ADVERTISEMENT

ಹನುಮ ಧ್ವಜ ತೆರವು ಪ್ರಕರಣ: ಪ್ರಗತಿಪರ ಸಂಘಟನೆಗಳಿಂದ 7ಕ್ಕೆ ಮಂಡ್ಯ ಬಂದ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 14:45 IST
Last Updated 31 ಜನವರಿ 2024, 14:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಡ್ಯ: ‘ಹನುಮ ಧ್ವಜ ತೆರವು ಪ್ರಕರಣದಲ್ಲಿ ಜಿಲ್ಲೆಯ ಶಾಂತಿ, ಸೌಹಾರ್ದಕ್ಕೆ ಧಕ್ಕೆ ತಂದಿರುವ ಶಕ್ತಿಗಳ ವಿರುದ್ಧ’ ಫೆ.7ರಂದು ಮಂಡ್ಯ ಬಂದ್ ಮಾಡಲು ಪ್ರಗತಿಪರ ಸಂಘಟನೆಗಳು ಬುಧವಾರ ಕರೆ ನೀಡಿವೆ.

‘ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯ ಹೋರಾಟ ಪರಂಪರೆಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಜನರ ಶಾಂತಿ ಮತ್ತು ನೆಮ್ಮದಿ ಕೆಡಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ. ಸಮಾನ ಮನಸ್ಕ ವೇದಿಕೆಯಡಿ ವಿವಿಧ ಸಂಘಟನೆಗಳು ಒಗ್ಗೂಡಿ ಮಂಡ್ಯ ನಗರ ಬಂದ್‌ ಮಾಡಲಾಗುವುದು’ ಎಂದು ವೇದಿಕೆಯ ಮುಖಂಡ ಎಂ.ಬಿ.ನಾಗಣ್ಣಗೌಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಕಾನೂನು ಮುರಿಯುವ, ಶಾಂತಿ ಕದಡುವ ಶಕ್ತಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪಾದಯಾತ್ರೆ ನೆಪದಲ್ಲಿ ಕುರುಬ ಸಮುದಾಯದ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಬೇಕು. ಜಾತ್ಯತೀತ ತತ್ವ, ಶಾಂತಿ, ಸೌಹಾರ್ದ ಬಯಸುವ ಸಂಘಟನೆಗಳ ಮುಖಂಡರು ಸಾರ್ವಜನಿಕರು ಬಂದ್‌ನಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಸಭೆ: ‘ಕುವೆಂಪು, ಕೆ.ವಿ.ಶಂಕರಗೌಡ, ಎಚ್‌.ಕೆ.ವೀರಣ್ಣಗೌಡ, ಜಿ.ಮಾದೇಗೌಡರ ಚಿಂತನೆಗಳು ಜಿಲ್ಲೆಗೆ ಮಾದರಿಯಾಗಿವೆ. ಈ ಪರಂಪರೆಯನ್ನು ಕೆಡಿಸುವ ಶಕ್ತಿಗಳ ವಿರುದ್ಧ ಹೋರಾಟ ನಡೆಸಲಿದ್ದೇವೆ. ರೈತ ಸಂಘ, ದಲಿತ ಸಂಘರ್ಷ ಸಮಿತಿ, ಸಿಐಟಿಯು, ಕರ್ನಾಟಕ ರಕ್ಷಣಾ ವೇದಿಕೆ ಸೇರಿ 20ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಲಿವೆ. ಈ ಕುರಿತು ಫೆ.1ರಂದು ಸಭೆ ನಡೆಸಲಾಗುವುದು’ ಎಂದರು.

ಬಾಲಕ, ಆತನ ತಂದೆಯ ವಿಚಾರಣೆ: ಪಾದಯಾತ್ರೆಯಲ್ಲಿ ಫ್ಲೆಕ್ಸ್‌ ಹರಿದ ಆರೋಪದ ಮೇಲೆ 9ನೇ ತರಗತಿ ವಿದ್ಯಾರ್ಥಿ ಹಾಗೂ ಆತನ ತಂದೆಯನ್ನು ಕೆರಗೋಡು ಪೊಲೀಸರು ಠಾಣೆಗೆ ಕರೆಸಿ, ವಿಚಾರಣೆ ನಡೆಸಿ ಕಳಿಸಿದರು. ಆ ವಿಚಾರ ತಿಳಿದ ಬಿಜೆಪಿ ಮುಖಂಡರು ಬಾಲಕನ ಮನೆಗೆ ಭೇಟಿ ನೀಡಿ ಸಮಾಧಾನ ಹೇಳಿದರು.

