ADVERTISEMENT

ಮಂಡ್ಯದಲ್ಲಿ ಹೆಚ್ಚಿದ ‘ಗಾಂಜಾ’ ಘಾಟು

5 ವರ್ಷಗಳಲ್ಲಿ 212 ಪ್ರಕರಣಗಳು; 298 ಆರೋಪಿಗಳಿಂದ ₹27 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ

ಸಿದ್ದು ಆರ್.ಜಿ.ಹಳ್ಳಿ
Published 18 ಜನವರಿ 2026, 5:23 IST
Last Updated 18 ಜನವರಿ 2026, 5:23 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಾದಕ ವಸ್ತು ಮತ್ತು ಗಾಂಜಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕಳೆದ 5 ವರ್ಷಗಳಲ್ಲಿ 212 ಪ್ರಕರಣಗಳು ದಾಖಲಾಗಿದ್ದು, 298 ಆರೋಪಿಗಳನ್ನು ಬಂಧಿಸಲಾಗಿದೆ. 

2021ರಲ್ಲಿ 15, 2022ರಲ್ಲಿ 10, 2023ರಲ್ಲಿ 39, 2024ರಲ್ಲಿ 57 ಹಾಗೂ 2025ರಲ್ಲಿ ಬರೋಬ್ಬರಿ 91 ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್‌ ಹಾವಳಿಯಿಂದ ಯುವಜನರು ಮತ್ತು ವಿದ್ಯಾರ್ಥಿಗಳು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. 

ಮಾದಕ ವಸ್ತು ಮಾರಾಟ ಮತ್ತು ಗಾಂಜಾ ಗಿಡ ಬೆಳೆಯುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 94 ಪ್ರಕರಣಗಳು ದಾಖಲಾಗಿದ್ದು, 141 ಆರೋಪಿಗಳನ್ನು ಬಂಧಿಸಲಾಗಿದೆ. ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 118 ಪ್ರಕರಣಗಳನ್ನು ದಾಖಲಿಸಿ, 157 ಆರೋಪಿಗಳನ್ನು ಬಂಧಿಸಲಾಗಿದೆ. 

ADVERTISEMENT

ವಿವಿಧ ತಾಲ್ಲೂಕುಗಳಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಬಂಧಿತರಾದವರಿಂದ ಒಟ್ಟು ₹27.43 ಲಕ್ಷ ಮೌಲ್ಯದ 77 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾ, ಅಫೀಮು, ಹೆರಾಯಿನ್‌ ಸೇರಿದಂತೆ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ ವಿರುದ್ಧ ಪೊಲೀಸರು ‘ಎನ್‌.ಡಿ.ಪಿ.ಎಸ್‌’ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಎಗ್ಗಿಲ್ಲದೆ ಮಾರಾಟ:

ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಸಮೀಪದ ಜವನಗಹಳ್ಳಿ ಗುಡ್ಡದ ಬಳಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು 2025ರ ಡಿಸೆಂಬರ್‌ನಲ್ಲಿ ಪೊಲೀಸರು ಬಂಧಿಸಿ ₹10 ಸಾವಿರ ಮೌಲ್ಯದ 100 ಗ್ರಾಂ ಒಣಗಿದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದರು. 

ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ 2025ರ ಸೆಪ್ಟೆಂಬರ್‌ನಲ್ಲಿ ‘ಹಂಪಿ ಎಕ್ಸ್‌ಪ್ರೆಸ್‌’ ರೈಲಿನಲ್ಲಿ ಗಾಂಜಾ ಸೇದುತ್ತಿದ್ದ ಉತ್ತರ ಪ್ರದೇಶದ ಮೂವರು ಯುವಕರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದರು.

