ADVERTISEMENT

ಮೇಲುಕೋಟೆ ದೇವಸ್ಥಾನದಲ್ಲಿ ಅದ್ದೂರಿ ವಿಷ್ಣುದೀಪೋತ್ಸವ

ಚೆಲುವರಾಯಸ್ವಾಮಿ ದೇವಸ್ಥಾನದಲ್ಲಿ ಬೆಳಗಿದ ಪಾತಾಳಾಂಕಣದಲ್ಲಿಡಲಾಗಿದ್ದ ನೂರಾರು ಹಣತೆಗಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 5:40 IST
Last Updated 6 ಡಿಸೆಂಬರ್ 2025, 5:40 IST
ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಬೆಟ್ಟದಲ್ಲಿ ಕೃತಿಕೋತ್ಸವ ವೈಭವದಿಂದ ಜರುಗಿತು
ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಬೆಟ್ಟದಲ್ಲಿ ಕೃತಿಕೋತ್ಸವ ವೈಭವದಿಂದ ಜರುಗಿತು   

ಮೇಲುಕೋಟೆ:‌ ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ವಿಷ್ಣು ದೀಪೋತ್ಸವ ಅದ್ದೂರಿಯಾಗಿ ನಡೆಯಿತು.

ರಾತ್ರಿ ದೇವಾಲಯದಲ್ಲಿ ನಿತ್ಯ ಪೂಜೆಯ ನಂತರ ವಿಷ್ಣುದೀಪದ ಕೈಂಕರ್ಯಗಳಿಗೆ ಚಾಲನೆ ನೀಡಿ ಅಂತಿಮವಾಗಿ ಮೂಲಮೂರ್ತಿಗೆ ಚೆಲುವನಾರಾಯಣಸ್ವಾಮಿಗೆ ವೇದಘೋಷದೊಂದಿಗೆ ಕುಂಭಾರತಿ ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿ ಚೆಲುವನಾರಾಯಣಸ್ವಾಮಿಗೆ ಶ್ರೀದೇವಿ ಭೂದೇವಿಯೊಂದಿಗೆ ಉತ್ಸವ ನೆರವೇರಿಸಲಾಯಿತು.

ಸ್ವಾಮಿಯ ಉತ್ಸವ ರಾಮಾನುಜರ ಸನ್ನಿಧಿಗೆ ಬಂದ ವೇಳೆ ಪಾತಾಳಾಂಕಣದಲ್ಲಿಡಲಾಗಿದ್ದ ನೂರಾರು ಹಣತೆಗಳನ್ನು ಭಕ್ತರು ಬೆಳಗಿಸಿದರು. ಪರಿಚಾರಕ ಪಾರ್ಥಸಾರಥಿ ಕುಂಭಾರತಿಯನ್ನು ಹೊತ್ತು ಸ್ವಾಮಿಯ ಉತ್ಸವ ಮುಂದೆ ಸಾಗಿ ವಿಷ್ಣು ದೀಪದ ಸಂಪ್ರದಾಯವನ್ನು ನೆರವೇರಿಸಿದರು. ರಾಜಗೋಪುರ ಬಳಿಗೆ ಉತ್ಸವ ಬಂದ ನಂತರ ಚೆಲುವನಿಗೆ ಆರತಿ ನೆರವೇರಿಸಲಾಯಿತು.

ADVERTISEMENT

ಚೆಲುವ ನಾರಾಯಣ ಸ್ವಾಮಿ ಹಾಗೂ ಯೋಗಾನರಸಿಂಹ ಸ್ವಾಮಿ, ಹೊಸಬಾವಿ ಕಾಳಿಕದೇವಿ , ಹೆಬ್ಬಾಗಿಲು ಆಂಜನೇಯಸ್ವಾಮಿ, ಶನೇಶ್ವರ ಸ್ವಾಮಿ ದೇವಾಲಯ, ಮುಕ್ತಿನಾಥ್ ಸ್ವಾಮಿ ದೇವಾಲಯ ಸೇರಿದಂತೆ ಕ್ಷೇತ್ರದ ಎಲ್ಲಾ ದೇವಾಲಯಗಳಲ್ಲಿ ದೇವಾಲಯದ ಆವರಣದಲ್ಲಿನ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಬೆಳಗಿದ ಮಣ್ಣಿನ ದೀಪಗಳನ್ನು ಜೋಡಿ ದೀಪ ಬೆಳಗಿಸಲಾಯಿತು. ಜತೆಗೆ ದೇವಾಲಯದ ಮುಂಭಾಗ ಗರುಡ ಕಂಬದ ಮೇಲೆ ಆರತಿ ಮಾಡಿ ದೀಪ ಬೆಳಗಿಸಲಾಯಿತು.ದೀಪೋತ್ಸವದ ನಂತರ ರಾಜಗೋಪುರದ ಮುಂಭಾಗದಲ್ಲಿ ವೇದಘೋಷ ದೊಂದಿಗೆ ಕೃತಿಕೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ರಾಜಗೋಪುರದ ಮುಂಭಾಗದಲ್ಲಿ ಎಣ್ಣೆಯಲ್ಲಿ ಬಟ್ಟೆ ಅದ್ದಿ ತಯಾರಿಸಿದ ಕರುಗವನ್ನು ಸುಟ್ಟು ಭಕ್ತರು ಪ್ರಸಾದ ನೀಡುವುದು ಮೇಲುಕೋಟೆಯಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡ ಬಂದಂತಹ ಸಂಪ್ರದಾಯವಾಗಿದೆ.

ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಹಾಗೂ ಚೆಲುವ ನಾರಾಯಣ ಸ್ವಾಮಿ ದೇವಾಲಯಗಳಲ್ಲಿ ಕರುಗವನ್ನು ಸುಟ್ಟು ವಿಷ್ಣು ದೀಪೋತ್ಸವ ಆಚರಿಸುವುದು ವಿಶೇಷತೆಯಿಂದ ಕೂಡಿದೆ. ದೀಪೋತ್ಸವ ಆಗಮಿಸಿದ ಭಕ್ತರಿಗೆ ಕಾಳಿಕದೇವಿ ದೇವಾಲಯದಲ್ಲಿ ಮೊಸರನ್ನ, ಹಣ್ಣಿನ ಪ್ರಸಾದ ಹಾಗೂ ಬುಗರಿಕಾಳಿನ ಪ್ರಸಾದ ವಿತರಣೆ ಮಾಡಲಾಯಿತು.

Highlights - ರಾಜಗೋಪುರ ಬಳಿಗೆ ಬಂದ ಚೆಲುವನಿಗೆ ಆರತಿ ಗರುಡ ಕಂಬದ ಮೇಲೆ ಬೆಳಗಿದ ದೀಪ ವೇದಘೋಷದೊಂದಿಗೆ ನೆರವೇರಿದ ಕೃತಿಕೋತ್ಸವ

Quote - ವಿಷ್ಣುದೀಪೋತ್ಸವದಲ್ಲಿ ಪಾಲ್ಗೊಂಡು ದೀಪ ಬೆಳಗಿಸಿದರೆ ಹಾಗೂ ಕಾರ್ತೀಕ ಮಾಸದಲ್ಲಿ ದೇವರಿಗೆಮಣ್ಣಿನ ದೀಪ ಬೆಳಗಿಸುವುದರಿಂದ ಇಷ್ಟಾರ್ಥಸಿದ್ಧಿಯ ಜತೆಗೆ ದೇವರಿಗೆ 30 ವರ್ಷ ಪೂಜೆ ಮಾಡಿ ಪ್ರತಿಫಲ ಲಭಿಸಲಿದೆ ಶ್ರೀನಿವಾಸನ್ ಗುರೂಜೀ ಸ್ಥನೀಕರು ಚೆಲುವ ನಾರಾಯಣ ಸ್ವಾಮಿ ದೇವಾಲಯ

ಮಂಟಪ ವಾಹನೋತ್ಸವ

ದೇವಾಲಯ ರಾಜಬೀದಿಯಲ್ಲಿ ವಿಷ್ಣುದೀಪೋತ್ಸವದ ಹಿನ್ನೆಲೆ ಮಂಟಪ ವಾಹನೋತ್ಸವ ಜರುಗಿತು.  ಡಿ.5ರಿಂದ ಜನವರಿ ಮೊದಲ ವಾರದವರೆಗೆ ಮೇಲುಕೋಟೆಯಲ್ಲಿ ಯಾವುದೇ ಉತ್ಸವಗಳು ನಡೆಯುವುದಿಲ್ಲ. ಕೋಟರೋತ್ಸವ ಪ್ರಾರಂಭವಾಗುವವರೆಗೆ ಬೆಳಿಗ್ಗೆ ಪೂಜಾ ವಿಧಿವಿಧಾನಗಳು ಮತ್ತು ಮಧ್ಯಾಹ್ನ ಸಂಕ್ರಾಂತಿಯವರೆಗೆ ಮುಂದುವರಿಯುತ್ತದೆ. ಎಂದಿನಂತೆ ಬೆಳಗ್ಗೆ 9.30ರ ನಂತರವೂ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ದರ್ಶನ ಮುಂದುವರಿಸಲಾಗುವುದು ಎಂದು ದೇವಸ್ಥಾನದ ಇಒ ಶೀಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.