕೆಯನ್ನೂ ಹೊರತರಲಾಗಿತ್ತು. 

ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌, ಸಂಸದ ಸಿ.ಎಸ್‌. ಪುಟ್ಟರಾಜು ನೇತೃತ್ವದಲ್ಲಿ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ‘ಮಂಡ್ಯ ಜಿಲ್ಲೆ ತನ್ನ ಅಸ್ತಿತ್ವದ 75 ಸಾರ್ಥಕ ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಚರಿತ್ರಾರ್ಹ ಮತ್ತು ದಾಖಲಾರ್ಹ’ ಎಂದು ಸಂದೇಶ ನೀಡಿದ್ದರು. 

ADVERTISEMENT

₹4 ಕೋಟಿಗೆ ಅನುಮೋದನೆ:

ಮಂಡ್ಯ ಜಿಲ್ಲೆ ಉಗಮವಾಗಲು ಪ್ರಮುಖ ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿನಲ್ಲಿ ‘ಅಮೃತ ಭವನ’ ನಿರ್ಮಿಸುವ ಉದ್ದೇಶದಿಂದ 2015ರಲ್ಲಿ ₹40 ಕೋಟಿ ವೆಚ್ಚದ ಪ್ರಸ್ತಾವವನ್ನು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. 

ಮಂಡ್ಯ ನಗರಸಭಾ ವ್ಯಾಪ್ತಿಯ ಗ್ರಾಮಠಾಣಾ ಆಸ್ತಿ ಸಂಖ್ಯೆ 614/625ರಲ್ಲಿ 6 ಗುಂಟೆ ಜಾಗವನ್ನು ಗುರುತಿಸಲಾಗಿತ್ತು. ನಂತರ, ಮಂಡ್ಯ ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಎಲ್ಲ ಇಲಾಖೆಗಳ ಕಚೇರಿಗಳು, ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರ ಕಚೇರಿಗಳಿಗೂ ಇದೇ ಜಾಗದಲ್ಲಿ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗದ ಕಾರಣ ಈ ಜಾಗ ಕೈಬಿಡಲಾಗಿತ್ತು. 

2016ರಲ್ಲಿ ಸರ್ಕಾರವು, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಹತ್ತಿರದ 1.08 ಎಕರೆ ವಿಸ್ತೀರ್ಣ ಹೊಂದಿರುವ ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿ ₹4 ಕೋಟಿ ಮಿತಿಯಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಿತ್ತು. 

₹60 ಕೋಟಿಗೆ ಪ್ರಸ್ತಾವ:

ಮತ್ತೆ 2018ರಲ್ಲಿ ಬೆಂಗಳೂರಿನ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಎಂಜಿನಿಯರ್‌ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ, ‘ಅಮೃತ ಭವನವನ್ನು ನಿರ್ಮಿಸಲು ₹60 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಅನುದಾನ ಬಿಡುಗಡೆ ಮಾಡಿ’ ಎಂದು ಕೋರಿದ್ದರು. 

ಆನಂತರ, ಸರ್ಕಾರದ ಆದೇಶದ ಅನ್ವಯ ₹4 ಕೋಟಿಗೆ ಸೀಮಿತಗೊಳಿಸಿ, ಅಂದಾಜು ಪಟ್ಟಿ ಮತ್ತು ನಕ್ಷೆಯೊಂದಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದರು.

‘ಜಿಲ್ಲಾಧಿಕಾರಿಯಿಂದ ಪ್ರಸ್ತಾವ ಸ್ವೀಕೃತವಾದ ನಂತರ ನಿಯಮಾನುಸಾರ ಪರಿಶೀಲಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು, ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಈಚೆಗೆ ಉತ್ತರಿಸಿದ್ದಾರೆ. 

ಡಿಪಿಆರ್‌ ಸರ್ಕಾರಕ್ಕೆ ಸಲ್ಲಿಕೆಯಾಗದ ಕಾರಣ ಅನುದಾನ ಬಿಡುಗಡೆ ನನೆಗುದಿಗೆ ಬಿದ್ದಿದೆ ಎನ್ನಲಾಗಿದೆ. 

ಪ್ರೊ.ಜಯಪ್ರಕಾಶಗೌಡ 
‘ಅಮೃತ ಮಹೋತ್ಸವದ ಲೆಕ್ಕ ಸಿಕ್ಕಿಲ್ಲ’
2015ರಲ್ಲಿ ಆಚರಿಸಿದ್ದ ‘ಅಮೃತ ಮಹೋತ್ಸವ’ಕ್ಕೆ ಮತ್ತು ಸ್ಮರಣ ಸಂಚಿಕೆಗೆ ಸರ್ಕಾರ ಎಷ್ಟು ಅನುದಾನ ನೀಡಿತ್ತು? ಸಾರ್ವಜನಿಕರಿಂದ ಎಷ್ಟು ದೇಣಿಗೆ ಸಂಗ್ರಹಿಸಲಾಗಿತ್ತು? ಖರ್ಚಾದ ಮತ್ತು ಉಳಿಕೆ ಹಣ ಎಷ್ಟು? ಇದ್ಯಾವ ಮಾಹಿತಿಯನ್ನೂ ಮಂಡ್ಯ ಜನರಿಗೆ ತಿಳಿಸಿಲ್ಲ. ಮಂಡ್ಯ ಜಿಲ್ಲೆಗೆ 75 ವರ್ಷ ತುಂಬಿದ ಸವಿನೆನಪಿನ ‘ಅಮೃತ ಭವನ’ ನಿರ್ಮಾಣಕ್ಕೆ ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮವಹಿಸಬೇಕು – ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷ ಕರ್ನಾಟಕ ಸಂಘ ಮಂಡ್ಯ
ಕುಮಾರ ಜಿಲ್ಲಾಧಿಕಾರಿ ಮಂಡ್ಯ
ಹಣ ಬಿಡುಗಡೆಯಾಗಿಲ್ಲ: ಡಿಸಿ
ಬೇರೆ ಬೇರೆ ಇಲಾಖೆಗಳ ಕಚೇರಿಗಳನ್ನು ಸೇರಿಸಿ ‘ಅಮೃತ ಭವನ’ ನಿರ್ಮಾಣ ಮಾಡಬೇಕಿರುವ ಕಾರಣ ಸಂಬಂಧಿಸಿದ ಇಲಾಖೆಗಳು ಅನುದಾನ ಕೊಡಬೇಕಾಗುತ್ತದೆ. ರಾಜ್ಯ ಸರ್ಕಾರ ₹4 ಕೋಟಿ ಅನುದಾನಕ್ಕೆ ತಾತ್ವಿಕ ಅನುಮೋದನೆ ನೀಡಿದ್ದು ಇನ್ನೂ ಹಣ ಬಿಡುಗಡೆಯಾಗದ ಕಾರಣ ಭವನ ನಿರ್ಮಾಣದ ಕಾರ್ಯ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು – ಕುಮಾರ ಜಿಲ್ಲಾಧಿಕಾರಿ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.