ADVERTISEMENT

‘ನಗರೀಕರಣ’ ರಾಜಕಾರಣಿಗಳ ಒಂದು ಅಸ್ತ್ರ: ಕವಿತಾ ಕುರುಗಂಟಿ

ಮಂಡ್ಯ ಅಭಿವೃದ್ಧಿ ಹೇಗೆ ಸಾಧ್ಯ ವಿಚಾರಗೋಷ್ಠಿ: ಕೃಷಿ ತಜ್ಞೆ ಕವಿತಾ ಕುರುಗಂಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:59 IST
Last Updated 6 ಜುಲೈ 2025, 2:59 IST
ಮಂಡ್ಯ ನಗರದ ಕೆ.ವಿ. ಶಂಕರೇಗೌಡ ಸಭಾಂಗಣದಲ್ಲಿ ನಡೆದ ‘ಗ್ರಾಮೀಣ ಮತ್ತು ಕೃಷಿ ಪ್ರಧಾನವಾದ ಮಂಡ್ಯ ಅಭಿವೃದ್ಧಿ ಹೇಗೆ ಸಾಧ್ಯ’ ಎಂಬ ವಿಚಾರಗೋಷ್ಠಿಯಲ್ಲಿ ಆಶಾ ಕಿಸಾನ್ ಸ್ವರಾಜ್ ವೇದಿಕೆಯ ಕವಿತಾ ಕುರುಗಂಟಿ ಮಾತನಾಡಿದರು
ಮಂಡ್ಯ ನಗರದ ಕೆ.ವಿ. ಶಂಕರೇಗೌಡ ಸಭಾಂಗಣದಲ್ಲಿ ನಡೆದ ‘ಗ್ರಾಮೀಣ ಮತ್ತು ಕೃಷಿ ಪ್ರಧಾನವಾದ ಮಂಡ್ಯ ಅಭಿವೃದ್ಧಿ ಹೇಗೆ ಸಾಧ್ಯ’ ಎಂಬ ವಿಚಾರಗೋಷ್ಠಿಯಲ್ಲಿ ಆಶಾ ಕಿಸಾನ್ ಸ್ವರಾಜ್ ವೇದಿಕೆಯ ಕವಿತಾ ಕುರುಗಂಟಿ ಮಾತನಾಡಿದರು   

ಮಂಡ್ಯ: ‘ಈ ಜಿಲ್ಲೆಯು 2015ರಿಂದ ತಲಾದಾಯದಲ್ಲಿ ರಾಜ್ಯ ಇತರೆ 24 ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮುಂದಿದೆ. ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ವನ್ನು ಅಭಿವೃದ್ಧಿ ಮಾನದಂಡವಾಗಿ ನೋಡಬೇಕಾಗಿಲ್ಲ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿಯೂ ಸಹ ಮಂಡ್ಯ ಜಿಲ್ಲೆಯು ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ. ಹಾಗಾಗಿ ಮಂಡ್ಯ ಹೆಚ್ಚು ನಗರೀಕರಣಗೊಳ್ಳದೆಯೂ ಅಭಿವೃದ್ದಿ ಸಾಧಿಸುವ ಎಲ್ಲಾ ಸಾಧ್ಯತೆಗಳಿವೆ’ ಎಂದು ಆಶಾ ಕಿಸಾನ್ ಸ್ವರಾಜ್ ವೇದಿಕೆಯ ಕವಿತಾ ಕುರುಗಂಟಿ ತಿಳಿಸಿದರು.

ಮಂಡ್ಯ ನಗರದ ಕೆ.ವಿ. ಶಂಕರೇಗೌಡ ಸಭಾಂಗಣದಲ್ಲಿ ನಡೆದ ‘ಗ್ರಾಮೀಣ ಮತ್ತು ಕೃಷಿ ಪ್ರಧಾನವಾದ ಮಂಡ್ಯ ಅಭಿವೃದ್ಧಿ ಹೇಗೆ ಸಾಧ್ಯ’ ಎಂಬ ವಿಚಾರಗೋಷ್ಠಿಯಲ್ಲಿ 'ಕೃಷಿ ಪ್ರಧಾನವಾದ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯುಳ್ಳ ಪ್ರದೇಶದಲ್ಲಿ ಸುಸ್ಥಿರ ಆದಾಯ ವೃದ್ಧಿಗೆ ಇರುವ ಸಾಧ್ಯತೆಗಳು' ಕುರಿತು ವಿಚಾರ ಮಂಡನೆ ಮಾಡಿದರು.

ಕೃಷಿ, ಶಿಕ್ಷಣ ಆರೋಗ್ಯ ಎಲ್ಲಾ ವಿಚಾರದಲ್ಲಿಯೂ ಕೂಡ ಗ್ರಾಮೀಣ ಭಾಗವನ್ನು ಹೊಂದಿರುವ ಜಿಲ್ಲೆಯೇ ಮುಂದಿದೆ. ನಗರೀಕರಣ ರಾಜಕಾರಣಿಗಳ ಒಂದು ಅಸ್ತ್ರ ಅಷ್ಟೆ. ರಾಜಕೀಯ ಬಂಡವಾಳವಾಗಿ ನಗರ ಪ್ರದೇಶಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದುದರಿಂದ ನಗರೀಕರಣದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದು ಶೇಕಡಾ 17ರಷ್ಟು ಆಗುತ್ತಿದೆ. ಈ ಬಗ್ಗೆ ಗಮನ ಹರಿಸದೆ ಕೃಷಿಯಲ್ಲಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.

