
ಸಂಜಯ್ ಗುಬ್ಬಿ ಮಾತನಾಡಿದರು
ಮಂಡ್ಯ: ‘ಮೇಕೆದಾಟು ಯೋಜನೆ’ಯಿಂದ ಕಾವೇರಿ ವನ್ಯಜೀವಿ ವಲಯ ಸೇರಿದಂತೆ 4,800 ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗಿ, ಸುಮಾರು 12 ಲಕ್ಷ ಮರಗಳ ಹನನವಾಗಲಿದೆ. ಹೀಗಾಗಿ ಈ ಉದ್ದೇಶಿತ ಯೋಜನೆ ಪರಿಸರ ವ್ಯವಸ್ಥೆ ಮತ್ತು ವನ್ಯಜೀವಿಗಳಿಗೆ ಮಾರಕವಾಗಲಿದೆ’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಕನ್ನಡ ಕರ್ನಾಟಕ ಫೌಂಡೇಷನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ‘ಆಪ್ತ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ರಾಮನಗರ ಜಿಲ್ಲೆಯ ಕನಕಪುರ ಬಳಿ ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದಲ್ಲಿ ‘ಮೇಕೆದಾಟು ಸಮತೋಲನ ಅಣೆಕಟ್ಟೆ’ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸ್ಥಳದ ಬದಲು ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಅಣೆಕಟ್ಟೆ ನಿರ್ಮಿಸುವುದು ಉತ್ತಮ. ಅಲ್ಲಿರುವ 8 ಮಿನಿ ಜಲವಿದ್ಯುತ್ ಘಟಕಗಳನ್ನು ಉಳಿಸುವ ಸಲುವಾಗಿ ಈ ಸ್ಥಳಕ್ಕೆ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಪರಿಸರವಾದಿಗಳು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಯಾವುದೇ ಯೋಜನೆಯನ್ನು ವಿರೋಧಿಸುವುದು ಸುಲಭ. ಆದರೆ ಅದಕ್ಕೆ ಪರ್ಯಾಯವನ್ನು ತಿಳಿಸಬೇಕಾದ ಹೊಣೆ ವನ್ಯಜೀವಿ ಸಂರಕ್ಷಕರ ಮೇಲೆ ಇದೆ. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಇದಕ್ಕೆ ಮಾಧ್ಯಮಗಳು ಕೂಡ ಉತ್ತಮ ಬೆಂಬಲ ನೀಡಿವೆ’ ಎಂದು ಹೇಳಿದರು.
ಬೀದಿ ಹೋರಾಟ ಮಾತ್ರ ಸಂರಕ್ಷಣೆಯಲ್ಲ:
ಬೀದಿಗಿಳಿದು ನಡೆಸುವ ಹೋರಾಟ ಮಾತ್ರ ಪರಿಸರ ಸಂರಕ್ಷಣೆಯಲ್ಲ. ಪರಿಸರಕ್ಕೆ ಯಾವ ರೀತಿಯ ಹಾನಿಯಾಗುತ್ತದೆ ಎಂಬುದನ್ನು ವನ್ಯಜೀವಿ ಸಂರಕ್ಷಕರು ದಾಖಲೆ ಸಹಿತ ರಾಜಕಾರಣಿಗಳಿಗೆ ಮನವರಿಕೆ ಮಾಡಿಕೊಟ್ಟಾಗ ಮಾತ್ರ ಯಶಸ್ಸು ಸಾಧಿಸಬಹುದು. ಬೀದಿಗಿಳಿಯದೆ 1 ಮಿಲಿಯನ್ ಎಕರೆ ಕಾಡನ್ನು ಸಂರಕ್ಷಿಸಿದ್ದೇವೆ ಎಂದರು.
ಕುದುರೆಮುಖ ಗಣಿಗಾರಿಕೆಯಿಂದ ಭದ್ರಾ, ತುಂಗಾ, ನೇತ್ರಾವತಿ ನದಿಗಳಿಗೆ ಮತ್ತು ಪರಿಸರ ವ್ಯವಸ್ಥೆಗೆ ಯಾವ ರೀತಿ ಮಾರಕವಾಗಿದೆ ಎಂಬುದನ್ನು 12 ನಿಮಿಷದ ಕಿರುಚಿತ್ರದ ಮೂಲಕ ತಿಳಿಸಿಕೊಟ್ಟಾಗ ಆದಿಚುಂಚನಗಿರಿ ಶ್ರೀಗಳು, ಸಿದ್ಧಗಂಗಾ ಶ್ರೀಗಳು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದರು ಎಂಬುದನ್ನು ನೆನಪು ಮಾಡಿಕೊಂಡರು.
