ADVERTISEMENT

ಮುಡಾ ವ್ಯಾಪ್ತಿ ವಿಸ್ತರಣೆಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ: ಶಾಸಕ ಪಿ.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:11 IST
Last Updated 16 ಸೆಪ್ಟೆಂಬರ್ 2025, 2:11 IST
ಪಿ.ರವಿಕುಮಾರ್
ಪಿ.ರವಿಕುಮಾರ್   

ಮಂಡ್ಯ: ನಗರಸಭೆ ವ್ಯಾಪ್ತಿ ವಿಸ್ತರಿಸಲು ಗ್ರಾಮ ಪಂಚಾಯಿತಿಗಳ ಅಧೀನದಲ್ಲಿರುವ ಹೊಸ ಬಡಾವಣೆಗಳನ್ನು ಸೇರಿಸಲು ಕ್ರಮಮ ವಹಿಸಲಾಗುವುದು, ಜೊತೆಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವ್ಯಾಪ್ತಿ ವಿಸ್ತರಣೆ ಮಾಡಿ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ಪಿ.ರವಿಕುಮಾರ್‌ ಹೇಳಿದರು.

ನಗರಸಭೆ ಕಚೇರಿ ಕಟ್ಟಡದ ಶಾಸಕರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ ವ್ಯಾಪ್ತಿ ವಿಸ್ತರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚೆಸಿರುವುದು ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುತ್ತದೆ ಎಂದು ತಿಳಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಟಿ.ರವಿ ಅವರು ರಾಜೀನಾಮೆ ನೀಡಿದ್ದಾರೆ, ಆದರೆ ಇನ್ನೂ ಅಂಗೀಕಾರವಾಗಿಲ್ಲ. ಇಂದು ನಗರಸಭೆ ಸಾಮಾನ್ಯ ಸಭೆ ನಡೆದಿದೆ. ಈ ಸಭೆ ಬಳಿಕ ಅಂಗೀಕಾರವಾಗುವ ಸಾಧ್ಯತೆಯಿದೆ. ಆ ನಂತರ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಮಂಡ್ಯ ನಗರದ ಸಮಗ್ರ ಅಭಿವೃದ್ಧಿಗಾಗಿ ನಾನಾ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ₹25 ಕೋಟಿ ಅನುದಾನ ಬಿಡುಗಡೆಯಾಗಿದೆ. ಅನುದಾನ ಬಿಡುಗಡೆಗೆ ಸಹಕರಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನಗರದ ನೂರಡಿ ರಸ್ತೆಗೆ ಗಣ್ಯರ ಹೆಸರು ನಾಮಕರಣ ಮಾಡುವ ಸಂಬಂಧ ಉಂಟಾಗಿದ್ದ ವಿವಾದಕ್ಕೆ ಇಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ. ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ (ಕನ್ಯಕಾಪರಮೇಶ್ವರಿ ದೇವಾಲಯ ಬಳಿ) ಬಿ.ಆರ್.ಅಂಬೇಡ್ಕರ್ ಹೆಸರನ್ನು ಮತ್ತು ಅಂಬೇಡ್ಕರ್ ವೃತ್ತದಿಂದ ಬನ್ನೂರು ಮಾರ್ಗದಲ್ಲಿನ ಗೌರಿಶಂಕರ ಸಮುದಾಯ ಭವನದವರೆಗಿನ ರಸ್ತೆಗೆ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿದ್ದು, ಸರ್ಕಾರದ ಒಪ್ಪಿಗೆ ಪಡೆಯಲಾಗುವುದು ಎಂದರು.

ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಹಳೆಯ ರಸ್ತೆಯಲ್ಲಿನ ಜೆ.ಸಿ.ವೃತ್ತವನ್ನು ಪಾರಂಪರಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಅಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಕಾಮಗಾರಿಗಾಗಿ ₹2.5 ಕೋಟಿ ಹಾಗೂ ಬಿ.ಜಿ.ದಾಸೇಗೌಡ ವೃತ್ತದ (ಫ್ಯಾಕ್ಟರಿ ಸರ್ಕಲ್) ಅಭಿವೃದ್ಧಿಗೆ ₹1 ಕೋಟಿ ಮೀಸಲಿಡಲಾಗಿದೆ. ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗೌರಿಶಂಕರ ಸಮುದಾಯ ಭವನದವರೆಗೆ ಡೆಲ್ಟಾ ಯೋಜನೆಯಡಿ ₹6.50 ಕೋಟಿ ವೆಚ್ಚದಲ್ಲಿ ಸೈಕಲ್ ಪಾಥ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

₹60 ಕೋಟಿ ವೆಚ್ಚದಲ್ಲಿ ಅಮೃತ ಭವನ ನಿರ್ಮಿಸಲು ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕ್ರಮ ವಹಿಸಲಾಗಿದೆ. ಈ ಭವನದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಕಚೇರಿ ಸೌಲಭ್ಯ ದೊರಕಿಸಿಕೊಡಲಾಗುವುದು. ವಾಲಿಬಾಲ್ ಆಟದ ತಾಲೀಮು ಮತ್ತು ತರಬೇತಿಗಾಗಿ ಬಳಕೆಯಾಗುತ್ತಿದ್ದ ಒಳಕ್ರೀಡಾಂಗಣ ಪಕ್ಕದ ಜಾಗವನ್ನು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ನಿರ್ಮಿಸಲುದ್ದೇಶಿಸಿರುವ ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಗುರುತಿಸಿದೆ. ಆದರೆ, ಈ ಬಗ್ಗೆ ವಾಲಿಬಾಲ್ ಆಟಗಾರರು ಮತ್ತು ಮಂಡ್ಯ ಜಿಲ್ಲಾ ವಾಲಿಬಾಲ್ ಸಂಸ್ಥೆಯು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚಿಸಿ, ಬೇರೆ ಜಾಗ ಗುರುತಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಮುಡಾ ಅಧ್ಯಕ್ಷ ನಯೀಂ ಇದ್ದರು.

‘ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ’

ಸಚಿವ ಸಂಪುಟ ವಿಸ್ತರಣೆ ವೇಳೆ ಮಂಡ್ಯ ಜಿಲ್ಲೆಯ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ನಮ್ಮ ಬೇಡಿಕೆ ಹಾಗೂ ಒತ್ತಾಯ. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಸರಿಯಾಗಿದೆ. ಪ್ರತಾಪ್‌ಸಿಂಹ ಅವರ ಅರ್ಜಿ ವಜಾಗೊಳಿಸಿರುವ ನ್ಯಾಯಾಲಯದ ಕ್ರಮ ಸರ್ಕಾರಕ್ಕೆ ಸಿಕ್ಕ ಬೆಂಬಲ ಎಂದು ಶಾಸಕ ಪಿ.ರವಿಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.