ADVERTISEMENT

ಪೌರಕಾರ್ಮಿಕರಿಂದ ಕಚೇರಿ ಕೆಲಸ: ಎಚ್ಚರಿಕೆ

ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಹಿರೇಮಣಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 14:08 IST
Last Updated 8 ಜನವರಿ 2020, 14:08 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೌರಕಾರ್ಮಿಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್‌ ಹಿರೇಮಣಿ ಮಾತನಾಡಿದರು
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೌರಕಾರ್ಮಿಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್‌ ಹಿರೇಮಣಿ ಮಾತನಾಡಿದರು   

ಮಂಡ್ಯ: ಪೌರಕಾರ್ಮಿಕರಾಗಿ ನೇಮಕಗೊಂಡವರು ಸ್ವಚ್ಛತಾ ಕೆಲಸ ಮಾಡದೇ ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ಅನ್ಯ ಕಾರ್ಯ ಮಾಡುತ್ತಿರುವುದು ಕಂಡು ಬಂದಿದೆ. ಇಂತಹ ಕಾರ್ಮಿಕರನ್ನು ಕೂಡಲೇ ಕಿತ್ತು ಹಾಕಬೇಕು. ಇಲ್ಲದಿದ್ದರೆ ಇದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್‌ ಹಿರೇಮಣಿ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಮಿಕ ಮುಖಂಡ ನಂಜುಂಡ ಮೌರ್ಯ ವಿಷಯ ಪ್ರಸ್ತಾಪಿಸಿ, ಪಾಂಡವಪುರ ಹಾಗೂ ಮದ್ದೂರಿನಲ್ಲಿ ಹಲವರು ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದಾರೆ. ಕೆಲಸದ ಅನಿವಾರ್ಯತೆಗಾಗಿ ಅವರು ಪೌರಕಾರ್ಮಿಕರಾಗಿದ್ದು ಅವರು ಸ್ವಚ್ಛತಾ ಕೆಲಸ ಮಾಡುತ್ತಿಲ್ಲ. ಮೇಲ್ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ಅಧಿಕಾರಿಗಳು ಅವರಿಂದ ಸ್ವಚ್ಛತಾ ಕೆಲಸ ಮಾಡಿಸುತ್ತಿಲ್ಲ. ಇದರಿಂದ ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಚ್ಛತೆ ಮಾಡದ ಕಾರ್ಮಿಕರನ್ನು ಕೂಡಲೇ ಕೆಲಸದಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್‌ ಹರೇಮಣಿ, ಕಳೆದ ಸಭೆಯಲ್ಲೂ ಈ ದೂರು ಕೇಳಿ ಬಂದಿತ್ತು. ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೂಡಲೇ ತಪ್ಪಿಸ್ಥರನ್ನು ಕೆಲಸದಿಂದ ವಜಾ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅನ್ಯ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಕಿತ್ತುಹಾಕಲಾಗುವುದು. ಈ ಸಂಬಂಧ ಗುರುವಾರ ವರದಿ ನೀಡಲಾಗುವುದು ಎಂದು ಪಾಂಡವಪುರ ಪುರಸಭಾಧಿಕಾರಿ ಹೇಳಿದರು.

‘ಪೌರಕಾರ್ಮಿಕರಿಂದ ಅನ್ಯ ಕೆಲಸ ಮಾಡಿಸುತ್ತಿರುವ ಬಗ್ಗೆ ಜಿಲ್ಲಾ ಕಣ್ಗಾವಲು ಸಮಿತಿ ಯಾವುದೇ ಕ್ರಮ ಕೈಗೊಂಡಿಲ್ಲ. ಆಯೋಗದ ಗಮನಕ್ಕೂ ತಂದಿಲ್ಲ’ ಎಂದು ಕಣ್ಗಾವಲು ಸಮಿತಿ ಸದಸ್ಯ ಎಂ.ಬಿ.ಶ್ರೀನಿವಾಸ್‌ ಅವರನ್ನು ಜಗದೀಶ್‌ ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳ ವಿರುದ್ಧ ಆಕ್ರೋಶ: ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ನಿವಾರಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವಿಧ ಸಂಘಟನೆಗಳ ಮುಖಂಡರು ಪ್ರಶ್ನೆ ಮಾಡಿದರು. ಅಧಿಕಾರಿಗಳು ಅನುಪಾಲನ ವರದಿ ತಂದಿರಲಿಲ್ಲ. ಈ ಸಂಬಂಧ ಅಧಿಕಾರಿಗಳನ್ನು ಜಗದೀಶ್‌ ತೀವ್ರ ತರಾಟೆಗೆ ತೆಗೆದುಕೊಂಡರು.