ಗಾಂಜಾ ಸಾಗಣೆ:

ಕೆ.ಆರ್.ಪೇಟೆ ತಾಲ್ಲೂಕಿನ ಚಿಕ್ಕೋನಹಳ್ಳಿ ಕೆ.ಬಿ.ಎಚ್ ಬಡಾವಣೆ ಮುಂಭಾಗದ ಚನ್ನರಾಯಪಟ್ಟಣ- ಮೈಸೂರು ಮುಖ್ಯ ರಸ್ತೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಬಕಾರಿ ಪೊಲೀಸರು 2025ರ ಜೂನ್‌ನಲ್ಲಿ ಬಂಧಿಸಿ, ₹3.5 ಲಕ್ಷ ಬೆಲೆ ಬಾಳುವ 5 ಕೆ.ಜಿ ಒಣ ಗಾಂಜಾವನ್ನು ಜಪ್ತಿ ಮಾಡಿದ್ದರು. 

ಪಾಂಡವಪುರದಲ್ಲಿ ಬೈಕ್‌ನಲ್ಲಿ ಅಕ್ರಮವಾಗಿ 2 ಕೆ.ಜಿ ಒಣ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು 2025ರ ಜೂನ್‌ನಲ್ಲಿ ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 

ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಮನೆಯ ಮುಂದೆ ಬೆಳೆದಿದ್ದ ನಿಷೇಧಿತ ಗಾಂಜಾ ಗಿಡಗಳನ್ನು ಅಧಿಕಾರಿಗಳ ತಂಡ ವಶಪಡಿಸಿಕೊಂಡಿತು (ಸಂಗ್ರಹ ಚಿತ್ರ)
ಶೋಭಾರಾಣಿ ಎಸ್ಪಿ
ಮಾದಕ ವಸ್ತುಗಳಿಂದ ಯುವಜನರು ದೂರವಿರುವಂತೆ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಜಿಲ್ಲೆಯಲ್ಲಿ ಡ್ರಗ್ಸ್‌ ಹಾವಳಿ ನಿಯಂತ್ರಿಸಲು ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ
ಶೋಭಾರಾಣಿ ವಿ.ಜೆ. ಎಸ್ಪಿ ಮಂಡ್ಯ

ಗಾಂಜಾ ಮಾರಾಟ; ಅಪರಾಧಿಗೆ 6 ತಿಂಗಳು ಜೈಲು 2021ರಲ್ಲಿ ಗಾಂಜಾ ಮಾರಾಟ ಮಾಡಿದ್ದ ಅಪರಾಧಿ ಮೊಹಮ್ಮದ್‌ ಅಕೀಲ್‌ಗೆ ಮಂಡ್ಯದ 2ನೇ ಹೆಚ್ಚುವರಿ ಹಿರಿಯ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು 6 ತಿಂಗಳ ಸಾದಾ ಕಾರಾಗೃಹ ಮತ್ತು ₹5 ಸಾವಿರ ದಂಡ ವಿಧಿಸಿದ್ದಾರೆ.  ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಆಟೊ ರಿಕ್ಷಾದಲ್ಲಿ ಕುಳಿತು 70 ಗ್ರಾಂ ತೂಕದ ಗಾಂಜಾ ಸೊಪ್ಪು ಮಾರಾಟ ಮಾಡಿದ ಆರೋಪದ ಮೇರೆಗೆ ಮಂಡ್ಯ ಸೆಂಟ್ರಲ್‌ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು.

ಮನೆಯ ಆವರಣದಲ್ಲೇ ಗಾಂಜಾ!: ‌ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮನೆಯ ಮುಂದೆ ಬೆಳೆದಿದ್ದ 9 ಕೆ.ಜಿ. ಹಸಿ ಗಾಂಜಾ ಗಿಡಗಳನ್ನು ತಹಶೀಲ್ದಾರ್ ಚೇತನಾ ಯಾದವ್ ನೇತೃತ್ವದ ಅಧಿಕಾರಿಗಳ ತಂಡ 2025ರ ಅಕ್ಟೋಬರ್‌ನಲ್ಲಿ ವಶಪಡಿಸಿಕೊಂಡಿತ್ತು.  ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಕಿರುಗಾವಲು ಪೊಲೀಸರು 2025ರ ಸೆಪ್ಟೆಂಬರ್‌ನಲ್ಲಿ ಬಂಧಿಸಿ 1.66 ಕೆ.ಜಿ. ತೂಕದ ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.