ADVERTISEMENT

ಮೇಲುಕೋಟೆ: ಚೆಲುವನಾರಾಯಣ ಸ್ವಾಮಿಗೆ ಸೂರ್ಯಮಂಡಲ ವಾಹನೋತ್ಸವ

ಗಮನ ಸೆಳೆದ ಕಲಾತಂಡಗಳು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 10:04 IST
Last Updated 2 ಫೆಬ್ರುವರಿ 2020, 10:04 IST
ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿಯ ಸೂರ್ಯಮಂಡಲ ವಾಹನೋತ್ಸವ ನಡೆಯಿತು (ಎಡಚಿತ್ರ). ಮಂಡ್ಯದ ತಡಗವಾದಿ ವನಿತೆಯರ ಕೋಲಾಟದ ದೃಶ್ಯ
ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿಯ ಸೂರ್ಯಮಂಡಲ ವಾಹನೋತ್ಸವ ನಡೆಯಿತು (ಎಡಚಿತ್ರ). ಮಂಡ್ಯದ ತಡಗವಾದಿ ವನಿತೆಯರ ಕೋಲಾಟದ ದೃಶ್ಯ   

ಮೇಲುಕೋಟೆ: ಇಲ್ಲಿನ ಚೆಲುವ ನಾರಾಯಣ ಸ್ವಾಮಿ ರಥಸಪ್ತಮಿಯ ಮಹೋತ್ಸವ ಶನಿವಾರ ವೈಭವದಿಂದ ನೆರವೇರಿತು.

ಭಕ್ತರು ಸ್ವಾಮಿಯ ದರ್ಶನ ಪಡೆಯುವ ಜೊತೆಗೆ ಜನಪದ ಕಲಾ ತಂಡಗಳ ಪ್ರದರ್ಶನದ ಸೊಬಗನ್ನು ಕಣ್ತುಂಬಿಕೊಂಡರು.

ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ಅವರು ರಥಸಪ್ತಮಿಗೆ ಚಾಲನೆ ನೀಡಿದರು. ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ನಡೆಸಿದ 21ನೇ ವರ್ಷದ ರಾಜ್ಯಮಟ್ಟದ ಜಾನಪದ ಕಲಾ ಮೇಳವನ್ನು ಉದ್ಘಾಟಿಸಿದರು.

ADVERTISEMENT

ಪಂಚವಾದ್ಯ, ಕೇರಳದ ಚಂಡೆ ಮೇಳ, ಮಾರೇಹಳ್ಳಿಯ ಚಿಲಿಪಿಲಿ ಗೊಂಬೆ, ಕೊತ್ತತ್ತಿಯ ಮರಗಾಲುಕುಣಿತ, ಹುಲಿವೇಷ, ಮೈಸೂರಿನ ಕೀಲುಕುದುರೆ, ಕರಗದ ನೃತ್ಯ, ಲಕ್ಷ್ಮೀಸಾಗರದ ನಾಸಿಕ್‌ ಡೋಲ್, ಮಂಡ್ಯ ಜಿಲ್ಲೆಯ ವಿವಿಧ ಭಾಗಗಳ ನಂದಿಕಂಬ, ಪಟಾಕುಣಿತ, ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ, ತಳಗವಾದಿಯ ಹೆಣ್ಣುಮಕ್ಕಳ ಜಡೆ ಮತ್ತು ಕರಗದ ಕೋಲಾಟ, ಡೊಳ್ಳುಕುಣಿತ, ಜಾಂಜ್ ಮೇಳ, ಸೋಮನ ಕುಣಿತ, ಚಕ್ರಾದಿ ಬಳೆ, ಖಡ್ಗಪವಾಡ, ಗಾರುಡಿಗೊಂಬೆ, 101 ಕಳಸ, ವೀರಮಕ್ಕಳ ಕುಣಿತ, ಕಂಸಾಳೆ, ನಾದಸ್ವರ, ಭಾಗವಂತಿಕೆ ಮೇಳ, ದಾಸಯ್ಯರ ದರ್ಶನ, ಬ್ಯಾಂಡ್, ತಮಟೆ ಮೇಳ ಹೀಗೆ ಅನೇಕ ತಂಡಗಳು ಪ್ರದರ್ಶನ ನೀಡಿದವು.

ಮೇಲುಕೋಟೆಯ ಗುರುಶನೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಯದುಗಿರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸರ್ಕಾರಿ ಬಾಲಕರು ಮತ್ತು ಬಾಲಕಿಯರ ಶಾಲೆಗಳ ನೂರಾರು ಮಕ್ಕಳು ಬ್ಯಾಂಡ್ ಹಾಗೂ 101 ಕಳಸ ತಂಡದಲ್ಲಿ ಭಾಗವಹಿಸಿ ರಥಸಪ್ತಮಿಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.

ಉಡುಪಿ ಬಾರ್ಕೂರು ಮಹಾ ಸಂಸ್ಥಾನದ ವಿಶ್ವಸಂತೋಷ ಭಾರತೀ ಶ್ರೀಪಾದ, ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ, ಅಮೆರಿಕ ಅಕ್ಕ ಸಮ್ಮೇಳನದ ರೂವಾರಿ ಕಿಲಾರ ಶಿವಮೂರ್ತಿ, ಜಿ.ಪಂ ಮಾಜಿ ಸದಸ್ಯ ಅಂಬರೀಶ್, ಅಘಲಯದ ಶ್ರೀನಿವಾಸ ಅಯ್ಯಂಗಾರ್, ದೇವಾಲಯದ ಇಒ ನಂಜೇಗೌಡ, ಕಲಾಮೇಳದ ಸಂಘಟಕಿ ಸೌಮ್ಯಾ ಸಂತಾನಂ, ಕಲಾವಿದ ಆರ್.ಶಿವಣ್ಣಗೌಡ, ಎಸ್.ಇ.ಟಿ ಪಾಲಿಟೆಕ್ನಿಕ್ ರಿಜಿಸ್ಟ್ರಾರ್ ನಿಂಗೇಗೌಡ, ಡಾ.ಶಲ್ವಪಿಳ್ಳೆ ಅಯ್ಯಂಗಾರ್, ಮಲ್ಲೇಶ್ವರಿ ಇದ್ದರು.

‘ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗಲಿದೆ’

‘ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಶೀಘ್ರವೇ ದೊರೆಯಲಿದೆ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದಾಗಿ ರಥಸಪ್ತಮಿ ದಿನದಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿಸನ್ನಿಧಿಯಲ್ಲಿ ಸಂಕಲ್ಪ ಮಾಡುತ್ತಿದ್ದೇನೆ’ ಎಂದು ಕೆ.ಸಿ. ನಾರಾಯಣಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.