
ಸಚಿನ್ ಚಲುವರಾಯಸ್ವಾಮಿ ಆಯ್ಕೆ
ಮಂಡ್ಯ: ಇಲ್ಲಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಡಿಸಿಸಿ) ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ (ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸಚಿನ್ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮದ್ದೂರಿನ ಚಲುವರಾಜ್ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಲಾಯಿತು.
‘ಅಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಾಗಿದ್ದರು. ಸಚಿವ ಚಲುವರಾಯಸ್ವಾಮಿ ಅವರು ಎಲ್ಲ ಆಕಾಂಕ್ಷಿತರೊಂದಿಗೆ ಬೆಂಗಳೂರಿನಲ್ಲಿ ಗುರುವಾರ ಸಭೆ ನಡೆಸಿದ್ದರು. ಇದರ ಪರಿಣಾಮ ಎಲ್ಲ ಆಕಾಂಕ್ಷಿಗಳು ಯಾವುದೇ ಅಪಸ್ವರವಿಲ್ಲದೇ ಒಕ್ಕೊರಲಿನಿಂದ ಸಚಿನ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಸಚಿನ್ ಮಾತನಾಡಿ, ‘ಶಂಕರೇಗೌಡರು ಹಾಗೂ ಚೌಡೇಗೌಡರು ಸ್ಥಾಪಿಸಿದ ಸಂಸ್ಥೆ ಡಿ.ಸಿ.ಸಿ ಬ್ಯಾಂಕ್ ಮೊದಲಿನಿಂದಲೂ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಡಿ.ಸಿ.ಸಿ ಬ್ಯಾಂಕಿನ ಎಲ್ಲ ಸಿಬ್ಬಂದಿ ವರ್ಗದ ಜೊತೆ ಸಮನ್ವಯ ಸಾಧಿಸಿ ಉತ್ತಮ ಕೆಲಸ ಮಾಡಲಾಗುವುದು’ ಎಂದರು.
ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರು ಎರಡನೇ ಬಾರಿಗೆ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗುವ ಅವರ ಕನಸಿನ ಹಾದಿ ಸುಗಮವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.