ADVERTISEMENT

ಮಂಡ್ಯ| ಭೂ ಕಬಳಿಕೆ ವಿರುದ್ಧ ನ್ಯಾಯಾಂಗ ತನಿಖೆ ನಡೆಸಿ: ಮಾಜಿ ಶಾಸಕ ಸುರೇಶ್‌ಗೌಡ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 6:06 IST
Last Updated 23 ಜನವರಿ 2026, 6:06 IST
ಕೆ.ಸುರೇಶಗೌಡ, ಮಾಜಿ ಶಾಸಕ 
ಕೆ.ಸುರೇಶಗೌಡ, ಮಾಜಿ ಶಾಸಕ    

ಮಂಡ್ಯ: ‘ನಾಗಮಂಗಲ ತಾಲ್ಲೂಕಿನಲ್ಲಿ ನಡೆದಿರುವ ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿ ಪ್ರಕರಣದಲ್ಲಿ ಸರ್ಕಾರಿ ನೌಕರರನ್ನು ಮಾತ್ರ ಬಂಧಿಸಲಾಗಿದೆ. ಹಗರಣದ ‘ಕಿಂಗ್‌ಪಿನ್‌’ಗಳನ್ನು ಆರಾಮಾಗಿ ಓಡಾಡಿಕೊಂಡಿದ್ದು, ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಒತ್ತಾಯಿಸಿದರು. 

‘ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ಆಣತಿಯಿಲ್ಲದೆ ನಾಗಮಂಗಲ ತಾಲ್ಲೂಕಿನಲ್ಲಿ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಅವರಿಗೆ ತಿಳಿಯದಂತೆ ಇಷ್ಟು ದೊಡ್ಡ ಅಕ್ರಮ ನಡೆಯಲು ಸಾಧ್ಯವೇ? ಅಕ್ರಮದ ಸಂಪೂರ್ಣ ಹೊಣೆಯನ್ನು ಸಚಿವರು ಹೊರಬೇಕಿದೆ. ಹಗರಣ ನಡೆಸಿದವರನ್ನು ರಕ್ಷಿಸುತ್ತಿರುವವರು ಯಾರು ಎಂಬುದು ಗೊತ್ತಿದೆ. ಸರ್ಕಾರ ನಡೆಸುವವರಿಗೆ ಸತ್ಯಾಂಶ ಹೊರತರುವ ಜವಾಬ್ದಾರಿಯೂ ಇದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

1990ರ ಅವಧಿಯಿಂದಲೂ ತಾಲ್ಲೂಕಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾವಿರಾರು ಎಕರೆ ಭೂ ಹಗರಣ ನಡೆದಿದೆ. ನಾನು ಶಾಸಕನಾಗಿದ್ದ ಅವಧಿಯೂ ಸೇರಿದಂತೆ ಹಗರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ನಾನು ತಪ್ಪು ಮಾಡಿದ್ದರೆ ನನ್ನನ್ನು ಜೈಲಿಗೆ ಕಳುಹಿಸಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ADVERTISEMENT

‘ಮೇಕೆದಾಟು ಯೋಜನೆ ಸಂಬಂಧ, ಅರಣ್ಯ ಇಲಾಖೆಗೆ ನಾಗಮಂಗಲದಲ್ಲಿ ಪರ್ಯಾಯ ಜಮೀನು ನೀಡುವುದಾಗಿ ಹೇಳುತ್ತಿದ್ದಾರೆ. ಮೇಕೆದಾಟಿಗೂ ನಾಗಮಂಗಲಕ್ಕೂ ಏನು ಸಂಬಂಧ. ತಾಲ್ಲೂಕಿನಲ್ಲೇ ಅರ್ಜಿ ಹಾಕಿದವರಿಗೆ ಸ್ಥಳ ನೀಡಲು ಜಾಗವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಚನ್ನಪ್ಪ, ಸಂತೋಷ್, ಅಪ್ಪಾಜಿ, ಎಸ್.ಕೆ. ನಾಗೇಶ್, ರಾಜೇಗೌಡ, ಶ್ರೀನಿವಾಸ್ ಇದ್ದರು.

