ADVERTISEMENT

ಜಲಮಂಡಳಿಗೆ ‘ನೀರು’ ಕುಡಿಸುವವರು ಯಾರು?

ಗಗನಕ್ಕೇರುತ್ತಿದೆ ನೀರಿನ ಬಾಕಿ, ಸಮಸ್ಯೆ ಬಗೆಹರಿಸಲು ಮುಂದಾಗದ ನಗರಸಭೆ, ಸಾಮಾನ್ಯರಿಗೆ ಸಂಕಷ್ಟ

ಎಂ.ಎನ್.ಯೋಗೇಶ್‌
Published 12 ಆಗಸ್ಟ್ 2021, 13:25 IST
Last Updated 12 ಆಗಸ್ಟ್ 2021, 13:25 IST

ಮಂಡ್ಯ: ಜಲಮಂಡಳಿ ಹಾಗೂ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ 3 ವರ್ಷಗಳಿಂದ ಕುಡಿಯುವ ನೀರಿನ ‘ದರ ಸಮರ’ ಬಗೆಹರಿದಿಲ್ಲ. ಗಗನಕ್ಕೇರುತ್ತಿರುವ ನೀರಿನ ಬಿಲ್‌ ನೋಡಿ ಕಂಗಾಲಾಗಿರುವ ಜನರು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

2018ರಲ್ಲಿ ಜಲಮಂಡಳಿ ತಿಂಗಳ ನೀರಿನ ದರವನ್ನು ₹ 180ರಿಂದ ₹ 282 ಹೆಚ್ಚಳ ಮಾಡಿತು. ಏಕಾಏಕಿ ₹ 102 ಹೆಚ್ಚಳ ಮಾಡಿದ್ದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು, ಜಲಮಂಡಳಿ ಎದುರು ಉಪವಾಸ ಸತ್ಯಾಗ್ರಹ ಮಾಡಿದರು. ಆಗಿನ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸಂಸದೆ ಸುಮಲತಾ ಅವರ ಅಧ್ಯಕ್ಷತೆಯಲ್ಲಿ ಸಂಧಾನ ಸಭೆ ನಡೆಸಿ ನೀರಿನ ದರವನ್ನು ₹ 200ಕ್ಕೆ ನಿಗದಿಗೊಳಿಸುವುದಾಗಿ ಭರವಸೆ ನೀಡಿದ್ದರು, ನಂತರ ಹೋರಾಟ ಸ್ಥಗಿತಗೊಳಿಸಲಾಗಿತ್ತು.

ಆದರೆ, ಜಿಲ್ಲಾಧಿಕಾರಿ ನೀಡಿದ ಭರವಸೆ ಬಾಯಿಮಾತಿನ ಹೇಳಿಕೆಯಷ್ಟೇ ಆಗಿತ್ತು. ಜಲಮಂಡಳಿ ಎಂದಿನಂತೆ ಪ್ರತಿ ತಿಂಗಳು ₹ 280 ಹೊಸ ದರ ವಿಧಿಸುವುದನ್ನು ಮುಂದುವರಿಸಿತು. ಪ್ರತಿ ತಿಂಗಳ ನೀರಿನ ಬಾಕಿ ಹೆಚ್ಚುತ್ತಲೇ ಇದ್ದ ಕಾರಣ ಕೆಲವರು ಬಿಲ್‌ ಪಾವತಿಯನ್ನೇ ಸ್ಥಗಿತಗೊಳಿಸಿದರು, ಬಿಲ್‌ ಹರಿದು ಹಾಕಿ ಪ್ರತಿಭಟನೆ ನಡೆಸಿದರು. ಆಗ ನಗರಸಭೆ ಆಡಳಿತ ಆಡಳಿತ ಮಂಡಳಿ ಇರಲಿಲ್ಲ, ಹೀಗಾಗಿ ಸಮಸ್ಯೆ ಮತ್ತಷ್ಟು ಕಗ್ಗಂಟಾಯಿತು.

ADVERTISEMENT

ಕಠಿಣ ನಿಲುವು ಮುಂದುವರಿಸಿರುವ ಜಲಮಂಡಳಿ ಅಧಿಕಾರಿಗಳು ಇಲ್ಲಿಯವರೆಗೆ ಹೊಸ ದರವನ್ನೇ ವಿಧಿಸುತ್ತಿದ್ದಾರೆ. ನೀರಿನ ಸಂಪರ್ಕ ಸ್ಥಗಿತಗೊಳಿಸುವ ಬೆದರಿಕೆ ಹಾಕಿ ಹೆಚ್ಚುವರಿ ದರ ಪಾವತಿಸುವಂತೆ ನೋಡಿಕೊಂಡಿದ್ದಾರೆ. ಆದರೂ 15 ಸಾವಿರ ಸಂಪರ್ಕಗಳ ನೀರಿನ ಬಾಕಿ ಪಾವತಿಯಾಗದೆ ಉಳಿದಿದ್ದು ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಮಸ್ಯೆ ಉಲ್ಭಣಗೊಂಡಿದೆ. ಸದ್ಯ ಜಲಮಂಡಳಿಗೆ ನೀರು ಕುಡಿಸಬೇಕಾಗಿದೆ. ಆದರೆ ನೀರು ಕುಡಿಸುವಂತಹ ಜನಪ್ರತಿನಿಧಿಗಳು ಮಂಡ್ಯದಲ್ಲಿ ಇಲ್ಲವಾಗಿದ್ದಾರೆ. ನಮ್ಮ ಮನೆಯ ನೀರಿನ ಬಿಲ್‌ ಬಾಕಿ ₹ 25 ಸಾವಿರಕ್ಕೇರಿದೆ. ಇದಕ್ಕೆ ಹೊಣೆ ಯಾರು ಎಂಬುದನ್ನು ಅಧಿಕಾರಿಗಳೇ ಉತ್ತರಿಸಬೇಕು’ ಎಂದು ನೆಹರೂನಗರದ ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ನಿರ್ಣಯ: 2020ರಲ್ಲಿ ನಗರಸಭೆ ಆಡಳಿತ ಮಂಡಳಿ ರಚನೆಯಾದ ನಂತರ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು. ತಿಂಗಳ ನೀರಿನ ದರವನ್ನು ₹ 202ಕ್ಕೆ ನಿಗದಿಗೊಳಿಸಿ ನಿರ್ಣಯ ಕೈಗೊಳಿಸಿ ಈ ಕುರಿತ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಯಿತು. ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಜನರು ಹೆಚ್ಚು ದರ ಪಾವತಿ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ.

