ಮಂಡ್ಯ: ಇಸ್ರೇಲ್‌ನ ಒರೆಲ್ ಕಿಮ್ಹಿ ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ ಮಂಡ್ಯ ಓಪನ್ ಐಟಿಎಫ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕದ ಒರೆಲ್ ಕಿಮ್ಹಿ ನೆದರ್ಲೆಂಡ್ಸ್‌ನ ಜೆಲ್ಲೆ ಸೆಲ್ಸ್ ಅವರನ್ನು 6–2, 6–4 ನೇರ ಸೆಟ್‌ಗಳಿಂದ ಪರಾಭವಗೊಳಿಸಿ ತಮ್ಮ 3ನೇ ಐಟಿಎಫ್ ಪ್ರಶಸ್ತಿ ಬಾಚಿಕೊಂಡರು. ಬಹುಮಾನದ ರೂಪವಾಗಿ ₹ 2.98 ಲಕ್ಷ ಮೊತ್ತದ ಚೆಕ್ ಜೊತೆಗೆ 25 ಎಟಿಪಿ ಪಾಯಿಂಟ್‌ಗಳನ್ನು ಕಿಮ್ಹಿ ಗಳಿಸಿಕೊಂಡರು.
ರನ್ನರ್ ಅಪ್ ಆದ ಜೆಲ್ಲೆ ಸೆಲ್ಸ್ ₹ 1.75 ಲಕ್ಷ ಬಹುಮಾನ ಪಡೆದರು. ಜೊತೆಗೆ 16 ಎಟಿಪಿ ಪಾಯಿಂಟ್ ಗಳಿಸಿದರು.
ಪ್ರಬಲ ಪೈಪೋಟಿ: 2 ಗಂಟೆ 2 ನಿಮಿಷ ನಡೆದ ಹೋರಾಟದಲ್ಲಿ ಸೆಲ್ಸ್ ಆಕ್ರಮಣಕಾರಿ ಆಟದ ಮೂಲಕ ಗೆಲುವಿಗೆ ಪ್ರಯತ್ನಿಸಿದರೆ, ಕಿಮ್ಹಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಲೇ ಟ್ರೋಫಿಗೆ ಮುತ್ತಿಟ್ಟರು. ಮೊದಲ ಸೆಟ್‌ನ ಮೊದಲಿನ ನಾಲ್ಕೂ ಗೇಮ್‌ಗಳಲ್ಲಿ ಆಟಗಾರರಿಬ್ಬರೂ ತಮ್ಮ ಸರ್ವಿಸ್‌ಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. 5ನೇ ಗೇಮ್‌ನಲ್ಲಿ ಕಿಮ್ಹಿ ನೆದರ್ಲೆಂಡ್ಸ್ ಆಟಗಾರನ ಸರ್ವಿಸ್ ಮುರಿದರು. 7ನೇ ಆಟದಲ್ಲಿ ಮತ್ತೆ ಎದುರಾಳಿಯ ಸರ್ವಿಸ್ ಬ್ರೇಕ್ ಮಾಡಿದರು.
2ನೇ ಸೆಟ್‌ನಲ್ಲಿ ಇಬ್ಬರ ನಡುವೆ ಪ್ರಬಲ ಪೈಪೋಟಿ ಕಂಡುಬಂದಿತು. ಒಂದು ಹಂತದಲ್ಲಿ ಸೆಲ್ಸ್ 3–1ರ ಮುನ್ನಡೆ ಸಾಧಿಸಿದ್ದು, ನಂತರದ ಗೇಮ್‌ನಲ್ಲಿ ಸರ್ವಿಸ್ ಉಳಿಸಿಕೊಳ್ಳುವಲ್ಲಿ ವಿಫಲರಾದರು.
2ನೇ ಸೆಟ್ 4–4ರಲ್ಲಿ ಸಮಸ್ಥಿತಿಯಲ್ಲಿದ್ದಾಗ 9ನೇ ಗೇಮ್‌ನಲ್ಲಿ 3 ‘ಗೇಮ್ ಪಾಯಿಂಟ್’ ಉಳಿಸಿಕೊಂಡು ಕಿಮ್ಹಿ 5–4ರಿಂದ ಮುನ್ನಡೆ ಸಾಧಿಸಿದರು. ನಂತರ ಸರ್ವೀಸ್ ಉಳಿಸಿಕೊಂಡು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.