ADVERTISEMENT

ಮಂಡ್ಯ: ನಿಯಂತ್ರಣಕ್ಕೆ ಬಂದ ನಾಟಿ ಬೆಳ್ಳುಳ್ಳಿ ಬೆಲೆ- ಈರುಳ್ಳಿ ಬೆಲೆಯೂ ಇಳಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 15:46 IST
Last Updated 13 ಮಾರ್ಚ್ 2024, 15:46 IST
ಮಂಡ್ಯದ ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮಾರಾಟವಾಗುತ್ತಿರುವುದು
ಮಂಡ್ಯದ ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮಾರಾಟವಾಗುತ್ತಿರುವುದು   

ಮಂಡ್ಯ: ಕಳೆದೆರಡು ತಿಂಗಳುಗಳಿಂದ ₹ 500ರ ಗಡಿ ದಾಟಿದ್ದ ಕೆ.ಜಿ ನಾಟಿ ಬೆಳ್ಳುಳ್ಳಿ ದರ ಈಗ ನಿಯಂತ್ರಣಕ್ಕೆ ಬಂದಿದೆ. ಸದ್ಯ ₹ 200ಕ್ಕೆ ಮಾರಾಟವಾಗುತ್ತಿದ್ದು ಗ್ರಾಹಕರು ನಿರಾಳರಾಗಿದ್ದಾರೆ.

ಎಂದೂ ಕೇಳರಿಯದ ಬೆಲೆಗೆ ನಾಟಿ ಬೆಳ್ಳುಳ್ಳಿ ಮಾರಾಟವಾಗುತ್ತಿತ್ತು. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ತೀವ್ರ ಕೊರತೆ ಎದುರಿಸುತ್ತಿದ್ದ ಕಾರಣ ಬೆಲೆ ಗಗನಮುಖಿಯಾಗಿ ಚಲಿಸುತ್ತಿತ್ತು. ಕೆಲವೆಡೆ ₹ 600ರವರೆಗೂ ಮಾರಾಟವಾಗುತ್ತಿತ್ತು. ಸದ್ಯ ನಿಯಂತ್ರಣಕ್ಕೆ ಬಂದಿದ್ದು ಫಾರಂ ಬೆಳ್ಳುಳ್ಳಿ ₹100 – ₹120ಕ್ಕೆ ಮಾರಾಟವಾಗುತ್ತಿದೆ.

ಕಳೆದೊಂದು ತಿಂಗಳಿಂದ ಈರುಳ್ಳಿ ಬೆಲೆಯೂ ಕಡಿಮೆಯಾಗುತ್ತಿದೆ. ₹ 100ಕ್ಕೆ ಉತ್ತಮ ಗುಣಮಟ್ಟದ 4 ಕೆ.ಜಿ ಈರುಳ್ಳಿ ದೊರೆಯುತ್ತಿದೆ. ರಾಜ್‌ ಈರುಳ್ಳಿ ಕೆ.ಜಿಗೆ ₹ 25 ಬೆಲೆ ಇದೆ. ಈರುಳ್ಳಿ, ಬೆಳ್ಳುಳ್ಳಿ ಎರಡೂ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದು ಗ್ರಾಹಕರಿಗೆ ನೆಮ್ಮದಿ ತರಿಸಿದೆ. ಬೆಲೆ ಏರಿಕೆ ಕಾರಣಕ್ಕೆ ಜನರು ಬೆಳ್ಳುಳ್ಳಿ ಬಳಕೆಯನ್ನೇ ನಿಲ್ಲಿಸಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು ಬೆಳ್ಳುಳ್ಳಿ ಬಳಸುವಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ADVERTISEMENT

ತರಕಾರಿಗಳಲ್ಲಿ ಟೊಮೆಟೊ ಅಗ್ಗದ ಬೆಲೆಗೆ ಮಾರಾಟವಾಗುತ್ತಿದ್ದು ₹ 10– 20 ಇದೆ. ಬೇಸಿಗೆ ಕಾರಣಕ್ಕೆ ಈಗ ಎಲ್ಲೆಡೆ ನುಗ್ಗೇಕಾಯಿ ಬೆಳೆ ಬಂದಿದ್ದು ಬೆಲೆ ಕಡಿಮೆಯಾಗಿದೆ. ಪ್ರತಿ ಕೆ.ಜಿ ₹ 50– 60ಕ್ಕೆ ಉತ್ತಮ ಗುಣಮಟ್ಟದ ನುಗ್ಗೇಕಾಯಿ ಮಾರಾಟವಾಗುತ್ತಿದೆ. ಬೇಸಿಗೆಯ ಅಂಗವಾಗಿ ಸೌತೆಕಾಯಿ ಹಾಗೂ ನಿಂಬೆಹಣ್ಣಿನ ಬೆಲೆ ದುಬಾರಿ ಕಂಡಿದೆ.

