
ಮಂಡ್ಯ: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಕನಿಷ್ಠ 40 ಅಂಕ ಗಳಿಸಿ ತೇರ್ಗಡೆಯಾಗಲಿ ಎಂಬ ಆಶಯದೊಂದಿಗೆ ಮಂಡ್ಯ ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ‘ಮಿಷನ್ ಫಾರ್ಟಿ ಪ್ಲಸ್ ಇನ್ ನೈಂಟಿ ಡೇಸ್’ ಕಾರ್ಯಕ್ರಮದಡಿ ‘ಕಲಿಕಾ ಮಿತ್ರ’ ಎಂಬ ಪ್ರಶ್ನೋತ್ತರಗಳ ಪುಸ್ತಕವನ್ನು ಸಿದ್ಧಪಡಿಸಲಾಗಿದೆ.
ಆರು ವಿಷಯಗಳಿಗೆ ಸಂಬಂಧಿಸಿದ ಬಹು ನಿರೀಕ್ಷಿತ ಪ್ರಶ್ನೋತ್ತರಗಳನ್ನು ಒಳಗೊಂಡ 172 ಪುಟಗಳ ‘ಕಲಿಕಾ ಮಿತ್ರ’ ಪುಸ್ತಕ ಮತ್ತು ವಿಷಯವಾರು 200 ಪುಟಗಳ 6 ನೋಟ್‌ಬುಕ್‌ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಸಿದ್ಧತೆ ನಡೆದಿದೆ.
ಮಂಡ್ಯ ಜಿಲ್ಲೆಯ 215 ಸರ್ಕಾರಿ ಮತ್ತು 90 ಅನುದಾನಿತ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ 4,175 ವಿದ್ಯಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 425 ವಿದ್ಯಾರ್ಥಿಗಳು ಮತ್ತು ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ 263 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 4,853 ಮಕ್ಕಳಿಗೆ ‘ಪಾಸಿಂಗ್ ಪ್ಯಾಕೇಜ್’ ಸಂಪನ್ಮೂಲ ಮತ್ತು ನೋಟ್‌ಬುಕ್‌ಗಳನ್ನು ವಿತರಿಸುತ್ತೇವೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
‘ಕಲಿಕಾ ಮಿತ್ರ’ ಪುಸ್ತಕ ಮತ್ತು ನೋಟ್‌ಬುಕ್‌ಗಳನ್ನು ಉಚಿತವಾಗಿ ವಿತರಿಸಲು ಸುಮಾರು ₹15 ಲಕ್ಷ ವೆಚ್ಚವಾಗಲಿದೆ. ಈ ಅನುದಾನವನ್ನು ರಾಜ್ಯ ಮಾಲಿನ್ಯ ಮಂಡಳಿ ಅಧ್ಯಕ್ಷ, ಮಳವಳ್ಳಿಯ ಶಾಸಕರೂ ಆದ ಪಿ.ಎಂ. ನರೇಂದ್ರಸ್ವಾಮಿ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಶಾಲಾ ಮಟ್ಟದಲ್ಲಿ ಈಚೆಗೆ ನಡೆದ ‘ಅಭ್ಯಾಸ ಪರೀಕ್ಷೆ’ಯಲ್ಲಿ ಸರ್ಕಾರಿ ಶಾಲೆಯ 2,927 ವಿದ್ಯಾರ್ಥಿಗಳು ಮತ್ತು ಅನುದಾನಿತ ಶಾಲೆಗಳ 1,248 ವಿದ್ಯಾರ್ಥಿಗಳು 250 ಅಂಕಗಳಿಗೆ 125ಕ್ಕಿಂತ (ಶೇ 50ಕ್ಕಿಂತ) ಕಡಿಮೆ ಅಂಕ ಪಡೆದಿದ್ದರು. ಕನ್ನಡ ಭಾಷಾ ಪರೀಕ್ಷೆಯಲ್ಲಿ 2164 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಇವರಲ್ಲಿ ಆತ್ಮವಿಶ್ವಾಸ ತುಂಬಲು ‘ಕಲಿಕಾ ಮಿತ್ರ’ ನೆರವಾಗಲಿದೆ ಎನ್ನುತ್ತಾರೆ ಶಿಕ್ಷಕರು.
2024–25ನೇ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ 22 ಸರ್ಕಾರಿ, 22 ಅನುದಾನಿತ, 9 ಅನುದಾನ ರಹಿತ ಸೇರಿದಂತೆ ಒಟ್ಟು 53 ಶಾಲೆಗಳು ಶೇ 40ಕ್ಕಿಂತ ಕಡಿಮೆ ಫಲಿತಾಂಶ ಪಡೆದಿದ್ದವು. ಮದ್ದೂರು ತಾಲ್ಲೂಕಿನಲ್ಲಿ 14 ಶಾಲೆ ಮತ್ತು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 10 ಶಾಲೆಗಳು ನೀರಸ ಫಲಿತಾಂಶ ಗಳಿಸಿದ್ದವು.
‘ಮಿಷನ್ 40+ ಪಾಸಿಂಗ್ ಪ್ಯಾಕೇಜ್’ ಕಾರ್ಯಕ್ರಮದಡಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಂಡಿದ್ದು 56 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ– ಕೆ.ಆರ್.ನಂದಿನಿ ಸಿಇಒ ಮಂಡ್ಯ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.