ADVERTISEMENT

ಗುಳಘಟ್ಟ ಗ್ರಾಮದಲ್ಲಿ ಮಾರಮ್ಮನ ಹಬ್ಬ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:45 IST
Last Updated 26 ಫೆಬ್ರುವರಿ 2026, 7:45 IST
ಮಳವಳ್ಳಿ ತಾಲ್ಲೂಕಿನ ಗುಳಘಟ್ಟ ಗ್ರಾಮದಲ್ಲಿ ಮಾರಮ್ಮನ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ
ಮಳವಳ್ಳಿ ತಾಲ್ಲೂಕಿನ ಗುಳಘಟ್ಟ ಗ್ರಾಮದಲ್ಲಿ ಮಾರಮ್ಮನ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ   

ಮಳವಳ್ಳಿ: ಹಬ್ಬ ಎಂದರೆ ಬರೀ ಪೂಜೆಗೆ ಸೀಮಿತಗೊಳಿಸದೆ ಜನರ ನಡುವಿನ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಿದ ತಾಲ್ಲೂಕಿನ ಗುಳಘಟ್ಟ ಗ್ರಾಮದ ಯುವಕರು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಫೆ.21ರಿಂದ 25ರವರೆಗೆ ನಡೆದ ಹಬ್ಬದಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು, ಹೂವು ಹೊಂಬಾಳೆ ಹಾಗೂ ದೇವರ ಉತ್ಸವದ ಮೆರವಣಿಗೆ ಭಕ್ತಿ ಪ್ರಧಾನವಾಗಿ ನಡೆಯಿತು. ಗ್ರಾಮದ ಮಾರಮ್ಮ ಸೇವಾ ಸಮಿತಿ ವತಿಯಿಂದ ಎರಡು ದಿನಗಳ ಕಾಲ ಮಾರಮ್ಮ ಕಪ್ ರಾಜ್ಯಮಟ್ಟದ ಕಬಡ್ಡಿ ಟೂರ್ನಿ ಆಯೋಜನೆ ಮಾಡಲಾಗಿತ್ತು.

ವಿವಿಧ ಜಿಲ್ಲೆಗಳಿಂದ ಹಲವು ತಂಡಗಳು, ಕ್ರೀಡಾಪಟುಗಳು ಭಾಗವಹಿಸಿ ಯಶಸ್ವಿಗೊಳಿಸಿದರು. ಹಬ್ಬದ ಒತ್ತಡದಲ್ಲಿರುವ ಮಹಿಳೆಯರಿಗೂ ಮನರಂಜನೆ ನೀಡಬೇಕು ಎನ್ನುವ ಉದ್ದೇಶದಿಂದ ಬುಧವಾರ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಕ್ಷರ ದಾಸೋಹ, ಕೃಷಿಕೂಲಿಕಾರರು ಸೇರಿದಂತೆ ವಿವಿಧ ಗ್ರಾಮದ ಹಲವಾರು ತಂಡಗಳ ನೂರಾರು ಮಹಿಳೆಯರು ಭಾಗವಹಿಸಿ ಸ್ಥಳೀಯರಿಗೆ ಮನರಂಜನೆ ನೀಡಿದರು.

ADVERTISEMENT

ಮುಖಂಡ ಸ್ವಾಮಿ ಮಾತನಾಡಿ, ಪ್ರತಿವರ್ಷ ಗ್ರಾಮ ದೇವತೆ ಮಾರಮ್ಮ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಳ್ಳಿಗಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಾಂಧವ್ಯದ ಬದಲು ವೈಷಮ್ಯಗಳೇ ಹೆಚ್ಚಾಗುತ್ತಿದ್ದು, ಎಲ್ಲರ ಮನಸು ಒಗ್ಗೂಡಿಸುವ ಪ್ರಯತ್ನದ ಫಲವಾಗಿ ಇಂಥ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಯುವಕರಿಗೆ ಕಬಡ್ಡಿ, ಮಹಿಳೆಯರಿಗೆ ಹಗ್ಗ ಜಗ್ಗಾಟ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಕೃಷಿ ಹಾಗೂ ದಿನನಿತ್ಯದ ಚಟುವಟಿಕೆಗಳ ಒತ್ತಡದ ಗ್ರಾಮಸ್ಥರಿಗೆ ಮನರಂಜನೆ ನೀಡಲಾಗಿದೆ ಎಂದು ಹೇಳಿದರು.

ಮುಖಂಡರಾದ ವಿಜಯೇಂದ್ರ, ಚೌಡಯ್ಯ, ನಾವು ದ್ರಾವಿಡ ಕನ್ನಡಿಗ ಚಳುವಳಿಯ ಮನು, ವಿವೇಕಾನಂದ ಯುವಕರ ಬಳಗದ ಸದಸ್ಯರು, ವಿವಿಧ ಸಂಘಟನೆ ಮುಖಂಡರಾದ ದೇವಿ, ಮಹದೇವಮ್ಮ, ಸುಶೀಲಾ, ಶಿವಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.