
ಮಂಡ್ಯ: ‘ಬೂದನೂರು ಉತ್ಸವ’ ಅಂಗವಾಗಿ ಫೆ.20ರಿಂದ 22ರವರೆಗೆ ಹೆಲಿಟೂರಿಸಂ ಆಯೋಜನೆ ಮಾಡಲಾಗುತ್ತಿದೆ. ಹೆಲಿಪ್ಯಾಡ್ ನಿಲ್ದಾಣದ ಸ್ಧಳದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಹೆಲಿಕಾಪ್ಟರ್ ಮೂಲಕ ಬೂದನೂರು ಉತ್ಸವವನ್ನು ಕಣ್ತುಂಬಿಕೊಳ್ಳಲು ಒಬ್ಬರಿಗೆ ₹3,800 ಪಾವತಿಸಬೇಕಾಗಿರುತ್ತದೆ. ಒಬ್ಬರಿಗೆ 7 ನಿಮಿಷ ಕಾಲಾವಕಾಶ ಇದ್ದು 5 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿರುವುದಿಲ್ಲ ಎಂದು ಸೂಚಿಸಿದರು
ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಲೈಟಿಂಗ್ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.
ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳದ ವಾಹನ ವ್ಯವಸ್ಥೆ ಸ್ಧಳದಲ್ಲಿರಬೇಕು. ಟಿಕೆಟ್ ಕೌಂಟರ್ ಸ್ಥಾಪಿಸಿ ಹೆಲಿಪ್ಯಾಡ್ ನಿಯಮದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಮಾತನಾಡಿ, ‘ಸಾರ್ವಜನಿಕರು ಸರದಿ ಸಾಲಿನಲ್ಲಿ ಟಿಕೆಟ್ ಪಡೆಯಬೇಕು. ಎಲೆಕ್ಟ್ರಾನಿಕ್ ವಸ್ತುಗಳು, ವಾಟರ್ ಬಾಟಲ್, ಫೋನ್ ನಿಷೇಧಿಸಲಾಗಿರುತ್ತದೆ. ಸಾರ್ವಜನಿಕರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಶಿವಮೂರ್ತಿ, ಅಗ್ನಿಶಾಮಕ ದಳದ ಅಧೀಕ್ಷಕ ರಾಘವೇಂದ್ರ, ವಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಡಾ.ಜವರೇಗೌಡ, ಡಾ.ವೀರಭದ್ರಪ್ಪ ಹಾಜರಿದ್ದರು.
ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಗುರುತಿನ ಚೀಟಿ ತನ್ನಿ ಹೆಲಿ ಟೂರಿಸಂ: 5 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ
ಪ್ರಥಮ ಚಿಕಿತ್ಸೆಗೆ ಬೇಕಾಗುವ ಔಷಧಿ ಮತ್ತು ನುರಿತ ವೈದ್ಯರು ಹಾಗೂ ಅಧಿಕಾರಿಗಳನ್ನು ನೇಮಿಸಬೇಕು. ತುರ್ತು ಸೇವೆಗೆ ಆಂಬುಲೆನ್ಸ್ ಅಗ್ನಿಶಾಮಕ ವಾಹನ ವ್ಯವಸ್ಥೆ ಇರಬೇಕು
– ಕುಮಾರ ಜಿಲ್ಲಾಧಿಕಾರಿ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.