ADVERTISEMENT

ಮಂಡ್ಯ | ಕುಂಭದ್ರೋಣ ಮಳೆ: ಮನೆ ಗೋಡೆ ಕುಸಿತ; 20 ಎಕರೆಗೂ ಹೆಚ್ಚು ಬೆಳೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 4:16 IST
Last Updated 10 ಅಕ್ಟೋಬರ್ 2025, 4:16 IST
   

ಶ್ರೀರಂಗಪಟ್ಟಣ: ಗುರುವಾರ ಇಡೀ ರಾತ್ರಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಬಳಿ, ಎರಮಣಿ ನಾಲೆ ಮತ್ತು ಅಡ್ಡಹಳ್ಳ ಉಕ್ಕಿ ಹರಿದು 20 ಎಕರೆಗೂ ಹೆಚ್ಚು ಬೆಳೆ ಜಲಾವೃತವಾಗಿದೆ.

ಗ್ರಾಮದ ಲಕ್ಷ್ಮೇಗೌಡ ಮತ್ತು ಗುರುಮೂರ್ತಿ ಎಂಬವರ ಭತ್ತದ ಬೆಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹೊಯ್ಸಳ ಎಂಬವರ ಜೋಳ ಮತ್ತು ತೆಂಗಿನ ಸಸಿಗಳು‌‌ ಮುಳುಗಿವೆ. ಶಿವಲಿಂಗೇಗೌಡ, ಕೆ.ಪಿ. ಸ್ವಾಮಿ, ಇತರರ ಕಬ್ಬು, ಬಾಳೆ, ಅಡಿಕೆ ತೋಟಗಳು ಜಲಾವೃತವಾಗಿವೆ.

ಕೂಡಲಕುಪ್ಪೆ ಗೇಟ್- ಕೂಡಲಕುಪ್ಪೆ ಸಂಪರ್ಕ ಸೇತುವೆ‌ ಮೇಲೆ ಎರಡು ಅಡಿಗಳಷ್ಟು ನೀರು ಹರಿದಿದೆ. '75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೂಡಲಕುಪ್ಪೆ ಅಡ್ಡಹಳ್ಳ ಈ ಪರಿ ಉಕ್ಕಿ ಹರಿದಿದೆ' ಎಂದು ಗ್ರಾಮದ ಗೋಪಾಲಗೌಡ ತಿಳಿಸಿದ್ದಾರೆ.

ADVERTISEMENT

ಮಳೆಗೆ ಮನೆ ಗೋಡೆ ಕುಸಿತ: ಯುವಕ ಪಾರು

ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕಪಾಳ್ಯ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ.

ಗ್ರಾಮದ ದಿವಂಗತ ಗೋಪಾಲ್ ಅವರ ಮಗ ಪುನೀತ್ ಕುಮಾರ ಅವರ ಮನೆಯ ಗೋಡೆ 25 ಅಡಿಗಳಷ್ಟು ಕುಸಿದು ಬಿದ್ದಿದೆ. ಪುನೀತ್ ಮಲಗಿದ್ದ ವೇಳೆ ಗೋಡೆ ದಿಢೀರ್ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಮಣ್ಣಿನ ಗೋಡೆ ಕುಸಿದು ಪಾತ್ರೆ, ಟಿವಿ, ಫ್ಯಾನ್, ಬಟ್ಟೆ, ದವಸ- ಧಾನ್ಯ ಹಾಳಾಗಿವೆ.

ಪುನೀತ್ ಕುಮಾರ್ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಸದ್ಯ ಅವರಿಗೆ ಇರಲು ಮನೆ ಇಲ್ಲದ ಪರಿಸ್ಥಿತಿ ಬಂದಿದೆ ಎಂದು ಗ್ರಾಮದ ಮುಖಂಡ ಪುರುಷೋತ್ತಮ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.