ಮಂಡ್ಯ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಗೆ ಒಂದು ದಿನ ಮಾತ್ರ ಬಾಕಿ ಇದ್ದು, ಇದುವರೆಗೆ ಜಿಲ್ಲೆಯಲ್ಲಿ ಶೇ 94.19ರಷ್ಟು ಪ್ರಗತಿಯಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆ 3ನೇ ಸ್ಥಾನ ಗಳಿಸಿದೆ.
ತುಮಕೂರು (ಶೇ 95.55) ಮತ್ತು ಚಿಕ್ಕಮಗಳೂರು (ಶೇ 95.33) ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಒಟ್ಟು 16 ದಿನಗಳ ಗಡುವು ನೀಡಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಸರ್ಕಾರ ಮತ್ತೆ ಅ.18ರವರೆಗೆ ದಿನಾಂಕ ವಿಸ್ತರಿಸಿದೆ.
ಮಂಡ್ಯ ಜಿಲ್ಲೆಯಲ್ಲಿ 5,04,016 ಕುಟುಂಬಗಳಿದ್ದು, ಶೇ 94.19ರಷ್ಟು ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಅ.17ರಂದು 3,883 ಕುಟುಂಬಗಳ ಸಮೀಕ್ಷೆ ಮಾಡಲಾಯಿತು. ಅ.18ರಂದು ಕಡೇ ದಿನ ಬಾಕಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸುವ ಗುರಿಯನ್ನು ಜಿಲ್ಲಾಡಳಿತ ಹಾಕಿಕೊಂಡಿದೆ. ಜಿಲ್ಲೆಯಲ್ಲಿ 18,66,350 ಜನಸಂಖ್ಯೆಯಿದ್ದು, ಇದುವರೆಗೆ 17,57,934 ಜನರನ್ನು ಸಮೀಕ್ಷೆ ಮಾಡಲಾಗಿದೆ.
ಜಿಲ್ಲೆಯ 7 ತಾಲ್ಲೂಕುಗಳ ಪೈಕಿ ನಾಗಮಂಗಲ ತಾಲ್ಲೂಕಿನಲ್ಲಿ ಶೇ 100ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ತಾಲ್ಲೂಕಿನಲ್ಲಿ 1,94,201 ಜನಸಂಖ್ಯೆಯಿದ್ದು, ಎಲ್ಲರನ್ನೂ ಸಮೀಕ್ಷೆ ಮಾಡಲಾಗಿದೆ ಎಂದು ಸಮೀಕ್ಷೆದಾರರು ಮಾಹಿತಿ ನೀಡಿದ್ದಾರೆ.
ಕೃಷ್ಣರಾಜಪೇಟೆ (ಶೇ 92.5), ಮದ್ದೂರು (ಶೇ 95.8), ಮಳವಳ್ಳಿ (ಶೇ 94.2), ಮಂಡ್ಯ (ಶೇ 92.2), ಪಾಂಡವಪುರ (ಶೇ 95.3) ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ (ಶೇ 90.2)ರಷ್ಟು ಪ್ರಗತಿಯಾಗಿದೆ.
ಈ ಸಮೀಕ್ಷೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಂಡ್ಯ ನಗರದ ವಾಡ್೯ ನಂ.20ರಲ್ಲಿರುವ ಬಸವರಾಜು ಎಚ್.ಸಿ ಅವರ ಮನೆಯಿಂದ ಸೆ.22ರಂದು ಚಾಲನೆ ನೀಡಿದ್ದರು.
ಮಂಡ್ಯ ಜಿಲ್ಲೆಯಲ್ಲಿ 5,04,016 ಕುಟುಂಬಗಳಿದ್ದು, 4,651 ಸಮೀಕ್ಷೆದಾರರನ್ನು ನಿಯೋಜಿಸಲಾಗಿದೆ. ಒಬ್ಬ ಗಣತಿದಾರರಿಗೆ 120 ಕುಟುಂಬಗಳಂತೆ ಬ್ಲಾಕ್ ಹಂಚಿಕೆ ಮಾಡಲಾಗಿದೆ. 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.
‘ಸಮೀಕ್ಷೆಗೆ ಹೋದ ಸಂದರ್ಭ ಕೆಲ ಕುಟುಂಬಗಳು ಪೂರ್ಣ ಮಾಹಿತಿ ನೀಡಿಲ್ಲ. ಇನ್ನು ಕೆಲವರು ಮಾಹಿತಿ ನೀಡಲು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಜಾತಿ ಸಮೀಕ್ಷೆ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವು ಮನೆಗಳ ಆರ್.ಆರ್.ಸಂಖ್ಯೆ ಸಿಗದೆ ಸಮೀಕ್ಷೆದಾರರು ಪರದಾಡಿದ್ದಾರೆ. ಒಟ್ಟು 60 ಪ್ರಶ್ನೆಗಳಿಗೆ ಉತ್ತರ ಪಡೆಯುವುದು ದೊಡ್ಡ ಸವಾಲು’ ಎಂದು ಸಮೀಕ್ಷೆ ಕಾರ್ಯದ ಅಧಿಕಾರಿಯೊಬ್ಬರು ತಿಳಿಸಿದರು.
ಕುಮಾರ ಜಿಲ್ಲಾಧಿಕಾರಿ ಮಂಡ್ಯ
4,651 ಸಮೀಕ್ಷೆದಾರರ ನಿಯೋಜನೆ 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕ ನೇಮಕ ಮಂಡ್ಯ ಜಿಲ್ಲೆಯಲ್ಲಿ 18,66,350 ಜನಸಂಖ್ಯೆ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಮಂಡ್ಯ ಜಿಲ್ಲೆಯು 3ನೇ ಸ್ಥಾನ ಪಡೆದಿದೆ. ಸಮೀಕ್ಷೆದಾರರು ಮತ್ತು ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿದ್ದು ಎಲ್ಲರೂ ಅಭಿನಂದನೆಗೆ ಅರ್ಹರು.ಕುಮಾರ, ಜಿಲ್ಲಾಧಿಕಾರಿ ಮಂಡ್ಯ