ADVERTISEMENT

ಪುರಸಭೆ ಸದಸ್ಯರ ಪ್ರತಿಭಟನೆ

ಅನುದಾನ ಹಂಚಿಕೆಯಲ್ಲಿ ತಾರತಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 3:12 IST
Last Updated 9 ಆಗಸ್ಟ್ 2025, 3:12 IST
ಮಳವಳ್ಳಿ ಪಟ್ಟಣದ ಪುರಸಭೆ ಮುಂಭಾಗ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ತಾರತಯ್ಯ ಮಾಡಲಾಗಿದೆ ಎಂದು ಆರೋಪಿಸಿ ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಟಿ.ನಂದಕುಮಾರ್, ನಾಗೇಶ್, ಎನ್.ಬಸವರಾಜು, ಸಿದ್ದರಾಜು, ಎಂ.ಎನ್.ಕೃಷ್ಣ, ಎಂ.ಟಿ.ಪ್ರಶಾಂತ್, ರವಿ ಭಾಗವಹಿಸಿದ್ದರು
ಮಳವಳ್ಳಿ ಪಟ್ಟಣದ ಪುರಸಭೆ ಮುಂಭಾಗ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ತಾರತಯ್ಯ ಮಾಡಲಾಗಿದೆ ಎಂದು ಆರೋಪಿಸಿ ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಟಿ.ನಂದಕುಮಾರ್, ನಾಗೇಶ್, ಎನ್.ಬಸವರಾಜು, ಸಿದ್ದರಾಜು, ಎಂ.ಎನ್.ಕೃಷ್ಣ, ಎಂ.ಟಿ.ಪ್ರಶಾಂತ್, ರವಿ ಭಾಗವಹಿಸಿದ್ದರು   

ಮಳವಳ್ಳಿ: ಪುರಸಭೆಯ 15ನೇ ಹಣಕಾಸು ಯೋಜನೆಯಡಿಯ ಅನುದಾನ ಹಂಚಿಕೆಯಲ್ಲಿ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ತಾರತಯ್ಯ ಮಾಡಲಾಗಿದೆ ಎಂದು ಆರೋಪಿಸಿ ಪುರಸಭೆಯ ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪುರಸಭೆ ಆವರಣದಲ್ಲಿ ಧರಣಿ ಕುಳಿತಿರುವ ಸದಸ್ಯರು ಅನುದಾನ ಹಂಚಿಕೆಯಲ್ಲಿನ ತಾರತಯ್ಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸದಸ್ಯ ಟಿ.ನಂದಕುಮಾರ್ ಮಾತನಾಡಿ, ‘ಕಳೆದ ಮೂರು ತಿಂಗಳ ಹಿಂದೆ ನಡೆದ ವಿಶೇಷ ಸಭೆಯಲ್ಲಿ 15ನೇ ಹಣಕಾಸು ಯೋಜನೆಯಡಿಯ ₹2.15 ಕೋಟಿ ಅನುದಾನವನ್ನು 23 ವಾರ್ಡ್ ಗಳಿಗೆ ತಲಾ ₹3.5 ಲಕ್ಷದಂತೆ ಹಂಚಿಕೆ ಮಾಡಿ ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳ ಅನುಮೋಧನೆಗೆ ಕಳುಹಿಸಲಾಗಿತ್ತು. ಕೆಲ ಮಾರ್ಪಾಡು ಮಾಡುವಂತೆ ಕ್ರಿಯಾ ಯೋಜನೆ ವಾಪಾಸ್ ಬಂದಿದೆ. ಇದೀಗ ಅಧ್ಯಕ್ಷ ಪುಟ್ಟಸ್ವಾಮಿ ಯಾರದೋ ಒತ್ತಡಕ್ಕೆ ಮಣಿದು ಕೇವಲ 3 ವಾರ್ಡ್‌ಗಳಿಗೆ ಆ ಹಣವನ್ನು ಹಂಚಿಕೆ ಮಾಡಿ ನಮ್ಮ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

15ನೇ ಹಣಕಾಸು ಯೋಜನೆಯಡಿಯ ಅನುದಾನ ಕೇಂದ್ರ ಸರ್ಕಾರದಾಗಿದೆ. ಎಲ್ಲ ಸದಸ್ಯರನ್ನು ವಿಶ್ವಾಸ ಪಡೆದು ಚರ್ಚಿಸಿ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಿ ವಾರ್ಡ್ ಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕಾಮಗಾರಿ ನಿರ್ವಹಿಸಬೇಕಿತ್ತು. ಮರು ಪ್ರಸ್ತಾವನೆಯ ಬಗ್ಗೆ ಯಾರೂ ಗಮನಕ್ಕೂ ತರದೇ ಏಕಾಏಕಿ ಕಳೆದ ಮೂರು ದಿನಗಳ ಹಿಂದೆ ಅಧ್ಯಕ್ಷರ ವಾರ್ಡ್‌ಗೆ ₹30 ಲಕ್ಷ, 10ನೇ ವಾರ್ಡ್‌ಗೆ ₹23 ಲಕ್ಷ, ಐಟಿಐ ಕಾಲೇಜಿನ ಬಳಿಯ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ₹55 ಲಕ್ಷ ಹಂಚಿಕೆ ಮಾಡಿ ಅನುಮೋದನೆಗಾಗಿ ಕಳಿಸಿ, ಉಳಿದ ಸದಸ್ಯರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪಿಸಿದರು.

ಉಪಾಧ್ಯಕ್ಷ ಎನ್.ಬಸವರಾಜು ಮಾತನಾಡಿ, ಅಧ್ಯಕ್ಷರಿಗೆ ಅಧಿಕಾರ ನಡೆಸಲು ಬರುವುದಿಲ್ಲ ಅವರ ವಿರುದ್ಧ ಅವಿಶ್ವಾಸ ನಿರ್ಣಯ ತರಲು ಮುಂದಾಗಿದ್ದೇವೆ. ಹೀಗಾಗಿ ನಮ್ಮ ಗಮನಕ್ಕೂ ತರದೇ ₹2.08 ಕೋಟಿ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಿ ಸದಸ್ಯರ ಹಕ್ಕು ಕಿತ್ತುಗೊಂಡಿದ್ದಾರೆ. ಹೀಗಾಗಿ ಹೊಸ ಪ್ರಸ್ತಾವನೆಯನ್ನು ರದ್ದು ಮಾಡಿ ಹಳೆಯ ಪ್ರಸ್ತಾವನೆಯನ್ನೇ ಅನುಮೋದನೆ ಮಾಡಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ಧರಣಿ ಮುಂದುವರೆಸುತ್ತೇವೆ’ ಎಂದು ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ, ಸದಸ್ಯರಾದ ಎಂ.ಟಿ.ಪ್ರಶಾಂತ್, ಸಿದ್ದರಾಜು, ರವಿ, ನಾಗೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.