ADVERTISEMENT

ತ್ರಿವೇಣಿ ಸಂಗಮದಲ್ಲಿ ಕುಂಭಮೇಳ, 16ಕ್ಕೆ ಪುಣ್ಯ ಸ್ನಾನ

ತ್ರಿವೇಣಿ ಸಂಗಮದಲ್ಲಿ ವೈಭವದ ಕಾರ್ಯಕ್ರಮ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಗಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 12:45 IST
Last Updated 12 ಅಕ್ಟೋಬರ್ 2022, 12:45 IST

ಮಂಡ್ಯ: ಕೆ.ಆರ್‌.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಅ.13ರಿಂದ 4 ದಿನಗಳ ಕಾಲ ವೈಭವಯುತವಾಗಿ ಕುಂಭಮೇಳ ನಡೆಯಲಿದೆ. ಕಡೆಯ ದಿನ (ಅ.16) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿ ಸಾವಿರಾರು ಜನರು ಪುಣ್ಯಸ್ನಾನ ಮಾಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕ್ರೀಡಾ ಇಲಾಖೆಯಿಂದ ಕುಂಭಮೇಳ ಆಯೋಜಿಸಲಾಗಿದೆ. ಕಾವೇರಿ– ಹೇಮಾವತಿ– ಲಕ್ಷ್ಮಣತೀರ್ಥ ನದಿಗಳು ಕೂಡುವ ಜಾಗವನ್ನು ಪವಿತ್ರ ಎಂದೇ ಪರಿಗಣಿಸಲಾಗಿದೆ. 2015ರಲ್ಲಿ ಮೊದಲ ಕುಂಭಮೇಳ ನಡೆದಿತ್ತು, ಇದು 2ನೇ ಕುಂಭಮೇಳವಾಗಿದೆ.

ಅ.13ರಂದು ಕುಂಭಮೇಳ ಜ್ಯೋತಿ ರಥಗಳು ಸಂಗಮಿಸಲಿದ್ದು ಅದ್ಧೂರಿ ಮೆರವಣಿಗೆಯ ಮೂಲಕ ಜ್ಯೋತಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಅ.14ರಂದು ಕುಂಭಮೇಳವನ್ನು ವಿಧ್ಯುಕ್ತವಾಗಿ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಅ.15ರಂದು ಧಾರ್ಮಿಕ ಸಭೆ ನಡೆಯಲಿದ್ದು ರಾಜ್ಯದ ವಿವಿಧೆಡೆಯಿಂದ ಬರುವ 50ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

ADVERTISEMENT

ಅ.16ರಂದು ಪುಣ್ಯಸ್ನಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ ಪಾಲ್ಗೊಳ್ಳುವರು.

ನದಿತೀರದಲ್ಲಿ ವಿಶೇಷವಾಗಿ ಸ್ನಾನಘಟ್ಟ ನಿರ್ಮಿಸಲಾಗಿದ್ದು ಏಕಕಾಲದಲ್ಲಿ ಸಾವಿರಾರು ಜನರು ಪುಣ್ಯಸ್ನಾನ ಮಾಡಬಹುದು. ದೇಶದ ವಿವಿಧೆಡೆಯಿಂದ ಬರುವ ಸಾಧುಗಳು ಉಳಿದುಕೊಳ್ಳಲು ಡೇರೆಗಳನ್ನು ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.