ADVERTISEMENT

ಉದ್ಯೋಗ ಮೇಳ ಸದುಪಯೋಗ ಆಗಲಿ: ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 5:43 IST
Last Updated 14 ಫೆಬ್ರುವರಿ 2026, 5:43 IST
ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳದ ಪೂರ್ವಭಾವಿ ಸಭೆಯಲ್ಲಿ ಜಿ.ಪಂ. ಸಿಇಒ ಕೆ.ಆರ್.ನಂದಿನಿ ಮಾತನಾಡಿದರು
ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳದ ಪೂರ್ವಭಾವಿ ಸಭೆಯಲ್ಲಿ ಜಿ.ಪಂ. ಸಿಇಒ ಕೆ.ಆರ್.ನಂದಿನಿ ಮಾತನಾಡಿದರು   

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಿರುವುದರಿಂದ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಂಡು, ಜಿಲ್ಲೆಯಲ್ಲಿ ಪ್ರಚಾರ ನಡೆಸುವ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಜಿ.ಪಂ. ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಗ್ರಾಮೀಣ ಕೌಶಲ್ಯ ಯೋಜನೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಡ್ಯ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲಾಮಟ್ಟದ ಉದ್ದೋಗ ಮೇಳ- 2026’ ಕಲಾಭವನದಲ್ಲಿ ಫೆ.21 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರಗೆ ಮಂಡ್ಯ ವಿವಿಯಲ್ಲಿ ನಡೆಯಲಿದೆ. ಅಂಗವಿಕಲ ಅಭ್ಯರ್ಥಿಗಳನ್ನು ಗುರುತಿಸಿ ನಿಗದಿಪಡಿಸಿರುವ ‘ವಿಶೇಷ ಕೊಠಡಿ’ಯಲ್ಲಿ ಸಂದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

ADVERTISEMENT

ತಾಲ್ಲೂಕುವಾರು ವ್ಯಾಪ್ತಿಯಲ್ಲಿ ಉದ್ಯೋಗ ಮೇಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುಬೇಕು. ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ಶಿಷ್ಟಾಚಾರದಂತೆ ಆಹ್ವಾನಿಸಬೇಕು. ಉದ್ಯೋಗ ಮೇಳ ಕುರಿತು ಜನ ಪ್ರತಿನಿಧಿಗಳ ವೀಡಿಯೋ, ಆಡಿಯೋ ಸಂದೇಶಗಳನ್ನು ಚಿತ್ರೀಕರಿಸಿ, ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ವಚ್ಛ ವಾಹಿನಿ ವಾಹನಗಳ(ಗ್ರಾಮೀಣ ಮತ್ತು ನಗರ ಪ್ರದೇಶ) ಮೂಲಕ ವ್ಯಾಪಕ ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಉದ್ಯೋಗದಾತ ಸಂಸ್ಥೆಗಳ ನೋಂದಣಿ ಮತ್ತು ನಿರ್ವಹಣಾ ಸಮಿತಿಯು ವಿವಿಧ ವಲಯಗಳ ಉದ್ಯೋಗದಾತ ಸಂಸ್ಥೆಗಳನ್ನು ಸಂಪರ್ಕಿಸಿ, ನೋಂದಾಯಿಸಿಕೊಳ್ಳಬೇಕು ಉದ್ಯೋಗದಾತ ಸಂಸ್ಥೆಗಳಿಗೆ ಅಗತ್ಯವಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ವಿವರಗಳನ್ನು ಸಂಗ್ರಹಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಹೆಚ್ಚಿನ ಜನ ಸಂದಣಿ ಇರುವ ಪ್ರದೇಶಗಳಲ್ಲಿ ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸಬೇಕು. 18 ವರ್ಷ ಮೇಲ್ಪಟ್ಟ ಪುರುಷ, ಮಹಿಳಾ, ತೃತೀಯ ಲಿಂಗಿಗಳು ಹಾಗೂ ವಿಶೇಷ ವರ್ಗ, ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಬಹುದು ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪ ಸಂಖ್ಯಾಂತರು, ಲೈಂಗಿಕ ಅಲ್ಪಸಂಖ್ಯಾಂತರು, ವಿಶೇಷ ವರ್ಗದ ನಿರುದ್ಯೋಗಿಗಳಿಗೆ ನೋಂದಾಯಿಸಿಕೊಳ್ಳುವಂತೆ ನೋಡಿಕೊಳ್ಳಿ, ತಾಲ್ಲೂಕುವಾರು ಎಲ್ಲಾ ಸಂಜೀವಿನಿ ಸಿಬ್ಬಂದಿ, ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಅಭ್ಯರ್ಥಿಗಳ ನೋಂದಣಿ ಮಾಡಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗದಾತ ಸಂಸ್ಥೆಗಳ ಪಟ್ಟಿ ಸಂಗ್ರಹಿಸಿ ನೋಂದಾಯಿಸಬೇಕು ಎಂದು ತಿಳಿಸಿದರು.

ಉದ್ಯೋಗ ಮೇಳದಂದು ನೋಂದಣಿ ಕೌಂಟರ್ ಮತ್ತು ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಬೇಕು. ಉದ್ಯೋಗದಾತ ಸಂಸ್ಥೆಗಳಿಗೆ, ಅಭ್ಯರ್ಥಿಗಳಿಗೆ ಪ್ರತ್ಯೇಕ ಕೌಂಟರ್ ನಿರ್ಮಿಸಿ ನೀರು ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕು. ಸಂದರ್ಶನ ಕೊಠಡಿಗಳಲ್ಲಿ ಚೇರ್, ಟೇಬಲ್ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಸಂದರ್ಶನ ಕೊಠಡಿಗಳನ್ನು ಸ್ವಚ್ಛಗೊಳಿಸಲು ಅಗತ್ಯ ಡಿ ಗ್ರೂಪ್ ಸಿಬ್ಬಂದಿ ನಿಯೋಜಿಸಿ, ಉದ್ಯೋಗ ಆಕಾಂಕ್ಷಿಗಳು ಆಧಾರ್ ಕಾರ್ಡ್ ಮತ್ತು ಫೋಟೊ, ಅರ್ಹತಾ ಅಂಕ ಪಟ್ಟಿ ತರಬೇಕು. ನೋಂದಾಯಿಸಿಕೊಂಡವರಿಗೆ ಊಟದ ಟೋಕನ್ ಅನ್ನು ನೀಡಬೇಕು ಎಂದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸ್, ಕೃಷಿ ಇಲಾಖೆ ಅಧಿಕಾರಿ ಹರ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಆಶಾ, ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ್ ಭಾಗವಹಿಸಿದ್ದರು.

Highlights - ಮಂಡ್ಯದಲ್ಲಿ ಫೆ.21 ಉದ್ಯೋಗ ಮೇಳ ಉದ್ಯೋಗ ಮೇಳ: ವ್ಯಾಪಾಕ ಪ್ರಚಾರ ಕೈಗೊಳ್ಳಿ ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನ ಆಹ್ವಾನಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.