ADVERTISEMENT

ಅಂಗವಿಕಲ ಟೈಲರ್‌ನ ಮಾಸ್ಕ್ ಸೇವೆ

ಕೊರೊನಾ ತಡೆಗೆ ಬೊಮ್ಮೇನಹಳ್ಳಿಯ ಮಂಜುನಾಥ್ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 13:45 IST
Last Updated 30 ಮಾರ್ಚ್ 2020, 13:45 IST
ಕೆ.ಆರ್.ಪೇಟೆ ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಅಂಗವಿಕಲ ಟೈಲರ್ ಮಂಜುನಾಥ್ ಮಾಸ್ಕ್ ಹೊಲೆಯುತ್ತಿರುವುದು
ಕೆ.ಆರ್.ಪೇಟೆ ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಅಂಗವಿಕಲ ಟೈಲರ್ ಮಂಜುನಾಥ್ ಮಾಸ್ಕ್ ಹೊಲೆಯುತ್ತಿರುವುದು   

ಕೆ.ಆರ್.ಪೇಟೆ: ಕೊರೊನಾ ಭೀತಿಯಿಂದ ಜನರು ಭೀತರಾಗುವ ಈ ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ತನ್ನಿಂದಾದ ಸಹಾಯ ಮಾಡಬೇಕೆಂದು ಅಂಗವಿಕಲ ಟೈಲರ್ ಒಬ್ಬರು ಉಚಿತವಾಗಿ ಮಾಸ್ಕ್ ಹೊಲೆದು ಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ

ಬೊಮ್ಮೇನಹಳ್ಳಿ ಗ್ರಾಮದ ಮಂಜುನಾಥ್ ಕೃತಕ ಕಾಲು ಹಾಕಿಸಿಕೊಂಡು ಕಳೆದ 12 ವರ್ಷಗಳಿಂದ ಟೈಲರ್ ವೃತ್ತಿ ಮಾಡುತ್ತಾ ಬಂದಿದ್ದಾರೆ. ತಮ್ಮ ತಾಯಿ ಸಾಕಮ್ಮ, ಅಜ್ಜಿ ಬೋರಮ್ಮ ಅವರನ್ನು ಸಹ ಸಾಕಿ ಸಲುಹುವ ಜವಾಬ್ದಾರಿಯೂ ಹೊತ್ತಿರುವ ಇವರು ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೊರೊನಾ ಸೋಂಕು ತಡೆಗೆ ಎಲ್ಲರಿಗೂ ಅತ್ಯವಶ್ಯವಾಗಿ ಮಾಸ್ಕ್ ಬೇಕಾಗಿದೆ. ಆದರೆ, ಮಾಸ್ಕ್‌ಗಳು ಪಟ್ಟಣದವರಿಗೆ ಸಿಗದಿರುವಾಗ ಹಳ್ಳಿಯವರಿಗೆ ದಕ್ಕೀತೇ? ಹೀಗಾಗಿ ತಮ್ಮೂರಿನ ಜನರಿಗೆ ಉಪಯುಕ್ತವಾಗಲೆಂದು ನಿರ್ಧರಿಸಿ ಕಳೆದ ಒಂದು ವಾರದಿಂದಲೂ ಖಾದಿ ಬಟ್ಟೆಯಿಂದ ಮಾಸ್ಕ್‌ಗಳನ್ನು ಹೊಲೆಯುತ್ತಿದ್ದಾರೆ.

ADVERTISEMENT

‘ಮಾರುಕಟ್ಟೆಯಲ್ಲಿ ಮಾಸ್ಕ್ ದೊರೆಯದೇ ಹಳ್ಳಿಯವರು ಪಟ್ಟಣಕ್ಕೆ ಹೋಗಿ ಪೊಲೀಸರಿಂದ ಪೆಟ್ಟು ತಿನ್ನುವುದನ್ನು ಟಿವಿಯಲ್ಲಿ ನೋಡಿದೆ. ಇದರಿಂದ ನೊಂದು ನನ್ನಲ್ಲಿದ್ದ ಬಟ್ಟೆ ಬಳಸಿ ಮಾಸ್ಕ್ ಹೊಲೆಯಲು ಆರಂಭಿಸಿದೆ. ಸಾಕಷ್ಟು ಜನರಿಗೆ ಉಚಿತವಾಗಿ ಕೊಟ್ಟಿದ್ದೇನೆ. ಕೆಲವರು ನೀನೊಬ್ಬ ಅಂಗವಿಕಲ ಜೀವನ ನಿರ್ವಹಣೆ ನಡೆಯಬೇಕಲ್ಲವೇ ಎಂದು ಹೇಳುತ್ತಾ ಅವರೇ ಸ್ವಯಂ ಪ್ರೇರಿತರಾಗಿ ಕೈಲಾದಷ್ಟು ಹಣ ನೀಡಿ ಪಡೆದುಕೊಳ್ಳುತಿದ್ದಾರೆ. ನನಗೆ ಬಟ್ಟೆ ಮತ್ತು ಇತರೆ ಸಾಮಗ್ರಿ ತಂದು ಕೊಟ್ಟರೆ ಸಾಕು ಕೊರೊನಾ ಮಹಾಮಾರಿ ದೇಶದಲ್ಲಿ ಸಂಪೂರ್ಣ ನಿರ್ಮೂಲನೆ ಆಗುವವರೆವಿಗೂ ನನ್ನ ಶಕ್ತಿ ಮೀರಿ ಮಾಸ್ಕ್‌ಗಳನ್ನು ಹೊಲೆದು ಕೊಡುತ್ತೇನೆ’ ಎನ್ನುತ್ತಾರೆ ಮಂಜುನಾಥ್.

ಸದ್ಯ ಅವರಿಗೆ ಮಾಸ್ಕ್ ತಯಾರಿಕೆಗೆ ಬೇಕಾದ ಬಟ್ಟೆ, ಎಲಾಸ್ಟಿಕ್ ರಬ್ಬರ್ ಮುಂತಾದ ಕಚ್ಚಾ ವಸ್ತುಗಳ ಕೊರತೆ ಇದೆ. ಅದನ್ನು ಯಾರಾದರೂ ಒದಗಿಸಿಕೊಟ್ಟರೆ ಇನ್ನಷ್ಟು ಜನರಿಗೆ ಮಾಸ್ಕ್ ದೊರೆಯುವಂತಾಗುತ್ತದೆ. ಆಸಕ್ತರು ಮಂಜುನಾಥ್ ಅವರ ಮೊಬೈಲ್ ಸಂಖ್ಯೆ: 9632361864 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.