ADVERTISEMENT

ಮಂಡ್ಯ | ತಮಿಳುನಾಡಿಗೆ ನೀರು ಹರಿಸಿದ್ದಕ್ಕೆ ಪ್ರತಿಭಟನೆ

ವಿ.ಸಿ ನಾಲೆಗೆ ನೀರು ಬಿಡದಿದ್ದರೆ ಅಧಿಕಾರಿಗಳನ್ನು ಕಟ್ಟಿಹಾಕುವುದಾಗಿ ರೈತ ಸಂಘ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 3:00 IST
Last Updated 5 ಆಗಸ್ಟ್ 2025, 3:00 IST
ವಿಶ್ವೇಶ್ವರಯ್ಯ ನಾಲೆಗೆ ನೀರುಬಿಡಲು ಆಗ್ರಹಿಸಿ ಭಾರತೀನಗರದ ಮದ್ದೂರು-ಮಳವಳ್ಳಿ ಮುಖ್ಯ ಹೆದ್ದಾರಿಯ ಹಲಗೂರು ವೃತ್ತದಲ್ಲಿ ರೈತಸಂಘದ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು
ವಿಶ್ವೇಶ್ವರಯ್ಯ ನಾಲೆಗೆ ನೀರುಬಿಡಲು ಆಗ್ರಹಿಸಿ ಭಾರತೀನಗರದ ಮದ್ದೂರು-ಮಳವಳ್ಳಿ ಮುಖ್ಯ ಹೆದ್ದಾರಿಯ ಹಲಗೂರು ವೃತ್ತದಲ್ಲಿ ರೈತಸಂಘದ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು   

ಭಾರತೀನಗರ (ಮಂಡ್ಯ ಜಿಲ್ಲೆ): ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ಮದ್ದೂರು-ಮಳವಳ್ಳಿ ಮುಖ್ಯ ಹೆದ್ದಾರಿಯ ಹಲಗೂರು ವೃತ್ತದಲ್ಲಿ ಜಮಾಯಿಸಿ ರಸ್ತೆ ತಡೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.

ರೈತಸಂಘದ ಜಿಲ್ಲಾ ಮುಖಂಡ ಬೋರಾಪುರ ಶಂಕರೇಗೌಡ ಮಾತನಾಡಿ, ‘ಅಣೆಕಟ್ಟೆ ತುಂಬಿದರೂ ವಿಶ್ವೇಶ್ವರಯ್ಯ ನಾಲೆಗಳಿಗೆ ನೀರು ಬಿಡುತ್ತಿಲ್ಲ. ಭತ್ತದ ಸಸಿ ಮಡಿಗಳನ್ನು ತಯಾರಿಸಲು ಇದು ಸಕಾಲವಾಗಿದ್ದು, ನೀರಿನ ಕೊರತೆಯಿಂದ ಬೇಸಾಯ ಮಾಡಲು ತೊಂದರೆಯುಂಟಾಗುತ್ತಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ನಾಲೆಗಳ ಆಧುನೀಕರಣದ ಕೆಲಸವನ್ನು ಯಾವಾಗ ಮಾಡಬೇಕೆಂಬ ಕನಿಷ್ಠ ಜ್ಞಾನ ಕೂಡ ನೀರಾವರಿ ಇಲಾಖೆಗೆ ಹಾಗೂ ಸರ್ಕಾರಕ್ಕೆ ಇಲ್ಲ. ನಾಲೆಗಳಿಗೆ ನೀರು ಬಿಡದಿದ್ದರೆ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟಿಸಬೇಕಾಗುತ್ತದೆ’ ಎಂದರು.

ರೈತಸಂಘದ ಜಿಲ್ಲಾಕಾರ್ಯದರ್ಶಿ ಲಿಂಗಪ್ಪಾಜಿ ಮಾತನಾಡಿ, ‘ನಾಲೆಗೆ ನೀರು ಬಿಡದಿದ್ದರೆ ನೀರಾವರಿ ಇಲಾಖೆ ಅಧಿಕಾರಿಗಳನ್ನು ಎಲ್ಲೆಂದರಲ್ಲಿ ಅಡ್ಡಗಟ್ಟಿ, ಕಂಬಕ್ಕೆ ಕಟ್ಟಿ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.