‘ಗ್ರಾಮಸ್ಥರು, ಮಕ್ಕಳು, ಮಹಿಳೆಯರು ಯಾವುದೇ ಅಪರಾಧ ಮಾಡಿಲ್ಲ. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇವೆ, ಯಾರೂ ಹೆದರಬೇಕಾಗಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್‌ ಹೇಳಿದರು. ಭಾನುವಾರ ಪಾದಯಾತ್ರೆ ವೇಳೆ ಗಾಯಗೊಂಡಿದ್ದ ಗ್ರಾಮಸ್ಥರ ಮನೆಗೂ ತೆರಳಿ ಸಾಂತ್ವನ ಹೇಳಿದರು.

ಹೋರಾಟ ಮುಂದುವರಿಕೆ: ಹನುಮ ಧ್ವಜ ತೆರವು ವಿರುದ್ಧ ಬಿಜೆಪಿ ಮುಖಂಡರು ಕೆರಗೋಡು ಗ್ರಾಮದಲ್ಲಿ ಸಭೆ ನಡೆಸಿ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಂಡರು. ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.

ಮನೆಮನೆಗೂ ಹನುಮ ಧ್ವಜ ಅಳವಡಿಕೆ: ಗ್ರಾಮಸ್ಥರಿಗೆ ಕರೆ

ಹನುಮ ಧ್ವಜ ತೆರವು ಖಂಡಿಸಿ ಬಿಜೆಪಿ ಮುಖಂಡರು ಕೆರಗೂಡು ಗ್ರಾಮದ ಮನೆಮನೆಗೂ ಹನುಮ ಧ್ವಜ ಅಳವಡಿಸುವ ಆಂದೋಲನ ಕೈಗೊಂಡಿದ್ದಾರೆ. ಧ್ವಜ ಹಾರಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸುವಂತೆ ಗ್ರಾಮಸ್ಥರಿಗೆ ಕರೆ ಕೊಟ್ಟಿದ್ದಾರೆ.

‘108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ. ಸರ್ಕಾರ ಹೊರ ಜಿಲ್ಲೆಗಳಿಂದ ಪೊಲೀಸ್‌ ಸಿಬ್ಬಂದಿ ಕರೆಸಿ ದೌರ್ಜನ್ಯ ಎಸಗುತ್ತಿದೆ. ಗ್ರಾಮದ ಮಕ್ಕಳು, ಮಹಿಳೆಯರಲ್ಲಿ ಭಯದ ವಾತಾವರಣವಿದೆ. ಸರ್ಕಾರದ ವಿರುದ್ಧ ಹೋರಾಟ ಮುಂದುವರಿಯಲಿದೆ’ ಎಂದು ಬಿಜೆಪಿ ಮುಖಂಡ ಅಶೋಕ್‌ ಜಯರಾಂ ಹೇಳಿದರು.

ಶಾಂತಿ ಸಭೆ ನಡೆಸಲು ಮನವಿ

‘ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಅಂಗಡಿಗಳು ಬಂದ್‌ ಆಗಿದ್ದು ಕೆರಗೋಡು ಗ್ರಾಮದಲ್ಲಿ ಅಶಾಂತಿ ನೆಲೆಸಿದೆ. ಈ ಹಿನ್ನೆಲೆಯಲ್ಲಿ ಶಾಂತಿಸಭೆ ನಡೆಸಿ ವಿವಾದವನ್ನು ಕೊನೆಗೊಳಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮೂರಿಗೆ ಬಂದಾಗ 101 ಎತ್ತಿನಗಾಡಿ ಮೂಲಕ ಸ್ವಾಗತ ಕೋರಿದ್ದೆವು.  ಅವರು ಈಗ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಕ್ರಮ ವಹಿಸಬೇಕು. ಶಾಂತಿ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಗ್ರಾಮಸ್ಥರಾದ ಕುಮಾರ್‌, ಶಿವಾನಂದ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.