ಪ್ರಜಾವಾಣಿ ವಾರ್ತೆ
ಮಂಡ್ಯ: ಕುರುಬ ಸಮುದಾಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕುರುಬರ ಸಂಘ ಮತ್ತು ಕಾಂಗ್ರೆಸ್ ಮುಖಂಡರು ಬುಧವಾರ ಕರೆ ನೀಡಿದ್ದ ಬಸರಾಳು ಬಂದ್ ಪ್ರತಿಭಟನೆಗೆ ಸೀಮಿತವಾಗಿತ್ತು.
ಬಸರಾಳು ಗ್ರಾಮದಲ್ಲಿ ಬಾರ್, ಹೋಟೆಲ್‌ಗಳು, ದಿನಸಿ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಬಂದ್ ಹಾಗೂ ಪ್ರತಿಭಟನೆಯಿಂದಾಗಿ ನಾಗಮಂಗಲ- ಮಂಡ್ಯ ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.
ಪ್ರತಿಭಟನಾ ಮೆರವಣಿಗೆ ಹೊರಡುವ ರಸ್ತೆ ಸಮೀಪದ ಕೆಲವು ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದರು. ಮೆರವಣಿಗೆ ಹೋದ ಮೇಲೆ ಅಂಗಡಿ ಬಾಗಿಲು ತೆರೆಯಲಾಯಿತು.
ಮೊದಲಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಕುರುಬ ಸಮುದಾಯದವರು ಬಸರಾಳು ವೃತ್ತದಲ್ಲಿ ಜಮಾವಣೆಗೊಂಡು ಘೋಷಣೆ ಕೂಗಿದರು. ನಂತರ ಪೊಲೀಸ್ ಠಾಣೆವರೆಗೂ ಮೆರವಣಿಗೆ ನಡೆಸಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಬೆನ್ನಟ್ಟಿ ಗ್ರಾಮದ ಕುಮಾರ್ ಮತ್ತು ಶ್ಯಾನಬೋಗನಹಳ್ಳಿ ಗ್ರಾಮದ ಮಹೇಶ್ ಎಂಬ ಆರೋಪಿಗಳು ಕುರುಬ ಸಮುದಾಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಕುರುಬ ಸಮುದಾಯದ ಮುಖಂಡರು ಸಿಡಿದೆದ್ದು, ಈ ವ್ಯಕ್ತಿಗಳನ್ನು ಬಂಧಿಸುವಂತೆ ಕಳೆದ ಮೂರು ದಿನಗಳಿಂದಲೂ ಒತ್ತಾಯ ಕೇಳಿ ಬರುತ್ತಲೇ ಇತ್ತು.
ಇವರ ವಿರುದ್ಧ ಬಸರಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ.12ರಂದು ಮಂಗಳವಾರ ಕುಮಾರ್ ಮತ್ತು ಮಹೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆಯಲ್ಲಿ ಮುತ್ತೇಗೆರೆ ಕುಮಾರ್, ಕೊಡಗಹಳ್ಳಿ ಪ್ರಕಾಶ್, ಚೇತು, ಬಸರಾಳು ಪ್ರಶಾಂತ್, ಶೈಲೇಂದ್ರ, ಕರಡಿಕೊಪ್ಪಲು ಪುಟ್ಟಣ್ಣ, ಗರಡನಹಳ್ಳಿ ಚಂದ್ರು, ಕರೀಗೌಡ, ಸಾತನೂರು ಮಹೇಶ್, ಮಂಜು, ಜಿಲ್ಲಾ ಘಟಕದ ಅಧ್ಯಕ್ಷೆ ಶುಭದಾಯಿನಿ, ಮಳವಳ್ಳಿ ಶ್ರೀಧರ್, ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್, ನಾಗಮಂಗಲ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸನ್ನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.