ADVERTISEMENT

ಮಂಡ್ಯ: ತೆಂಗು; 1,428 ಗ್ರಾಮಗಳಲ್ಲಿ ರೋಗಬಾಧೆ ಸಮೀಕ್ಷೆ 

ಕಪ್ಪುತಲೆ ಹುಳು, ಬಿಳಿನೊಣ ಬಾಧೆಗೆ ಸೊರಗಿದ ತೆಂಗಿನ ಬೆಳೆ; ರೈತರು ಕಂಗಾಲು

ಸಿದ್ದು ಆರ್.ಜಿ.ಹಳ್ಳಿ
Published 24 ಆಗಸ್ಟ್ 2025, 4:39 IST
Last Updated 24 ಆಗಸ್ಟ್ 2025, 4:39 IST
ಕಪ್ಪುತಲೆ ಹುಳುವಿನ ಬಾಧೆಯಿಂದ ತೆಂಗಿನ ಗರಿಗಳು ಸುಟ್ಟುಹೋದಂತೆ ಕಾಣುತ್ತಿವೆ 
ಕಪ್ಪುತಲೆ ಹುಳುವಿನ ಬಾಧೆಯಿಂದ ತೆಂಗಿನ ಗರಿಗಳು ಸುಟ್ಟುಹೋದಂತೆ ಕಾಣುತ್ತಿವೆ    

ಮಂಡ್ಯ: ಕಪ್ಪುತಲೆ ಹುಳು, ಬಿಳಿನೊಣ ಬಾಧೆ, ಸೊರಗು ರೋಗ, ಬೆಂಕಿ ರೋಗ, ಹರಳು ಉದುರುವುದು ಹಾಗೂ ಇತರೆ ಕೀಟ, ರೋಗಗಳಿಗೆ ತೆಂಗಿನ ಬೆಳೆ ತುತ್ತಾಗಿದ್ದು, ರೈತರು ಕಂಗಾಲಾಗಿದ್ದಾರೆ. 

ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ತೆಂಗನ್ನು 60,551 ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದೆ. ಇದರಿಂದ 1,90,171 ಮೆಟ್ರಿಕ್‌ ಟನ್‌ ಉತ್ಪನ್ನ ದೊರೆಯುತ್ತಿದೆ. ಈ ಬಾರಿ ಹವಾಮಾನ ವೈಪರೀತ್ಯ, ನಿರಂತರ ಮಳೆ ಮುಂತಾದ ಕಾರಣಗಳಿಂದ ರೋಗಗಳು ಹೆಚ್ಚಾಗಿವೆ. ಸುಮಾರು ₹60 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕಪ್ಪುತಲೆ ಹುಳು ಬಾಧೆ, ಬಿಳಿನೊಣ ಭಾದೆಯು ಹೆಚ್ಚಾಗಿ ಮದ್ದೂರು, ಕೆ.ಆರ್‌.ಪೇಟೆ, ಪಾಂಡವಪುರ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಹರಳು ಉದುರುವ ಸಮಸ್ಯೆ ಹೆಚ್ಚಾಗಿ ಮದ್ದೂರು ಭಾಗದಲ್ಲಿಯೇ ತಲೆದೋರಿದೆ. ಬೆಂಕಿರೋಗವು ಮಳವಳ್ಳಿ ಮತ್ತು ಮದ್ದೂರು ತಾಲ್ಲೂಕಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ.  

ADVERTISEMENT

ಕಪ್ಪುತಲೆ ಹುಳು ಹಾಗೂ ಬಿಳಿನೊಣ ಕೀಟಗಳ ನಿಯಂತ್ರಣಕ್ಕಾಗಿ ಇಲಾಖೆಯು ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ 23 ಇಲಾಖಾ ಪ್ರಯೋಗ ಶಾಲೆಗಳಲ್ಲಿ ಗೋನಿಯೋಜಸ್‌ ಪರೋಪಜೀವಿಗಳು ಹಾಗೂ ಐಸೇರಿಯಾ ಶಿಲೀಂಧ್ರ ನಾಶಕವನ್ನು ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲು ₹50 ಲಕ್ಷ ಅನುದಾನ ನೀಡುವಂತೆ ಕೋರಿ ತೆಂಗು ಅಭಿವೃದ್ಧಿ ಮಂಡಳಿಯು ಕೊಚ್ಚಿ, ಕೇರಳದವರಿಗೆ ಪ್ರಸ್ತಾವ ಸಲ್ಲಿಸಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು. 

