ಮಂಡ್ಯ: ಪೌರಕಾರ್ಮಿಕರಿಗೆಂದೇ ನೀಡಲಾಗಿರುವ ಸುರಕ್ಷತಾ ಪರಿಕರಗಳನ್ನು ಧರಿಸಿ ಕೆಲಸ ನಿರ್ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಣದ ಮಹತ್ವದ ಬಗ್ಗೆ ಪೌರಕಾರ್ಮಿಕರಿಗೆ ಅರಿವು ಮೂಡಿಸಿ ಎಂದು ತಿಳಿಸಿದರು.
ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಾಣ ಮಾಡಬೇಕು. ಮಂಡ್ಯದಲ್ಲಿ ಈಗಾಗಲೇ ಒಂದು ಪೌರಕಾರ್ಮಿಕ ವಿಶ್ರಾಂತಿ ಗೃಹ ಚಾಲ್ತಿಯಲ್ಲಿದೆ ಎಂದರು.
ಸಫಾಯಿ ಕರ್ಮಚಾರಿಗಳ ಮಕ್ಕಳುಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಿ. ಅಧಿಕಾರಿಗಳು ಪೌರಕಾರ್ಮಿಕರೊಂದಿಗೆ ಸಭೆಗಳನ್ನು ಆಯೋಜಿಸಿ ಸುರಕ್ಷತಾ ಪರಿಕರಗಳ ಕುರಿತು ಅರಿವು ಮತ್ತು ಮಹತ್ವದ ಕುರಿತು ಜಾಗೃತಿ ಮೂಡಿಸಿ. ಸುರಕ್ಷತಾ ಪರಿಕರಗಳನ್ನು ಬಳಸದೆ ಕೆಲಸ ನಿರ್ವಹಿಸಬಾರದು ಎಂಬುದನ್ನು ಮನದಟ್ಟು ಮಾಡಿ ಎಂದರು.
ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ 3 ತಿಂಗಳಿಗೊಮ್ಮೆ ಉಚಿತ ಆರೋಗ್ಯ ತಪಾಸಣಾ ಮಾಡಲಾಗುತ್ತಿದೆ. ಅಗತ್ಯವಿದ್ದರೆ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ. ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ ಅರ್ಹ ಪೌರಕಾರ್ಮಿಕರಿಗೆ ಸವಲತ್ತು ನೀಡಿ ಎಂದು ಸೂಚಿಸಿದರು.
ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಇ.ಎಸ್.ಐ ಮತ್ತು ಪಿ.ಎಫ್ ಮೊತ್ತವನ್ನು ಕಡ್ಡಾಯವಾಗಿ ಸಂಸ್ಥೆಯವರು ನೀಡಬೇಕು. ಕೆಲವು ಕಡೆ ನಿಗದಿಪಡಿಸಿದ ಉದ್ದೇಶಕ್ಕೆ ಹೊರತಾಗಿ ಬೇರೆ ಕೆಲಸಕ್ಕೆ ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಇತರ ಕಾರ್ಯಗಳಿಗೆ ಅವರನ್ನು ಬಳಸಿಕೊಂಡರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಡಿ.ವೈ.ಎಸ್.ಪಿ. ಲಕ್ಷ್ಮಿಕಾಂತ್ ಪ್ರಸಾದ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಧನುಷ್, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.