ಎಲೆಕೋಸು, ಬೂದುಗುಂಬಳ, ಬೆಂಡೆಕಾಯಿ, ಸಿಹಿಗುಂಬಳ ₹20, ಆಲೂಗೆಡ್ಡೆ, ಸಿಹಿಗೆಣಸು, ಮರಗೆಣಸು, ಬೀಟ್‌ರೂಟ್‌, ಮೂಲಂಗಿ, ಹೂಕೋಸು, ಹಾಗಲಕಾಯಿ ₹ 40, ಸೀಮೆಬದನೆಕಾಯಿ, ಕ್ಯಾರೆಟ್‌, ಬದನೆಕಾಯಿ, ಪಡವಲಕಾಯಿ, ಸೋರೆಕಾಯಿ, ಗೆಡ್ಡೆಕೋಸು, ದಪ್ಪಮೆಣಸಿನಕಾಯಿ, ಗೋರಿಕಾಯಿ, ಸುವರ್ಣಗೆಡ್ಡೆ, ತಗಣಿಕಾಯಿ, ಅವರೆಕಾಯಿ, ಹಸಿರುಮೆಣಸಿನಕಾಯಿ, ಬಜ್ಜಿಮೆಣಸಿನಕಾಯಿ ₹ 50ಕ್ಕೆ ಮಾರಾಟವಾಗುತ್ತಿವೆ. ಹಸಿ ಬಟಾಣಿ ₹ 100ರಂತೆ ಮಾರಾಟವಾಗುತ್ತಿದೆ.

ಸೊಪ್ಪುಗಳಲ್ಲಿ ನಾಟಿ ಕೊತ್ತಂಬರಿ ಬೆಲೆ ಏರಿಕೆಯಾಗಿದ್ದು ಪ್ರತಿ ಕಟ್ಟು ₹ 30ಕ್ಕೆ ಮಾರಾಟವಾಗುತ್ತಿದೆ. ಫಾರಂ ಕೊತ್ತಂಬರಿ ₹20 ಇದೆ. ಕೀರೆ , ಕಿಲ್‌ಕೀರೆ , ದಂಟು , ಕರಿಬೇವು, ಪುದಿನಾ ₹10, ಮೆಂತೆ ₹30, ಚಿಕ್ಕಿಸೊಪ್ಪು ₹20ರಂತೆ ಮಾರಾಟವಾಗುತ್ತಿವೆ.

ಹೂವುಗಳಲ್ಲಿ ಗಣಗಲೆ, ಕನಕಾಂಬರ, ಮಲ್ಲಿಗೆ, ಕಾಕಡ ಬೆಲೆ ಹೆಚ್ಚಳವಾಗಿದೆ. ಇನ್ನುಳಿದಂತೆ ಕೆ.ಜಿ ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ₹40, ಸೇವಂತಿಗೆ, ಬಿಳಿ ಸೇವಂತಿ, ಬಟನ್ಸ್‌ ₹40 ರಿಂದ ₹50, ಸಣ್ಣಗುಲಾಬಿ, ಕಲ್ಕತ್ತಾ ಮಲ್ಲಿಗೆ, ಸುಗಂಧರಾಜ, ಗಣಗಲೆ ₹100, ಕಾಕಡ ₹400, ಕನಕಾಂಬರ ₹1000, ಮಲ್ಲಿಗೆ ₹1,200ರಂತೆ ಮಾರಾಟವಾಗುತ್ತಿವೆ.

ಮಾರು ತುಳಸಿ ₹40, ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ, ಸೇವಂತಿಗೆ ₹40, ಗಣಗಲೆ, ಬಿಳಿಸೇವಂತಿಗೆ, ಬಟನ್ಸ್‌ ₹50, ಕಾಕಡ, ಮರಳೆ ₹60, ಕನಕಾಂಬರ, ಮಲ್ಲಿಗೆ ₹80ರಂತೆ ಮಾರಾಟವಾಗುತ್ತಿವೆ.

ಹಣ್ಣುಗಳಲ್ಲಿ ಬೀಜರಹಿತ ಕೋಲಾರ, ಚಿಕ್ಕಬಳ್ಳಾಪುರ ಭಾಗದ ದ್ರಾಕ್ಷಿ ಬೆಲೆ ಕಡಿಮೆ ಇದ್ದು ಕೆ.ಜಿ ₹ 60ರಂತೆ ಮಾರಾಟವಾಗುತ್ತಿದೆ. ಪಪ್ಪಾಯ ₹25, ಕಲ್ಲಂಗಡಿ ₹30, ಪಚ್ಚಬಾಳೆ, ಕರಬೂಜ ₹50, ಏಲಕ್ಕಿ ಬಾಳೆಹಣ್ಣು ₹ 50, ಸೀಬೆ, ಕಿತ್ತಳೆ ₹60, ಮೂಸಂಬಿ ₹80, ಕಂದ್ರಾಕ್ಷಿ ₹80, ಕಪ್ಪು ದ್ರಾಕ್ಷಿ, ಕಿವಿಹಣ್ಣು(ಬಾಕ್ಸ್‌)₹120, ದಾಳಿಂಬೆ ₹160 – ₹180, ಡೆಲ್ಲಿ ಸೇಬು ₹200, ಶಿಮ್ಲಾ ಸೇಬು, ದಾಳಿಂಬೆ, ಡ್ರ್ಯಾಗನ್‌ ಫ್ರೂಟ್ ₹210, ಶರತ್‌ ದ್ರಾಕ್ಷಿ ₹220ರಂತೆ ಪ್ರತಿ ಕೆ.ಜಿ ಮಾರಾಟವಾಗುತ್ತಿವೆ.

Highlights - ನಾಟಿ ಕೊತ್ತಂಬರಿ, ಮೆಂತೆ ಸೊಪ್ಪು ಬೆಲೆ ಏರಿಕೆ ಬೇಸಿಗೆ ಪರಿಣಾಮದಿಂದ ಬೆಲೆಗಳಲ್ಲಿ ಬದಲಾವಣೆ ಸೇಬು ಹಣ್ಣು ದುಬಾರಿ, ಹಸಿರು ದ್ರಾಕ್ಷಿ ಅಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.