ಚಿರತೆ ದಾಳಿ ಹೆಚ್ಚಳ:
ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ತುಮಕೂರು ಈ ಐದು ಜಿಲ್ಲೆಗಳಲ್ಲೇ ಶೇ 70ರಷ್ಟು ಚಿರತೆ ದಾಳಿ ಪ್ರಕರಣಗಳು ದಾಖಲಾಗಿವೆ. ಆವಾಸ ಸ್ಥಾನದ ನಾಶ, ಚಿರತೆಗಳ ಅವೈಜ್ಞಾನಿಕ ಸ್ಥಳಾಂತರ, ಕಳ್ಳಬೇಟೆ ಮುಂತಾದ ಕಾರಣಗಳಿಂದ ಚಿರತೆ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಕಾಡಿನಲ್ಲಿ ಕೃತಕವಾಗಿ ಆಹಾರ ಮತ್ತು ನೀರಿನ ಸೌಲಭ್ಯ ಕಲ್ಪಿಸುತ್ತಿರುವುದರಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿ ಪರಿಸರ ಸಮತೋಲನ ಹಾಳಾಗಿ, ಮಾನವ–ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ಮಾಹಿತಿ ನೀಡಿದರು.
‘ಶಾಲೆಗೆ ಬಂದ ಚಿರತೆ’ ಪುಸ್ತಕ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಓದುಗರು ಕೇಳಿದ ಪ್ರಶ್ನೆಗಳಿಗೆ ಸಂಜಯ್ ಗುಬ್ಬಿ ಅವರು ಉತ್ತಮ ಮಾಹಿತಿ ನೀಡಿದರು. ಲೇಖಕ ವಿನಯ್‌ಕುಮಾರ್ ಎಂ.ಜಿ. ಅವರು ಸಂವಾದ ನಡೆಸಿಕೊಟ್ಟರು.
‘ಶೀಘ್ರದಲ್ಲೇ 2 ಹೊಸ ಪುಸ್ತಕಗಳು’
ವನ್ಯಜೀವಿಗಳ ಕುರಿತು ಇಂಗ್ಲಿಷ್‌ನಲ್ಲಿ ‘ಲೆಪರ್ಡ್ ಡೈರೀಸ್; ದಿ ರೊಸೆಟ್ಟೆ ಇನ್ ಇಂಡಿಯಾ’ ಮತ್ತು ಸೆಕೆಂಡ್ ನೇಚರ್ ಕೃತಿ ಬರೆದಿದ್ದೇನೆ. ಕನ್ನಡದಲ್ಲಿ ‘ವನ್ಯಜೀವಿಗಳ ಜಾಡು ಹಿಡಿದು’ ಮತ್ತು ‘ಶಾಲೆಗೆ ಬಂದ ಚಿರತೆ’ ಪುಸ್ತಕಗಳನ್ನು ಹೊರತಂದಿದ್ದೇನೆ. ‘ಕಾಡಿನೊಳಗೊಂದು ಮನೆಯ ಮಾಡಿ’ ಮತ್ತು ಕಾಡಿನ ಗೆಳೆಯರ ಕಾಡುವ ಕತೆಗಳು’ 2 ಹೊಸ ಪುಸ್ತಕಗಳು ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ತಿಳಿಸಿದರು.
‘ಶೈಕ್ಷಣಿಕ ಸಫಾರಿ ಇಂದಿನ ಅಗತ್ಯ’
ಸಫಾರಿಯ ನಿಜವಾದ ಅರ್ಥ ಮತ್ತು ಉದ್ದೇಶ ಇಂದು ಬದಲಾಗಿದೆ. ಉಳ್ಳವರು ಸಾವಿರಾರು ರೂಪಾಯಿ ಭರಿಸಿ, ಜಂಗಲ್ ರೆಸಾರ್ಟ್‌ಗಳಲ್ಲಿ ಉಳಿದು ಮೋಜು ಮಸ್ತಿ ಮಾಡುವುದೇ ಸಫಾರಿ ಎಂಬಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ, ವಿಡಿಯೊ ಶೇರ್ ಮಾಡಿ, ಲೈಕ್ ಗಿಟ್ಟಿಸಿಕೊಳ್ಳಲು ಬಹುತೇಕರು ಸಫಾರಿಗೆ ಹೋಗುತ್ತಾರೆ. ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ನಡೆಸುವ ಸಫಾರಿ ಇಂದಿನ ಅಗತ್ಯವಾಗಿದೆ ಎಂದು ಸಂಜಯ್ ಗುಬ್ಬಿ ಅಭಿಪ್ರಾಯಪಟ್ಟರು.
ಬಂಡೀಪುರ, ನಾಗರಹೊಳೆಗೆ ಹೋಗಿ ಹುಲಿ, ಚಿರತೆ ನೋಡುವುದು ಸಫಾರಿ ಎಂಬಂತಾಗಿದೆ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಕ್ರಿಮಿಕೀಟ, ಪಕ್ಷಿ, ಚಿಟ್ಟೆ, ಉರಗ, ಸಸ್ತನಿ ಹಾಗೂ ಮರಗಳ ವೈವಿಧ್ಯತೆ ನೋಡುವುದೇ ನಿಜವಾದ ಸಫಾರಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.