ಅರುಂಧತಿಯಾರ್ ಮೀಸಲಾತಿ ಸಫಾಯಿ ಕರ್ಮಚಾರಿ ಸಂಘದ ಆರ್.ಕೃಷ್ಣ, ನಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರ ಬಗ್ಗೆ ಮಾಹಿತಿ ಇಲ್ಲ. ಪೌರಕಾರ್ಮಿಕರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ ಸಮಸ್ಯೆಗಳ ಪರಿಹಾರವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ ‘ಪೌರಕಾರ್ಮಿಕರ ಸಮಸ್ಯೆಗೆ ಜಿಲ್ಲಾಡಳಿತ ಸದಾ ಸ್ಪಂದಿಸುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅನುಪಾಲನ ವರದಿ ತಯಾರಿಸಿದ್ಧಾರೆ. ಪ್ರತಿ ಇಲಾಖೆಯ ಸಭೆಯಲ್ಲಿ ಸಮಸ್ಯೆ ಚರ್ಚೆ ನಡೆಸಿ, ಪರಿಹರಿಸಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಕಣ್ಗಾವಲು ಸಮಿತಿ ಸದಸ್ಯ ಎಂ.ಬಿ.ಶ್ರೀನಿವಾಸ್‌ ಮಾತನಾಡಿ, ಪೌರಕಾರ್ಮಿಕರಿಗೆ ನಿತ್ಯ ಬೆಳಿಗ್ಗೆ ನಗರದಲ್ಲಿ ಶುಚಿ ಕಾರ್ಯ ಮಾಡಬೇಕಿರುವುದರಿಂದ ಇಲ್ಲಿಯೇ ನಿವೇಶನ ಅಥವಾ ಮನೆ ನಿರ್ಮಾಣ ಮಾಡಿಕೊಡಬೇಕು. ನಗರದಲ್ಲಿ ಸರ್ಕಾರಿ ಜಾಗ ಸಾಕಷ್ಟು ಇದ್ದರೂ, ಬಲಾಢ್ಯರು ಆಕ್ರಮಿಸಿಕೊಂಡಿದ್ದಾರೆ. ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಿ ಪೌರಕಾರ್ಮಿಕರಿಗೆ ಅನುಕೂಲ ಮಾಡಬೇಕು ಎಂದು ಹೇಳಿದರು.

ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ, ಪೌರಾಯುಕ್ತ ಲೋಕೇಶ್‌, ನಗರಾಭಿವೃದ್ಧಿ ಕೋಶದ ನರಸಿಂಹಮೂರ್ತಿ, ಮುಖಂಡರಾದ ಚಂದ್ರಶೇಖರ್‌, ತುಳಸೀಧರ್‌ ಇದ್ದರು.

ಅಧಿಕಾರಿಗಳ ಭಯಕ್ಕೆ ಪೌರ ಕಾರ್ಮಿಕರ ಮೌನ

ಪೌರಕಾರ್ಮಿಕರಿಗೆ ಕೆಲಸ ಭದ್ರತೆ, ನಿವೇಶನ, ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಇಂದಿರಾ ಕ್ಯಾಂಟೀನ್‌ ನಿಂದ ಕಳಪೆ ಊಟ ಮುಂತಾದ ವಿಚಾರಗಳು ಚರ್ಚೆಗೆ ಬಂದವು.

ದೂರುಗಳಿದ್ದರೆ ತಿಳಿಸಿ ಎಂದು ಜಗದೀಶ್‌ ಪೌರಕಾರ್ಮಿಕರನ್ನು ಕೋರಿದರು. ಆದರೆ ಅವರು ಏನೂ ಮಾತನಾಡದೇ ಮೌನಕ್ಕೆ ಶರಣಾದರು. ‘ಸಮಸ್ಯೆಗಳಿರುವುದು ನನಗೆ ಗೊತ್ತಿದೆ. ಈ ಬಗ್ಗೆ ಮುಖಂಡರು ತಿಳಿಸಿದ್ದಾರೆ. ಅಧಿಕಾರಿಗಳ ಭಯಕ್ಕೆ ಪೌರಕಾರ್ಮಿಕರು ಏನೂ ಮಾತನಾಡುತ್ತಿಲ್ಲ. ಕಣ್ಗಾವಲು ಸಮಿತಿಯೊಂದಿಗೆ ಚರ್ಚಿಸಿ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಜಗದೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.