ADVERTISEMENT

ಮಂಡ್ಯ ಜಿಲ್ಲೆಯಲ್ಲಿ 203 ಕೆರೆಗಳು ಒತ್ತುವರಿ: ಕಠಿಣ ಕ್ರಮಕ್ಕೆ ಡಿಸಿ ಸೂಚನೆ

ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:29 IST
Last Updated 25 ಅಕ್ಟೋಬರ್ 2025, 5:29 IST
ತೊಣ್ಣೂರು ಕೆರೆಯ ವಿಹಂಗಮ ನೋಟ (ಸಾಂದರ್ಭಿಕ ಚಿತ್ರ) 
ತೊಣ್ಣೂರು ಕೆರೆಯ ವಿಹಂಗಮ ನೋಟ (ಸಾಂದರ್ಭಿಕ ಚಿತ್ರ)    

ಮಂಡ್ಯ: ಜಿಲ್ಲೆಯ ಒಟ್ಟು 962 ಕೆರೆಗಳು ಇದ್ದು ಅದರಲ್ಲಿ 203 ಕೆರೆಗಳನ್ನು ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿದೆ. ಒತ್ತುವರಿಗೊಂಡಿರುವ ಕೆರೆಗಳನ್ನು ತೆರವುಗೊಳಿಸುವುದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವುಗೊಳಿಸುವ ಕುರಿತು ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆರೆಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಕೆರೆಗಳನ್ನು ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ಹೇಳಿದರು.

ಜಿಲ್ಲೆಯಲ್ಲಿ 962 ಕೆರೆಗಳಿವೆ. ಕಂದಾಯ ಇಲಾಖೆಯ ವತಿಯಿಂದ ಎಲ್ಲ ಕೆರೆಗಳನ್ನು ಸರ್ವೆ ನಡೆಸಿ ಸಂಬಂಧಪಟ್ಟ ಇಲಾಖೆಯ ವಶಕ್ಕೆ ಈಗಾಗಲೇ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಮುಖ್ಯಮಂತ್ರಿಯವರು ಪ್ರತಿ ತಿಂಗಳು ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ವಿಡಿಯೊ ಸಂವಾದದ ಮೂಲಕ ನಡೆಸಿ ಆಯಾ ಜಿಲ್ಲೆಯ ಕೆರೆಗಳ ಸರ್ವೆ ಮಾಡಬೇಕು, ಕೆರೆಗಳು ಒತ್ತುವರಿಗೊಂಡಿದ್ದರೆ ತೆರವುಗೊಳಿಸಬೇಕು, ನಂತರ ಕೆರೆಗಳು ಒತ್ತುವರಿಯಾಗದಂತೆ ಸಂರಕ್ಷಣೆ ಮಾಡಲು ರಾಜ್ಯದ ಎಲ್ಲ ಡಿ.ಸಿ. ಮತ್ತು ಸಿ.ಇ.ಒ.ಗಳಿಗೆ ಸೂಚಿಸಿದ್ದಾರೆ ಎಂದರು.

ಅಧಿಕಾರಿಗಳ ಹೆಚ್ಚಿನ ಮುತುವರ್ಜಿ ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡು ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು, ತೆರವುಗೊಳಿಸಿದ ಕೆರೆಗಳು ಮತ್ತೆ ಒತ್ತುವರಿ ಮಾಡದಂತೆ ಸಂರಕ್ಷಣೆ ಮಾಡಬೇಕು, ಕೆರೆ ಒತ್ತುವರಿ ಮಾಡಿದವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದ ಹೇಳಿದರು.

ಒತ್ತುವರಿಯಾಗಿರುವ ಕೆರೆಗಳನ್ನು ಸಂರಕ್ಷಣೆ ಮಾಡಲು ಪ್ರತಿ ತಿಂಗಳು ಶೇ 50ರಷ್ಟು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಗುರಿಯನ್ನು ನೀಡಬೇಕು. ತಹಶೀಲ್ದಾರ್‌ ಬಳಿ ಇರುವ ಅನುದಾನವನ್ನು ಬಳಸಿಕೊಂಡು ಶೀಘ್ರವಾಗಿ ಒತ್ತುವರಿಯನ್ನು ತೆರವುಗೊಳಿಸಬೇಕು. ತಹಶೀಲ್ದಾರ್ ಇದರ ಉಸ್ತುವಾರಿ ವಹಿಸಿಕೊಂಡು ಕೆರೆ ಸಂರಕ್ಷಣೆ ಮಾಡಲು ನಿರ್ಲಕ್ಷ್ಯ ತೊರುವ ಅಧಿಕಾರಿಗಳ ವಿರುದ್ಧ ಕಾಯ್ದೆ 192 ಬಿ ಅನ್ವಯ ಕಠಿಣ ಕ್ರಮ ಕೈಗೊಳ್ಳಿ ಎಂದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್‌. ನರಸಿಂಹಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್ ಮತ್ತು ಅಧಿಕಾರಿಗಳು ಇದ್ದರು. 

ಕಾಯ್ದೆ 192 ಬಿ ಅನ್ವಯ ಕೆರೆ ಸಂರಕ್ಷಣೆ ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ಅಸಡ್ಡೆ ಅಥವಾ ವಿಫಲವಾದರೆ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದಾಗಿದೆ
– ಕುಮಾರ ಜಿಲ್ಲಾಧಿಕಾರಿ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.