ತೆಂಗಿನ ಮರಗಳಿಗೆ ಕಪ್ಪುತಲೆ ಹುಳುಗಳು ಕಾಣಿಸಿಕೊಂಡಾಗ ತಕ್ಷಣದಲ್ಲಿ ಹತೋಟಿ ಕ್ರಮಗಳನ್ನು ಅನುಸರಿಸದಿದ್ದರೆ ಅಕ್ಕಪಕ್ಕದ ತೋಟಗಳಿಗೆ ಹರಡುವ ಸಾಧ್ಯತೆ ಹೆಚ್ಚಾಗಲಿದ್ದು, ಮುಂಜಾಗ್ರತೆ ಕ್ರಮ ಅವಶ್ಯ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಸರ್ವೆ ಕಾರ್ಯ:

‘1428 ಗ್ರಾಮಗಳ 3 ಲಕ್ಷ ತಾಕುಗಳಲ್ಲಿ ರೋಗ ಬಾಧೆಯನ್ನು ಸಮೀಕ್ಷೆ ಮಾಡಲು 114 ಪೆಸ್ಟ್‌ ಸರ್ವೆಯರ್‌ (ಸ್ಥಳೀಯ ಖಾಸಗಿ ವ್ಯಕ್ತಿ)ಗಳನ್ನು ನಿಯೋಜಿಸಲಾಗಿದೆ. ಅವರು ಪ್ರತಿ ತಾಕಿಗೆ ಹೋಗಿ ರೋಗ ಲಕ್ಷಣಗಳನ್ನು ಅಧ್ಯಯನ ಮಾಡಿ, ತಂತ್ರಾಂಶದಲ್ಲಿ ಅಂಕಿಅಂಶ ಮತ್ತು ಮಾಹಿತಿಯನ್ನು ದಾಖಲಿಸುತ್ತಾರೆ. ಈಗಾಗಲೇ ಅವರಿಗೆ ತರಬೇತಿಯನ್ನು ನೀಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ ಕೆ.ಎನ್‌.ತಿಳಿಸಿದರು. 

ತೆಂಗಿನ ಬೆಳೆಯು ವಿವಿಧ ರೋಗಗಳಿಗೆ ತುತ್ತಾಗಿದ್ದು, ಅಪಾರ ನಷ್ಟ ಅನುಭವಿಸಿದ್ದೇವೆ. ಸರ್ಕಾರ ಕೂಡಲೇ ಸಮರ್ಪಕ ಪರಿಹಾರ ನೀಡಿ, ರೈತರ ನೆರವಿಗೆ ಧಾವಿಸಬೇಕು ಎಂದು ನಾಗಮಂಗಲ, ಮದ್ದೂರು ತಾಲ್ಲೂಕಿನ ರೈತರು ಒತ್ತಾಯಿಸಿದ್ದಾರೆ. 

ವಿಠಲಾಪುರ ಸುಬ್ಬೇಗೌಡ ಪ್ರಗತಿಪರ ರೈತ 
ತೆಂಗಿನ ಬೆಳೆಯ ರೋಗಬಾಧೆ ಸಮೀಕ್ಷೆ ವರದಿಯನ್ನು ಒಂದು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಪಿ.ಆರ್‌.ಗಳು ತೋಟಕ್ಕೆ ಬಂದಾಗ ರೈತರು ಅಗತ್ಯ ಸಹಕಾರ ನೀಡಲು ಕೋರುತ್ತೇನೆ
– ರೂಪಶ್ರೀ ಕೆ.ಎನ್‌ ಉಪನಿರ್ದೇಶಕಿ ತೋಟಗಾರಿಕಾ ಇಲಾಖೆ

ಸಾವಯವ ಕೃಷಿಯಿಂದ ರೋಗ ನಿಯಂತ್ರಣ ಸಾಧ್ಯ’

‘ಸಾವಯವ ಕೃಷಿ ಅಳವಡಿಸಿಕೊಂಡರೆ ತೆಂಗು ಬೆಳೆಗೆ ಬರುವ ರೋಗಗಳನ್ನು ನಿಯಂತ್ರಿಸಬಹುದು. ಸಹಜ ಕೃಷಿಯಿಂದ ಮಣ್ಣಿನಲ್ಲಿ ಜೀವಾಣುಗಳು ಎರೆಹುಳುಗಳು ಹೆಚ್ಚಾಗುತ್ತವೆ. ಜೀವಾಮೃತದ ಬಳಕೆಯಾಗಬೇಕು’ ಎನ್ನುತ್ತಾರೆ ಕೆ.ಆರ್‌.ಪೇಟೆಯ ಪ್ರಗತಿಪರ ರೈತ ವಿಠಲಾಪುರ ಸುಬ್ಬೇಗೌಡ. ಕೆ.ಆರ್.ಪೇಟೆ ತಾಲ್ಲೂಕು ತೆಂಗಿನ ಕೃಷಿಗೆ ಹೆಸರಾಗಿದೆ. ಆದರೆ ಈ ಬಾರಿ ರೋಗಗಳಿಂದ ಇಳುವರಿ ಕುಸಿದಿದೆ. ರಸಗೊಬ್ಬರ ಬಳಕೆ ಅನಗತ್ಯವಾಗಿ ತೆಂಗಿನ ತೋಟವನ್ನು ಉಳುಮೆ ಮಾಡಿಸುವುದು ತೆಂಗಿನ ಬುಡ ಅಗೆಯುವದು ಮುಂತಾದ ಕಾರಣಗಳಿಂದ ರೋಗಗಳು ಹೆಚ್ಚಾಗಿವೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.