ADVERTISEMENT

ಅಬ್ದುಲ್ ಕಲಾಂರ ಆಶಯದಂತೆ ‘ಗ್ರಾಮೀಣ ಪ್ರದೇಶದಲ್ಲೇ ನಗರೀಕರಣದ ಸೌಲಭ್ಯಗಳು’ ಎಲ್ಲೆಡೆ ಕಾರ್ಯರೂಪಕ್ಕೆ ಬರಬೇಕು. ಅದನ್ನು ಪಾಂಡವಪುರ ತಾಲೂಕಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು 6 ಪಂಚಾಯಿತಿಗಳಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತವಾಯಿತು. 

ವಿಚಾರಗೋಷ್ಠಿಯಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಿ.ಸಂತೋಷ್ ಮಾತನಾಡಿ, ಸಹಜ ಕೃಷಿ, ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದರು. ಉಪನ್ಯಾಸಕ ಪೃಥ್ವಿರಾಜ್ ಬೊಪ್ಪಸಮುದ್ರ ಪ್ರಾಸ್ತಾವಿಕ ಮಾತನಾಡಿದರು. ಜಾಗೃತ ಕರ್ನಾಟಕದ ಕುರಿತು ಡಾ.ಬಿ.ಸಿ. ಬಸವರಾಜು ಮಾತನಾಡಿದರು. ಪ್ರಜ್ವಲ್ ನಾಗಮಂಗಲ ಕಾರ್ಯಕ್ರಮ ನಿರ್ವಹಣೆ ಮಾಡುವರು.

ಜಾಗೃತ ಕರ್ನಾಟಕದ ಸದಸ್ಯೆ ಸೀತಾಲಕ್ಷ್ಮೀ ಅವರು ಕವಿತಾ ಕುರಕಂಟಿ ಅವರ ಇಂಗ್ಲಿಷ್‌ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿದರು. ಗೋಷ್ಠಿಯನ್ನು ಎನ್. ನಾಗೇಶ್ ನಿರ್ವಹಿಸಿದರು.

‘ಭತ್ತ ಕಬ್ಬು ಇಳುವರಿ ಕುಸಿತ’ 

ಮಂಡ್ಯದಲ್ಲಿನ ಕೃಷಿ ಬೆಳೆಗಳ ಇಳುವರಿ ಕಡಿಮೆಯಾಗಿದೆ. ಭತ್ತ ಕಬ್ಬು ಸೇರಿದಂತೆ ಇತರೇ ಬೆಳೆಗಳ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದ್ದು ಇದಕ್ಕೆ ಮುಖ್ಯ ಕಾರಣವೇ ಇಲ್ಲಿನ ಕಲುಷಿತ ಹಾಗೂ ನೈಟ್ರೇಟ್ ನಂತಹ ಅಂಶವೊಂದಿರುವ ನೀರು. ಇದಲ್ಲದೆ 0.3ರಷ್ಟು ಫಲವತ್ತತೆ ಕಡಿಮೆಯಾಗಿದೆ. ಶೇ 67ರಷ್ಟು ನೀರಾವರಿ ಹೊಂದಿರುವ ಜಿಲ್ಲೆಯಲ್ಲಿ ಮರುಭೂಮಿಯಲ್ಲಿ ಇರುವಂತಹ ಕಳಪೆ ಫಲವತ್ತತೆ ಇದೆ ಎಂದರೆ ಎಷ್ಟರ ಮಟ್ಟಿಗೆ ಭೂಮಿ ರಾಸಾಯನಿಕಗಳಿಂದ ಕಲುಷಿತವಾಗಿದೆ ಎಂಬುದನ್ನು ಚಿಂತಿಸಬೇಕು ಎಂದು ಆಶಾ ಕಿಸಾನ್ ಸ್ವರಾಜ್ ವೇದಿಕೆಯ ಕವಿತಾ ಕುರುಗಂಟಿ ತಿಳಿಸಿದರು. 

‘ನಗರೀಕರಣವೇ ಅಭಿವೃದ್ಧಿ ಎಂಬ ಭ್ರಮೆ’

ವಿಚಾರವಾದಿ ಎಚ್‌.ವಿ. ವಾಸು ಮಾತನಾಡಿ ‘ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಸರ್ಕಾರವೇ ತಲೆಕೆಡಿಸಿಕೊಂಡು ಕುಳಿತಿದೆ. ಮುಂದಿನ 25 ವರ್ಷಗಳಲ್ಲಿ ಈಗಿನ ಕೃಷಿ ಭೂಮಿ ಅಂದಿಗೂ ಕೃಷಿ ಭೂಮಿಯೇ ಆಗಿ ಉಳಿಯಲಿದೆಯೇ ಎಂಬ ಮೂಲಭೂತ ಪ್ರಶ್ನೆ ಹಾಕಿಕೊಳ್ಳಬೇಕು. ಕೃಷಿಗಿರುವ ಸಾಮಾಜಿಕ ಪ್ರತಿಷ್ಠೆ ಕಡಿಮೆಯಾಗಿದೆ. ನಗರ ಪ್ರದೇಶ ಅಥವಾ ನಗರೀಕರಣವೇ ಅಭಿವೃದ್ಧಿ ಎಂದು ಕೆಲವರಿಂದ ನಂಬಿಸಲಾಗಿದೆ. ಕೃಷಿ ಹಾಗೂ ಗ್ರಾಮ ಪ್ರಧಾನವಾಗಿರುವ ಜಿಲ್ಲೆ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಮಂಡ್ಯ ಜಿಲ್ಲೆ ಸಾಧಿಸಿ ತೋರಿಸುತ್ತಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.