ADVERTISEMENT

ಮಂಡ್ಯದಲ್ಲಿ ಕೈಗಾರಿಕೆಗೆ ಜಾಗ ಕೊಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 11:50 IST
Last Updated 23 ಜನವರಿ 2026, 11:50 IST
   

ಮಂಡ್ಯ: ‘ಜಿಲ್ಲೆಯಲ್ಲಿ ಕೈಗಾರಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕೆ ಪೂರಕವಾಗಿ ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ವತಿಯಿಂದಲೇ ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಶುಕ್ರವಾರ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಗೆ ಏನು ಮಾಡಬೇಕು ಎಂಬುದು ಖಂಡಿತ ನನಗೆ ಗೊತ್ತಿದೆ. ಈ ಬಗ್ಗೆ ಬೇರೆ ಯಾರ ಸರ್ಟಿಫಿಕೇಟ್ ಬೇಕಿಲ್ಲ. ಈ ಬಗ್ಗೆ ನಾನೇ ಸಿಎಂಗೆ ಪತ್ರ ಬರೆದಿದ್ದೇನೆ ಎಂದರು.

ಮಂಡ್ಯದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ‘ಆಟೋಮೇಟಿವ್‌ ರೀಸರ್ಚ್ ಅಸೋಸಿಯೆಷನ್ ಆಫ್ ಇಂಡಿಯಾ’ (ಎ.ಆರ್‌.ಎ.ಐ) ಸಂಸ್ಥೆ ಸ್ಥಾಪಿಸಲು ಜಾಗ ಕೊಡುವಂತೆ ನನ್ನ ಇಲಾಖೆಯಿಂದಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದರು.

ADVERTISEMENT

ಅಭಿವೃದ್ಧಿ ಎಲ್ಲರ ಜವಾಬ್ದಾರಿ

ಇದರಲ್ಲಿ ಅನವಶ್ಯಕ ರಾಜಕೀಯ ಅಗತ್ಯ ಇಲ್ಲ. ಜಿಲ್ಲೆಯ ಅಭಿವೃದ್ಧಿ ಎಲ್ಲರ ಜವಾಬ್ದಾರಿ. ಜಿಲ್ಲಾಧಿಕಾರಿ ಜಾಗ ಇಲ್ಲ ಹೇಳಿದ್ದರು. ಶಾಸಕರಿಗೆ ಜಾಗ ಕೊಡುವ ಅವಕಾಶ ಇದೆಯೇ? ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ಸಿಗರು ರಾಜಕೀಯ ಮಾಡ್ತಿದ್ದಾರೆ‌ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಮಂಡ್ಯಕ್ಕೆ ಕೈಗಾರಿಕೆ ತರಲು ಎಷ್ಟು ಶ್ರಮ ಹಾಕುತ್ತಿದ್ದೇನೆ ಅನ್ನುವುದು ನನಗೆ ಮಾತ್ರ ಗೊತ್ತು. ರಾಜಕೀಯವಾಗಿ ಟೀಕೆ ಸಾಮಾನ್ಯ. ಜಿಲ್ಲೆಗೆ ಒಳ್ಳೆದಾಗಬೇಕು ಎಂದರೆ ಜೆಡಿಎಸ್ ಒದ್ದೊಡಿಸಬೇಕು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಯಾರನ್ನು ಒದ್ದೊಡಿಸುತ್ತಾರೆ ಅನ್ನುವುದು ಗೊತ್ತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಮರೆಮಾಚಲು ಅಪಪ್ರಚಾರ

‘ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ‘ವಿಬಿ ಜಿ ರಾಮ್ ಜಿ’ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ. ಪದೇ ಪದೇ ದಲಿತರ ಹೆಸರು ಬಳಸಿ ತಮ್ಮ ಸ್ಥಾನಮಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ‌. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಇದು ದಲಿತರ ಉದ್ಧಾರವೇ? ಎಂದು ಎಚ್‌ಡಿಕೆ ಕಿಡಿಕಾರಿದರು.

ಸಂಘರ್ಷಗಳಿಂದ ಸಮಸ್ಯೆ ಬಗೆಹರಿಯಲ್ಲ. ಕೇಂದ್ರದ ಜತೆ ವಿಶ್ವಾಸದಲ್ಲಿದ್ದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ನಾನು ಸಲಹೆ ನೀಡುತ್ತೇನೆ. ಮಾತೆತಿದ್ದರೆ ದೊಡ್ಡ ಪ್ರಮಾಣದ ಟ್ಯಾಕ್ಸ್ ಕಟ್ಟುತ್ತಿದ್ದೇವೆ ಅಂತೀರಾ? ತೆರಿಗೆ ಕಟ್ಟುವವರು ಜನರು. ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗಳಾಗಬೇಕು. ಅದನ್ನು ಬಿಟ್ಟು ಕೇವಲ ಹೈಡ್ರಾಮಾ ನಡೆಸಿದರೆ ಏನೂ ಆಗುವುದಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ದರಿದ್ರ ಸರ್ಕಾರ: ಎಚ್‌ಡಿಕೆ ಟೀಕೆ 

‘ಇತ್ತೀಚೆಗೆ ಅಪರೂಪದ ಅಯಸ್ಕಾಂತ (ರೇರ್ ಅರ್ಥ್ ಮ್ಯಾಗ್ನೆಟಿಕ್) ಕಾರ್ಖಾನೆ ಸ್ಥಾಪಿಸಲು ಕರ್ನಾಟಕದವರೇ ಪ್ರಸ್ತಾವ ಸಲ್ಲಿಸಿದ್ದರು. ಅವರು ನನ್ನಲ್ಲಿಗೆ ಬಂದಿದ್ದರು. ಮಂಡ್ಯದಲ್ಲೇ ಒಂದು ಕೈಗಾರಿಕೆ ಸ್ಥಾಪಿಸುವಂತೆ ಕೇಳಿದರೆ ಕರ್ನಾಟಕದಲ್ಲಿ ಬೇಡ ಅಂತಾರೆ. ಕರ್ನಾಟಕ ಸರ್ಕಾರ ಬೆಂಬಲ ಕೊಡಲ್ಲ ಎಂದು ದೂರುತ್ತಾರೆ. ವಿಶಾಖಪಟ್ಟಣದಲ್ಲಿ ಜಾಗ ಕೊಡಿಸಿ ಎಂದು ಕೇಳುತ್ತಾರೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ರಾಜ್ಯದಲ್ಲಿ ಇಂಥ ಕೆಟ್ಟ ಪರಿಸ್ಥಿತಿ ಸೃಷ್ಟಿ ಮಾಡಿದ್ದು ಯಾರು? ಸರ್ಕಾರ ಅಲ್ಲವೇ? ಇದು ದರಿದ್ರ ಸರ್ಕಾರ. ಇವರಿಗೆ ಅಭಿವೃದ್ಧಿ ಬೇಕಿಲ್ಲ. ಈ ಸರ್ಕಾರದ ಯಾವುದೇ ಸಚಿವರು ಅಭಿವೃದ್ಧಿ ವಿಚಾರವಾಗಿ ನನ್ನೊಂದಿಗೆ ಚರ್ಚಿಸಿಲ್ಲ. ಕೈಗಾರಿಕೆ ಅಷ್ಟೇ ಅಲ್ಲ, ಬೇರೆ ಯಾವ ಅಭಿವೃದ್ಧಿ ಕೆಲಸಕ್ಕೆ ಕೂಡ ಯಾರು ನಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿಲ್ಲ’ ಎಂದು ಅವರು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.