ADVERTISEMENT

ಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಉತ್ಸವ

ಒಂದು ಗಂಟೆ ಕಾಲ ಸರಳ ಅಲಂಕಾರದಲ್ಲಿ ಕಂಗೊಳಿಸಿದ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 15:08 IST
Last Updated 12 ಜುಲೈ 2020, 15:08 IST
ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ಭಾನುವಾರ ಶ್ರೀಕೃಷ್ಣರಾಜಮುಡಿ ಉತ್ಸವ ವೈಭವದಿಂದ ನೆರವೇರಿತು
ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ಭಾನುವಾರ ಶ್ರೀಕೃಷ್ಣರಾಜಮುಡಿ ಉತ್ಸವ ವೈಭವದಿಂದ ನೆರವೇರಿತು   

ಮೇಲುಕೋಟೆ: ಮಹಾಮಾರಿ ಕೊರೊನಾ ವೈರಾಣು ಶೀಘ್ರ ನಾಶವಾಗಿ ನಾಡಿನಲ್ಲಿ ಆರೋಗ್ಯ ನೆಲೆಸಲಿ ಎಂದು ಪ್ರಾರ್ಥಿಸಿ ಮೇಲುಕೋಟೆ ಶ್ರೀಚೆಲುವ ನಾರಾಯಣ ಸ್ವಾಮಿಗೆ ಭಾನುವಾರ ಸಂಜೆ ಶ್ರೀಕೃಷ್ಣರಾಜಮುಡಿ ಉತ್ಸವವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾತು.

ಸಂಜೆ 6.30ಕ್ಕೆ ಮಂಗಳವಾದ್ಯ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ದೇವಾಲಯದ ಒಳಪ್ರಾಕಾರದಲ್ಲಿ ನಡೆದ ಉತ್ಸವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಮಾತ್ರ ಭಾಗವಹಿಸಿದ್ದರು. ಸರಳ ಅಲಂಕಾರದಲ್ಲಿ ಕಂಗೊಳಿಸಿದ ಸ್ವಾಮಿಯ ಉತ್ಸವ ಒಂದು ಗಂಟೆಕಾಲ ಮಾತ್ರ ನೆರವೇರಿತು.

ಶನಿವಾರವೇ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪರಿಶೀಲಿಸಿದ್ದ ವಜ್ರಖಚಿತ ಶ್ರೀಕೃಷ್ಣರಾಜಮುಡಿ ಕಿರೀಟವನ್ನು ಕೈ ಬೊಕ್ಕಸದಿಂದ ತೆಗೆದು ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾಗಿ ಅಲಂಕಾರಗೊಂಡ ಚೆಲುವನಾರಾಯಣಸ್ವಾಮಿ ತೊಡಿಸಲಾಯಿತು.

ADVERTISEMENT

ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಭಕ್ತಿಪೂರ್ವಕವಾಗಿ ವಜ್ರಖಚಿತ ಕೃಷ್ಣರಾಜಮುಡಿ ಹಾಗೂ ಮೈಸೂರು ಲಾಂಛನ ಗಂಡುಬೇರುಂಡ ಪದಕವನ್ನು ಸಮರ್ಪಿಸಿ ಆಷಾಡ ಮಾಸದಲ್ಲಿ ತಮ್ಮದೇ ಹೆಸರಲ್ಲಿ ಬ್ರಹ್ಮೋತ್ಸವ ಆರಂಭಿಸಿದ್ದರು. ಅಂದಿನಿಂದ ಅನೂಚಾನವಾಗಿ ನಡೆದ ಬರುತ್ತಿರುವ ಕೃಷ್ಣರಾಜಮುಡಿ ಬ್ರಹ್ಮೋತ್ಸವ ವೈರಮುಡಿ ಜಾತ್ರಾಮಹೋತ್ಸವ ಮುಂದೂಡಿಕೆಯಾಗಿದ್ದರೂ ಇಂದು ಕೊರೊನಾ ತೀವ್ರತೆಯ ನಡುವೆಯೂ ನಡೆದದ್ದು ಭಕ್ತರಾದ ಮುಮ್ಮುಡಿ ಮಹಾರಾಜರ ಮನಸ್ಸಿನ ಪರಿಶುದ್ಧ ಭಕ್ತಿಗೆ ಸಾಕ್ಷಿಯಾಗುತ್ತದೆ ಎಂದು ದೇವಾಲಯದ ಸ್ಥಾನೀಕರು ಭಕ್ತಿಭಾವ ಪ್ರದರ್ಶಿಸಿದರು.

ಸಂಜೆ ನಿತ್ಯಪೂಜಾ ಕೈಂಕರ್ಯಗಳನ್ನು ಮುಕ್ತಾಯ ಮಾಡಿದ ನಂತರ ಗರುಡದೇವನ ಉತ್ಸವವನ್ನು ಕೈಗೊಳ್ಳಲಾಯಿತು. ಪಾಂಡವಪುರ ಉಪವಿಭಾಧಿಕಾರಿ ಶಿವಾನಂದಮೂರ್ತಿ ಸಮಕ್ಷಮ ಸ್ವಾಮಿಗೆ ಸಂಜೆ 6.30ಕ್ಕೆ ಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಾಲಯದ ಹೊರಭಾಗದಲ್ಲಿ ಉತ್ಸವ ನಡೆಸಲು ಅನುಮತಿಯಿಲ್ಲದ ಕಾರಣ ವೈರಮುಡಿ ಕಿರೀಟಧಾರಣೆಯಾಗುವ ಆಚಾರ್ಯ ರಾಮಾನುಜ ಅವರ ಸನ್ನಿಧಿಯ ಆವರಣದಲ್ಲೇ ಸ್ವಾಮಿಗೆ ಅಲಂಕಾರ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಮತ್ತಿತರ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು. ಎಸ್.ಐ ಚಿದಾನಂದ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.