‘ಉಂಡ ಮನೆಗೆ ದ್ರೋಹ ಸರಿಯೇ?’

‘ಎನ್‌.ಚಲುವರಾಯಸ್ವಾಮಿ ಅವರನ್ನು ಶಾಸಕ ಸಚಿವರನ್ನಾಗಿ ಮಾಡಿದ್ದು ಜೆಡಿಎಸ್‌. ಈಗ ಜೆಡಿಎಸ್‌ ಪಕ್ಷವನ್ನೇ ಬೇರು ಸಹಿತ ಕಿತ್ತು ಹಾಕಿ ಎಂದು ಸಚಿವರು ಕರೆ ಕೊಟ್ಟಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯುವುದು ಸರಿಯೇ? ಜೆಡಿಎಸ್‌ ಕಿತ್ತು ಹಾಕಲು ಸಾಧ್ಯವೇ?’ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಆರೋಪಿಸಿದರು.  ಚಲುವರಾಯಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ. ಜನರ ತೀರ್ಪು ಏನು ಎಂಬುದು ಗೊತ್ತಾಗುತ್ತದೆ. ದುರಾಡಳಿತ ಮಗನಿಗೆ ಅಧಿಕಾರ ಕಲ್ಪಿಸುವ ಹಪಾಹಪಿ ಎಲ್ಲವೂ ಜನರಿಗೆ ಗೊತ್ತಾಗಿದೆ ಎಂದು ಕುಟುಕಿದರು.  ಮನ್‌ಮುಲ್‌ನಲ್ಲಿ ನಡೆದ ಹಾಲು–ನೀರು ಹಗರಣದ ಪಾಲುದಾರರು ಸಚಿವರ ಮನೆಯಲ್ಲಿ ಕುಳಿತು ರಕ್ಷಣೆ ಪಡೆಯುತ್ತಿದ್ದಾರೆ. ಎಲ್ಲ ಗೊತ್ತಿದ್ದರೂ ಸಚಿವರು ಮಾತನಾಡುತ್ತಿಲ್ಲ ಎಂದು ಆರೋಪಿಸಿದರು. 

‘ನ್ಯಾಯಾಂಗ ತನಿಖೆ ನಡೆಸಿ’

ಪೊಲೀಸ್‌ ಇಲಾಖೆಯ ತನಿಖೆಯಿಂದ ನ್ಯಾಯ ಸಿಗುವ ನಿರೀಕ್ಷೆಯಿಲ್ಲ. ಅವರಿಗೆ ಕಂದಾಯ ದಾಖಲೆಗಳ ಬಗ್ಗೆ ಆಳವಾದ ಜ್ಞಾನ ಇರುವುದಿಲ್ಲ. ಬ್ರಹ್ಮಾಂಡ ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು’ ಎಂದು ಕೆ.ಸುರೇಶಗೌಡ ಒತ್ತಾಯಿಸಿದರು. ‘ಬೇನಾಮಿ ಹೆಸರಿನಲ್ಲಿ ಆರ್‌ಟಿಸಿ ಮಾಡಿಸಿಕೊಂಡು ನಂತರ ಆ ಜಮೀನನ್ನು ಖರೀದಿಸುವ ಮೂಲಕ ಕೆಲವರು ಬಚಾವಾಗುತ್ತಿದ್ದಾರೆ. ಹಾಸನ–ಬೆಂಗಳೂರು ಮೈಸೂರು– ತುಮಕೂರು ಹೆದ್ದಾರಿಯ ಇಕ್ಕೆಲಗಳ ಭೂಮಿ ದರ ಗಗನಕ್ಕೇರಿದ್ದು ಭೂಗಳ್ಳರ ಕಣ್ಣು ಬಿದ್ದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.