‘ನಗರಸಭೆ ಪ್ರಸ್ತಾವಕ್ಕೆ ಸರ್ಕಾರ ಅನುಮೋದನ ನೀಡುವವರೆಗೂ ಹಳೆಯ ದರವನ್ನೇ ವಿಧಿಸುವಂತೆ ನಗರಸಭೆ ಅಧಿಕಾರಿಗಳು ನೋಡಿಕೊಳ್ಳಬಹುದಾಗಿತ್ತು. ಆದರೆ ನಗರಸಭೆ ಆಡಳಿತ ಮಂಡಳಿಗೆ ಇಚ್ಛಾಶಕ್ತಿ ಇಲ್ಲ. ಜಲಮಂಡಳಿ ಅಧಿಕಾರಿಗಳು ಸಂಪರ್ಕ ಕಡಿತಗೊಳಿಸುವ ಬೆದರಿಕೆ ಹಾಕುತ್ತಿದ್ದು ಶ್ರೀಮಂತರು ಹಣ ಕಟ್ಟುತ್ತಿದ್ದಾರೆ. ಈಗ ಮಧ್ಯಮ ವರ್ಗ ಹಾಗೂ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಗಾಂಧಿನಗರದ ರಮೇಶ್‌ ಹೇಳಿದರು.

*********

ನಾವು ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್‌ಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಅಲ್ಲಿಂದ ಮುಖ್ಯ ಎಂಜಿನಿಯರ್‌, ನಂತರ ವ್ಯವಸ್ಥಾಪಕ ನಿರ್ದೇಶಕರಿಗೆ ತಲುಪಲು ತಡವಾಗಿದೆ. ನಮ್ಮ ಕೆಲವನ್ನು ನಾವು ಸರಿಯಾಗಿ ಮಾಡಿದ್ಧೇವೆ
–ಎಸ್‌.ಲೋಕೇಶ್‌, ನಗರಸಭೆ ಪೌರಾಯುಕ್ತ


ನಗರಸಭೆಯ ಪ್ರಸ್ತಾವ ಸರ್ಕಾರದ ಹಂತದಲ್ಲಿದ್ದು ಅನುಮೋದನೆ ದೊರೆಯಬೇಕಾಗಿದೆ. ಅಲ್ಲಿಯವರೆಗೂ ಹೆಚ್ಚುವರಿ ದರ ವಸೂಲಿ ಮಾಡುವುದು ಅನಿವಾರ್ಯವಾಗಿದೆ. ನಾವು ಯಾವದೇ ಸಂಪರ್ಕ ಕಡಿತಗೊಳಿಸಿಲ್ಲ
– ಎಂ.ಮಾಲಿನಿ, ಕಾರ್ಯಪಾಲಕ ಎಂಜಿನಿಯರ್‌, ಜಲಮಂಡಳಿ

******

ಲೋಕ ಅದಾಲತ್‌ನಲ್ಲಿ ಪ್ರಕರಣ

ನೀರಿನ ಬಾಕಿ ವಾಪತಿಸದ ಬಳಕೆದಾರರ ವಿರುದ್ಧ ಜಲಮಂಡಳಿಯು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಡೆಯುತ್ತಿರುವ ಲೋಕ್‌ ಅದಾಲತ್‌ನಲ್ಲಿ ದಾವೆ ಹೂಡಿದೆ. ಇದರ ಆಧಾರದ ಮೇಲೆ ಬಿಲ್‌ ಪಾವತಿಸದ ನಿವಾಸಿಗಳಿಗೆ ನೋಟಿಸ್‌ ಜಾರಿಯಾಗಿದೆ.

‘ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶಕರು ನಗರಸಭೆ ಹಾಗೂ ಜಲಮಂಡಳಿ ಅಧಿಕಾರಿಗಳ ಸಂವಹನದ ಕೊರತೆಯನ್ನು ಗುರುತಿಸಿದ್ದಾರೆ. ನಗರಸಭೆ ಕೈಗೊಂಡಿರುವ ನಿರ್ಣಯ ಜಾರಿಯಾಗುವವರೆಗೂ ಎಷ್ಟು ಸಾಧ್ಯವೋ ಅಷ್ಟು ಬಿಲ್‌ ಪಾವತಿಸಿ, ಹೆಚ್ಚು ಹಣ ಪಾವತಿಯಾಗಿದ್ದರೆ ನಂತರ ಅದು ಹಿಂದಕ್ಕೆ ಬರಲಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ’ ಎಂದು ವಕೀಲರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.