ADVERTISEMENT

ಮಂಡ್ಯ | ಎಂಡಿಸಿಸಿ: ಸಚಿವರ ಪುತ್ರನಿಗೆ ಅಧ್ಯಕ್ಷ ಸ್ಥಾನ?

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 5:18 IST
Last Updated 21 ನವೆಂಬರ್ 2025, 5:18 IST
ಮಂಡ್ಯದ ಡಿಸಿಸಿ ಬ್ಯಾಂಕ್‌ ಕಚೇರಿಯ ಹೊರನೋಟ 
ಮಂಡ್ಯದ ಡಿಸಿಸಿ ಬ್ಯಾಂಕ್‌ ಕಚೇರಿಯ ಹೊರನೋಟ    

ಮಂಡ್ಯ: ಇಲ್ಲಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (ಎಂಡಿಸಿಸಿ) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪಾರಮ್ಯ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. 

ನ.21ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ಪುತ್ರ ಸಿ.ಸಚಿನ್‌ ಅಧ್ಯಕ್ಷರಾಗುವ ಹಾದಿ ಸುಗಮವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮದ್ದೂರು ಶಾಸಕ ಕೆ.ಎಂ.ಉದಯ ಅವರ ಶಿಫಾರಸ್ಸಿನ ಮೇರೆಗೆ ಸಿ.ಚಲುವರಾಜು ಹೆಸರನ್ನು ಅಂತಿಮಗೊಳಿಸಲಾಗಿದೆ.

ಎಂಡಿಸಿಸಿ ಬ್ಯಾಂಕ್‌ 12 ನಿರ್ದೇಶಕರ ಸಂಖ್ಯಾಬಲ ಹೊಂದಿದ್ದು, ಅದರಲ್ಲಿ ಒಬ್ಬರಷ್ಟೇ ಜೆಡಿಎಸ್ ಬೆಂಬಲಿತ ನಿರ್ದೇಶಕರಿದ್ದು, ಉಳಿದ 11 ನಿರ್ದೇಶಕರೂ ಕಾಂಗ್ರೆಸ್ ಬೆಂಬಲಿತರು. ಹೀಗಾಗಿ ಎಂಡಿಸಿಸಿ ಬ್ಯಾಂಕ್‌ ‘ಕೈ’ ವಶವಾಗಿದೆ. 

ADVERTISEMENT

ಸಚಿವರೊಂದಿಗೆ ಸಭೆ:

ಜಿಲ್ಲಾ ಉಸ್ತುವಾರಿ ಸಚಿವ ನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕುಮಾರಕೃಪದಲ್ಲಿ ಗುರುವಾರ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಮತ್ತು ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ಸಭೆ ಕರೆಯಲಾಗಿತ್ತು. ಪದಾಧಿಕಾರಿಗಳ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. 

ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಮದ್ದೂರಿನ ಸಂದರ್ಶ, ಶೀಳನೆರೆ ಅಂಬರೀಶ್, ಹಾಲಹಳ್ಳಿ ಅಶೋಕ್ ಮತ್ತು ಸಾತನೂರು ಸತೀಶ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಇವರೊಂದಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚಿನ್‌ ಚಲುವರಾಯಸ್ವಾಮಿ ಹೆಸರೂ ಪ್ರಸ್ತಾಪವಾಗಿತ್ತು. ಎಲ್ಲ ಆಕಾಂಕ್ಷಿತರು ಯಾವುದೇ ಅಪಸ್ವರವಿಲ್ಲದೆ, ಒಕ್ಕೊರಲಿನಿಂದ ಸಚಿನ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಅಧಿಕಾರ ಹಂಚಿಕೆ ಸೂತ್ರದನ್ವಯ ಮೊದಲ ಅವಧಿಗೆ ಸಚಿನ್ ಹೆಸರನ್ನು ಅಂತಿಮಗೊಳಿಸಿ, ನಂತರದಲ್ಲಿ ಉಳಿದವರಿಗೆ ಅವಕಾಶ ಕಲ್ಪಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಕಾಂಗ್ರೆಸ್‌ ಮೇಲುಗೈ:

ಈ ಬಾರಿಯ ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್‌ ತೀವ್ರ ಸ್ಪರ್ಧೆ ಒಡ್ಡುವಲ್ಲಿ ವಿಫಲವಾಯಿತು. ಮತದಾನಕ್ಕೂ ಮೊದಲೇ 12 ಸ್ಥಾನಗಳಲ್ಲಿ 9 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದು, ಒಂದು ಕ್ಷೇತ್ರದಲ್ಲಷ್ಟೇ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಎಂಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ 11 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಬೆಂಬಲಿತರ ಪಡೆ ಪ್ರಾಬಲ್ಯ ಸಾಧಿಸಿದೆ.

ಪಿ.ಎಂ.ನರೇಂದ್ರಸ್ವಾಮಿ 
ಸಿ.ಸಚಿನ್ 
ಸಿ.ಡಿ.ಗಂಗಾಧರ್‌
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಚಿನ್ ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಚಲುವರಾಜು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಹುದ್ದೆಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೆಸರನ್ನು ಅಂತಿಮಗೊಳಿಸಲಾಗಿದೆ.
ಸಿ.ಡಿ.ಗಂಗಾಧರ್ ಅಧ್ಯಕ್ಷ ಜಿಲ್ಲಾ ಕಾಂಗ್ರೆಸ್ ಸಮಿತಿ

ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ನರೇಂದ್ರಸ್ವಾಮಿ  ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಎರಡನೇ ಬಾರಿಗೆ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಸಾಲಿನಲ್ಲಿಯೇ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗುವ ಕನಸು ಕಂಡಿದ್ದರು. ಆದರೆ ಹಿಂದಿನ ಅವಧಿಯ ವರಿಷ್ಠರ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿ ಅಧಿಕಾರದ ಗದ್ದುಗೆ ಹಿಡಿದ ಪರಿಣಾಮ ಕಡೇ ಕ್ಷಣದಲ್ಲಿ ಅವಕಾಶ ಕೈ ತಪ್ಪಿತ್ತು. ಈ ಬಾರಿ ಅವರ ಹಾದಿ ಸುಗಮವಾಗಿದೆ. ಈ ಹಿನ್ನೆಲೆಯಲ್ಲಿ ಅಪೆಕ್ಸ್ ಬ್ಯಾಂಕ್‌ಗೆ ಪ್ರತಿನಿಧಿಯಾಗುವ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಬಯಕೆಗೆ ಬೆಂಗಳೂರಿನ ಸಭೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.